ಗುರುವಾರ , ಆಗಸ್ಟ್ 18, 2022
24 °C
ಆರೋಗ್ಯ ಸುಧಾರಣೆಗೆ ಯೋಗ ಅತ್ಯಗತ್ಯ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

ಸಾಮೂಹಿಕ ಯೋಗಕ್ಕೆ ನಿರ್ಬಂಧ; ಆನ್‌ಲೈನ್‌ಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿಯ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ನಡೆಯುತ್ತಿದ್ದ ಸಾಮೂಹಿಕ ಯೋಗ ಎರಡನೇ ವರ್ಷವೂ ರದ್ದಾಗಿದೆ. ಕೋವಿಡ್‌ ಕಾರಣಕ್ಕೆ ಆನ್‌ಲೈನ್‌ ಮೂಲಕ ಮನೆಯಿಂದಲೇ ಆಚರಿಸಲು ಆದ್ಯತೆ ನೀಡಲಾಗುತ್ತಿದೆ.

ಜಿಲ್ಲಾ ಆಯುಷ್‌ ಇಲಾಖೆ, ಯೋಗ ಸಂಘ–ಸಂಸ್ಥೆಗಳು ಆನ್‌ಲೈನ್‌ ಮೂಲಕವೇ ಆಚರಿಸುವಂತೆ ಮನವಿ ಮಾಡುತ್ತಿವೆ. ಯೋಗ ದಿನದ ಅಂಗವಾಗಿ ಈಗಾಗಲೇ ಕೆಲ ಯೋಗ ಸಂಸ್ಥೆಗಳು ಆನ್‌ಲೈನ್‌ ಮೂಲಕ ಉಚಿತ ಯೋಗ ತರಬೇತಿ ನೀಡುತ್ತಿವೆ.

ಯೋಗ ದಿನಾಚರಣೆ ಕಾರ್ಯಕ್ರಮವೂ ಜೂನ್ 21 ರಂದು ಬೆಳಿಗ್ಗೆ 6.45ಕ್ಕೆ ಆರಂಭವಾಗಿ 7.45ರ ವರೆಗೆ ನಡೆಯಲಿದೆ. ಈ ಆನ್‍ಲೈನ್ ಯೋಗಭ್ಯಾಸದಲ್ಲಿ ಸಾರ್ವಜನಿಕರು ಭಾಗವಹಿಸಬಹುದು. ಸ್ವಾತಂತ್ರ್ಯೋತ್ಸವದ 75 ವರ್ಷಾಚರಣೆ ಅಂಗವಾಗಿ ಸ್ವಾತಂತ್ರ್ಯೋತ್ಸವ ಕುರಿತು ಉಪನ್ಯಾಸ ಆಯೋಜಿಸಲಾಗಿದೆ.

ಯೋಗಾಭ್ಯಾಸಕ್ಕಾಗಿ ಯುಟ್ಯೂಬ್‌ ಲಿಂಕ್‌ http://youtu.be/P5-MO-wcJsP ಸಂಪರ್ಕಿಸಬಹುದು. ಆಸಕ್ತರು ಮುದ್ರಿತ ವಿಡಿಯೊ ಕಾರ್ಯಕ್ರಮ ವೀಕ್ಷಿಸಲು https://youtu.be/nf5szPPp-yM, https://youtu.be/HBOWuLCfXOM, https://youtu.be/RX9C329WmBU ಲಿಂಕ್ ಬಳಸಿ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

ಯೋಗ ದಿನದ ಕುರಿತು ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ‘ಯೋಗಾಭ್ಯಾಸ ಮಾಡುವ ಮೂಲಕ ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಕೋವಿಡ್ ಪರಿಸ್ಥಿತಿಯಲ್ಲಿ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲೂ ಯೋಗ ಅತ್ಯಂತ ಸಹಕಾರಿಯಾಗಿದೆ’ ಎಂದು ಸಲಹೆ ನೀಡಿದರು.

‘ಸಭೆ-ಸಮಾರಂಭಕ್ಕೆ ನಿರ್ಬಂಧ ಇರುವ ಕಾರಣ ಸಾಮೂಹಿಕವಾಗಿ ಆಚರಿಸುತ್ತಿದ್ದ ಯೋಗಾ ಕಾರ್ಯಕ್ರಮಕ್ಕೆ ಅವಕಾಶ ಇಲ್ಲವಾಗಿದೆ. ಏಳನೇ ವಿಶ್ವ ಯೋಗ ದಿನದಲ್ಲಿ ಸಾರ್ವಜನಿಕರು ಮನೆಯಿಂದಲೇ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಪತಂಜಲಿ ಯೋಗಸಂಸ್ಥೆ, ಶ್ರೀಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಚಿತ್ರದುರ್ಗ ಯೋಗಸಂಸ್ಥೆ, ಸಿದ್ಧಿ ಸಮಾಜ ಯೋಗ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ, ರೋಟರಿ, ನೆಹರೂ ಯುವಕೇಂದ್ರ ಸೇರಿ ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಾಥ್‌ ನೀಡಲಿವೆ.

‘ಜಿಲ್ಲೆಯಲ್ಲಿನ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಯೋಗ ತರಬೇತಿ ಶಿಬಿರಗಳನ್ನು ಆನ್‌ಲೈನ್‌ ಮೂಲಕ ಆಯೋಜಿಸಲಾಗುತ್ತಿದೆ. ಅದಕ್ಕಾಗಿ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಯೋಗಾಸಕ್ತರು ಖಂಡಿತ ಇದರಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ಎಲ್. ವಿಶ್ವನಾಥ್ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ, ವಾರ್ತಾಧಿಕಾರಿ ಧನಂಜಯ, ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಶಿವಕುಮಾರ್, ಡಾ.ಉದಯಭಾಸ್ಕರ್, ಡಾ.ಕುಮಾರಸ್ವಾಮಿ, ಡಾ.ಪ್ರಶಾಂತ್, ರಘುವೀರ್, ಮುರುಳಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಇದ್ದರು.

* ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ಅಂದಿನ ಆನ್‌ಲೈನ್‌ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲು ಪ್ರೇರೆಪಿಸಲಾಗುವುದು. ಯೋಗದಿಂದ ಆರೋಗ್ಯ ವೃದ್ಧಿಯಾಗಲಿದ್ದು, ಇಲಾಖೆ ಸಹಕಾರ ನೀಡಲಿದೆ.

-ಜಿ.ರಾಧಿಕಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು