ಸೋಮವಾರ, ಅಕ್ಟೋಬರ್ 18, 2021
23 °C
ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಆರೋಪ

ಕಾಂಗ್ರೆಸ್‌ ಅಭಿವೃದ್ಧಿಗೆ ಬಿಜೆಪಿ ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರೂಪಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಬಿಜೆಪಿ ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಆರೋಪಿಸಿದರು.

ಇಲ್ಲಿನ 19 ಮತ್ತು 20 ವಾರ್ಡ್‌ನಲ್ಲಿ ಮಂಗಳವಾರ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಾಗೂ ಪ್ರಾಜೆಕ್ಟ್‌ ಪ್ರತಿನಿಧಿ ಸಭೆಯಲ್ಲಿ ಅವರು ಮಾತನಾಡಿದರು.

‘ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ, ವಾಲ್ಮೀಕಿ ಭವನ, ವಿಜ್ಞಾನ ಮತ್ತು ಕಲಾ ಕಾಲೇಜು ಕಟ್ಟಡ, ಕ್ರೀಡಾಂಗಣ ಹಾಗೂ ನೂತನ ಜಿಲ್ಲಾಧಿಕಾರಿ ಕಚೇರಿಗೆ ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಯೋಜನೆ ರೂಪುಗೊಂಡಿತ್ತು. ಅಗತ್ಯ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಕಾಂಗ್ರೆಸ್‌ ಸರ್ಕಾರ ಚಾಲನೆ ನೀಡಿತ್ತು’ ಎಂದು ಹೇಳಿದರು.

‘ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಕಾಂಗ್ರೆಸ್‌ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿತ್ತು. ಇಂತಹ ಯಾವುದಾದರು ಹೊಸ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದರೆ ಬಿಜೆಪಿ ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

ನಗರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಿಕಾಂತ್‌ ಮಾತನಾಡಿ, ‘ಕಾಂಗ್ರೆಸ್ ಪಕ್ಷ ನೀರಾವರಿ, ಅಣೆಕಟ್ಟು, ರಸ್ತೆ, ವಿಶ್ವವಿದ್ಯಾನಿಲಯ ನಿರ್ಮಿಸಿದೆ. ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿಪಡಿಸಿದೆ. ಮಾಹಿತಿ ಹಾಗೂ ತಂತ್ರಜ್ಞಾನ, ಪಂಚಾಯತ್ ರಾಜ್ ವ್ಯವಸ್ಥೆ, ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಿದೆ. ಸಹಕಾರಿ ಕ್ಷೇತ್ರ, ಬಿಸಿಊಟ ಯೋಜನೆ, ಮತದಾನ ಹಕ್ಕು, ವಿದ್ಯುತ್, ಕೈಗಾರಿಕೆ, ಉದ್ಯೋಗ ಖಾತ್ರಿ, ಅನ್ನಭಾಗ್ಯ ಯೋಜನೆ ರೂಪಿಸಿದೆ. ಸಾಲು ಸಾಲು ಜನಪರ ಯೋಜನೆಗಳನ್ನು ಕಾಂಗ್ರೆಸ್ ಕೊಟ್ಟಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಇತಿಹಾಸದ ಮುಂದೆ ಬಿಜೆಪಿ ಮಂಕಾಗುತ್ತಿದೆ. ಪ್ರಧಾನಮಂತ್ರಿಗೆ ಮುಂದಿನ ದಿನಗಳಲ್ಲಿ ಮತ್ತೆ ಹಳೆಯ ಟೀ ಅಂಗಡಿ ತೆರೆಯಬೇಕಾಗಿ ಬರಬಹುದು. ಗಾಂಧೀಜಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಗೋಡ್ಸೆ ಬೆಂಬಲಿಸಿದ್ದು ಸಂಘಪರಿವಾರ’ ಎಂದು ದೂರಿದರು.

20ನೇ ವಾರ್ಡ್ ಸದಸ್ಯರಾದ ಸಲ್ಮಾ, 19ನೇ ವಾರ್ಡ್ ಅಭ್ಯರ್ಥಿಯಾಗಿದ್ದ ಓಬಕ್ಕ, ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್, ಮುಖಂಡರಾದ ಎ.ಸಾಧಿಕ್‍ ಉಲ್ಲಾ, ಅಬ್ದುಲ್ ಜಬ್ಬಾರ್, ಗೋಪಿ, ಹಸನ್ ತಾಹೀರ್ ಇದ್ದರು.

***

ಬಿಜೆಪಿ ನಿನ್ನೆ–ಮೊನ್ನೆ ಅಧಿಕಾರಕ್ಕೆ ಬಂದಿರುವ ಕೂಸು. ಅವರಿಗೆ ಇತಿಹಾಸ, ಆಡಳಿತದ ಬಗ್ಗೆ ಸರಿಯಾದ ಗ್ರಹಿಕೆ, ಅರಿವು ಇಲ್ಲ. ಅಧಿಕಾರಕ್ಕೆ ಬಂದರೆ ಇನ್ನೂ ಹಲವು ಯೋಜನೆ ನೀಡಲಿದೆ.

ಹನುಮಲಿ ಷಣ್ಮುಖಪ್ಪ
ಕೆಪಿಸಿಸಿ ಕಾರ್ಯದರ್ಶಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು