ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ ಭವನ ನಿರ್ಮಾಣ ಶೀಘ್ರ

ಕಾಲಮಿತಿಯಲ್ಲಿ ಕಟ್ಟಡ ಪೂರ್ಣ: ಕಂದಾಯ ಸಚಿವ ಆರ್‌. ಅಶೋಕ್‌
Last Updated 3 ಸೆಪ್ಟೆಂಬರ್ 2021, 3:53 IST
ಅಕ್ಷರ ಗಾತ್ರ

ಚಿತ್ರದುರ್ಗ: ನೂತನ ಜಿಲ್ಲಾಡಳಿತ ಭವನದ ನಿರ್ಮಾಣ ಕಾರ್ಯವನ್ನು ಎರಡು ವಾರಗಳಲ್ಲಿ ಕೈಗೆತ್ತಿಕೊಂಡು ಮೊದಲ ಹಂತವನ್ನು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಈ ಕಟ್ಟಡ ನಿರ್ಮಾಣದಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಇಲ್ಲಿನ ಕುಂಚಿಗನಾಳ್‌ ಕಣಿವೆಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕಟ್ಟಡ ನಿರ್ಮಾಣಕ್ಕೆ ಗುರುತಿಸಿದ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸುಮಾರು 150 ವರ್ಷ ಹಳೆಯದು. ಪುರಾತನ ಕಟ್ಟಡವಾಗಿರುವ ಕಾರಣಕ್ಕೆ ನಿತ್ಯದ ಚಟುವಟಿಕೆಗೆ ಸ್ಥಳಾವಕಾಶದ ಕೊರತೆ ಉಂಟಾಗುತ್ತಿದೆ. ನೂತನ ಜಿಲ್ಲಾಡಳಿತ ಭವನಕ್ಕೆ ₹ 45 ಕೋಟಿ ವೆಚ್ಚದ ಕಾರ್ಯಯೋಜನೆ ರೂಪಿಸಲಾಗಿದೆ. ಈಗಾಗಲೇ ₹ 25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ನೂತನ ಕಟ್ಟಡಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಸೂಕ್ತವಾಗಿದೆ. ಎತ್ತರದ ಸ್ಥಳದಲ್ಲಿ ಕಟ್ಟಡ ಸುಂದರವಾಗಿ ಕಾಣಲಿದೆ. ಇದರ ಸುತ್ತ ಜನವಸತಿ ಶುರುವಾಗಲಿದೆ. ಈಗಾಗಲೇ ಹಲವು ಸರ್ಕಾರಿ ಕಟ್ಟಡ ಇಲ್ಲಿದ್ದು, ಮುಂದೆ ಇದೊಂದು ಉತ್ತಮ ಆಕರ್ಷಣೆಯ ಕೇಂದ್ರವಾಗಲಿದೆ. ಐದಾರು ಕಿ.ಮೀ. ದೂರದಿಂದ ಕಣ್ಮನ ಸೆಳೆಯಲಿದೆ. ನಗರದ ಹೊರಗೆ ಇರುವ ಕಾರಣಕ್ಕೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದರು.

‘ಕಟ್ಟಡ ನಿರ್ಮಾಣಕ್ಕೆ 18 ತಿಂಗಳು ಕಾಲಮಿತಿ ನಿಗದಿಪಡಿಸಲಾಗಿದೆ. ವರ್ಷದಲ್ಲಿ ಮುಗಿಸಿಕೊಡುವ ಆಶ್ವಾಸನೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ತಾಲ್ಲೂಕು ಕಚೇರಿ ಕೂಡ ಹಳೆಯದಾದ ಕಟ್ಟಡವಾಗಿದ್ದು, ಸಾಕಷ್ಟು ಸಮಸ್ಯೆಗಳಿವೆ. ನೂತನ ಜಿಲ್ಲಾಡಳಿತ ಕಚೇರಿ ಕಟ್ಟಡ ನಿರ್ಮಾಣವಾದರೆ ತಾಲ್ಲೂಕು ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ’ ಎಂದರು.

‘ಜಿಲ್ಲೆಗೆ ಮತ್ತೊಂದು ಕಂದಾಯ ಉಪವಿಭಾಗ ಬೇಕು ಎಂಬ ಪ್ರಸ್ತಾವ ಪರಿಶೀಲನೆ ಹಂತದಲ್ಲಿದೆ. ಉಪ ವಿಭಾಗಾಧಿಕಾರಿ ಕಚೇರಿಯ ಕಾರ್ಯದೊತ್ತಡವನ್ನು ನೋಡಿಕೊಂಡು ಇದಕ್ಕೆ ಅನುಮೋದನೆ ನೀಡಲಾಗುವುದು. ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಕಂದಾಯ ಉಪವಿಭಾಗದ ಅಗತ್ಯತೆ ಪರಿಶೀಲಿಸಲಾಗುವುದು’ ಎಂದು ಹೇಳಿದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ತಹಶೀಲ್ದಾರ್ ಸತ್ಯನಾರಾಯಣ, ಬಿಜೆಪಿ ಮುಖಂಡ ಶಿವಣ್ಣಾಚಾರ್ ಇದ್ದರು.

ಮಧ್ಯರಾತ್ರಿ ನಗರ ಪ್ರದಕ್ಷಿಣೆ

ಕಂದಾಯ ಸಚಿವ ಆರ್‌.ಅಶೋಕ್‌ ಅವರು ಬುಧವಾರ ಮಧ್ಯರಾತ್ರಿ ನಗರ ಪ್ರದಕ್ಷಿಣೆ ಮಾಡಿದ್ದಾರೆ. ನಗರದ ಪಾರಂಪರಿಕ ಕಟ್ಟಡ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.

‘ರಾತ್ರಿ 12ಕ್ಕೆ ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಮನೆ ಸೇರಿ ಹಲವು ಸ್ಥಳಗಳನ್ನು ವೀಕ್ಷಣೆ ಮಾಡಿದ್ದೇನೆ. ಜಿಲ್ಲಾಧಿಕಾರಿ ಮನೆಯ ಸಮೀಪ ಎಂಟು ಎಕರೆ ಭೂಮಿ ಲಭ್ಯವಿದೆ. ಈ ಭೂಮಿಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿರುವುದರಿಂದ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಿಲ್ಲ’ ಎಂದು ಸಚಿವರು ಮಾಹಿತಿ ನೀಡಿದರು. ಒನಕೆ ಓಬವ್ವ, ಮದಕರಿನಾಯಕ ಪ್ರತಿಮೆಗಳನ್ನು ಸಚಿವರು ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್‌

ಸಿಎಂ, ಸಚಿವರಿಗೆ ಹೊರಟ್ಟಿ ಪತ್ರ

ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡ ಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆದಿರುವ ಬಗ್ಗೆ ಸ್ಥಳೀಯರಿಂದ ದೂರು ಬಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಪತ್ರ ಬರೆದಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜೆಡಿಎಸ್‌ ಮುಖಂಡರ ನೇತೃತ್ವದಲ್ಲಿ ಇಂಗಳದಾಳ್‌ ಗ್ರಾಮ ಪಂಚಾಯಿತಿ ಸದಸ್ಯರು ಈಚೆಗೆ ಆರೋಪ ಮಾಡಿದ್ದರು. ಅಧಿಕಾರಿಗಳು ಹಾಗೂ ಖಾಸಗಿ ಕಂಪನಿಯೊಂದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

....

ಉದ್ದೇಶಿತ ಜಿಲ್ಲಾಡಳಿತ ಭವನದ ಸುತ್ತ ಸರ್ಕಾರಿ ಕಚೇರಿಗಳು ನಿರ್ಮಾಣವಾಗುತ್ತಿವೆ. ಜಿಟಿಟಿಸಿ ಕಟ್ಟಡ, ವಿದ್ಯಾರ್ಥಿನಿಲಯ ಇವೆ. ₹ 5 ಕೋಟಿ ವೆಚ್ಚದ ಇವಿಎಂ ಯಂತ್ರ ಸಂಗ್ರಹ ಕಟ್ಟಡವೂ ನಿರ್ಮಾಣವಾಗಲಿದೆ.

- ಸತೀಶ್‌ ಬಾಬು, ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT