ಶುಕ್ರವಾರ, ಅಕ್ಟೋಬರ್ 22, 2021
29 °C
ಕಾಂಗ್ರೆಸ್‌ ಕಾರ್ಯಕರ್ತರಿಗೆ ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ಸೂಚನೆ

ಬಿಜೆಪಿ ವೈಫಲ್ಯವನ್ನು ಮತದಾರರಿಗೆ ತಲುಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಶೂನ್ಯ ಸಾಧನೆ ಮಾಡಿದೆ. ಬಿಜೆಪಿಯ ಆಡಳಿತ ವೈಫಲ್ಯಗಳನ್ನು ಪ್ರತಿ ಮನೆಗೂ ತಲುಪಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಇಲ್ಲಿಗೆ ಸಮೀಪದ ಮಠದ ಕುರುಬರಹಟ್ಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಾಜೆಕ್ಟ್‌ ಪ್ರತಿನಿಧಿ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದರ ಜೊತೆಗೆ ಸಾಕಷ್ಟು ತ್ಯಾಗವನ್ನು ಕಾಂಗ್ರೆಸ್ ಮಾಡಿದೆ. ಜವಾಹರಲಾಲ್‌ ನೆಹರೂ ಅವರಿಂದ ಮನಮೋಹನ್‌ ಸಿಂಗ್‌ ವರೆಗೆ ಹಲವು ಪ್ರಧಾನಿಗಳ ಕಾಲದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಭವ್ಯ ಅಣೆಕಟ್ಟೆ, ಕಾರ್ಖಾನೆಗಳು ನಿರ್ಮಾಣವಾಗಿವೆ. ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಶೂನ್ಯ ಸಾಧನೆ ಮಾಡಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಯುವಸಮೂಹ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಜನರು ಕಿತ್ತೆಸೆಯಬೇಕು’ ಎಂದು ಮನವಿ ಮಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ. ಜಗದೀಶ್ ಮಾತನಾಡಿ, ‘ಮಹಾತ್ಮ ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಗೋಡ್ಸೆ ಸಂತತಿಗೆ ಸೇರಿದ ಬಿಜೆಪಿಗರಿಂದ ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ. 60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ದೇಶಕ್ಕೆ ನೀಡಿದ ಕೊಡುಗೆ ಅಪಾರ. 20 ಅಂಶಗಳ ಕಾರ್ಯಕ್ರಮ, ಪಂಚವಾರ್ಷಿಕ ಯೋಜನೆ ಅಭಿವೃದ್ಧಿಯ ಕ್ರಾಂತಿ ಮಾಡಿದವು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್‌.ನರಸಿಂಹರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್ ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಿಕಾಂತ್‌, ಮುಖಂಡರಾದ ಓ.ಶಂಕರ್, ಎ.ಎಂ. ಮರುಳಾರಾಧ್ಯ, ಮಹಡಿ ಶಿವಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು