ಸೋಮವಾರ, ಮಾರ್ಚ್ 30, 2020
19 °C
ವಾಣಿಜ್ಯ, ವಹಿವಾಟು ಬಂದ್, ಹೊರ ಬಂದವರಿಗೆ ಲಾಠಿ ರುಚಿ

ಹೊಳಲ್ಕೆರೆ: ವರ್ಷದ ತೊಡಕಿಗೆ ಕಹಿ ತಂದ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಕೊರೊನಾ ಹರಡುವ ಭೀತಿಯಲ್ಲಿ ಭಾರತ್ ಬಂದ್ ಘೋಷಿಸಿರುವ ಹಿನ್ನೆಲೆಯಲ್ಲಿ ಈ ವರ್ಷ ಯುಗಾದಿಯ ನಂತರದ ವರ್ಷತೊಡಕಿಗೆ ಅಡ್ಡಿಯಾಯಿತು.

ತಾಲ್ಲೂಕಿನಾದ್ಯಂತ ಮಾಂಸ ಮಾರಾಟ ನಿಷೇಧಿಸಿದ್ದರಿಂದ ಜನ ಪರದಾಡಿದರು. ಮಾಂಸ ಖರೀದಿಗೆ ಬಂದಿದ್ದ ಕೆಲವರು ಅಂಗಡಿ ಬಾಗಿಲು ಮುಚ್ಚಿದ್ದು ನೋಡಿ ವಾಪಸಾದರು. ಟಿಪ್ಪುನಗರದಲ್ಲಿ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ ಗ್ರಾಹಕರನ್ನು ಚದುರಿಸಿದರು. ಪಿಎಸ್ಐ ಸ್ವಾತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಕೆಲವರಿಗೆ ಲಾಠಿ ರುಚಿ ತೋರಿಸಿದರು. ನಂತರ ಟಿಪ್ಪು ನಗರ ಪ್ರವೇಶಿಸದಂತೆ ಮರದ ದಿಮ್ಮಿಗಳನ್ನು ಅಡ್ಡ ಇಟ್ಟು ರಸ್ತೆ ಬಂದ್ ಮಾಡಿಸಿದರು.

ಬುಧವಾರ ಚಂದ್ರ ದರ್ಶನ ಆಗದ ಹಿನ್ನೆಲೆಯಲ್ಲಿ ಗುರುವಾರ ವರ್ಷದ ತೊಡಕು ಮಾಡುವವರ ಸಂಖ್ಯೆಯೂ ಕಡಿಮೆ ಇತ್ತು. ಗುರುವಾರ ಸಂಜೆ ಚಂದ್ರದರ್ಶನ ಪಡೆದು, ಶುಕ್ರವಾರ ಮಾಂಸದೂಟ ಮಾಡಿದರಾಯ್ತು ಎಂದು ಕೆಲವರು ಸುಮ್ಮನಿದ್ದರು.

ಹೊರಬಂದವರಿಗೆ ಲಾಠಿ ಏಟು:

ಪೊಲೀಸರು ಪಟ್ಟಣದಲ್ಲಿ ಯಾವುದೇ ವಹಿವಾಟು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದರು. ಮೆಡಿಕಲ್ ಸ್ಟೋರ್, ತರಕಾರಿ ಅಂಗಡಿ ತೆರೆದಿದ್ದು ಬಿಟ್ಟರೆ ಬೇರೆ ಯಾವ ಅಂಗಡಿಗಳನ್ನೂ ತೆರೆಯಲು ಬಿಡಲಿಲ್ಲ. ಮನೆಯಿಂದ ಹೊರಬಂದವರಿಗೆ ಲಾಠಿ ರುಚಿ ತೋರಿಸುತ್ತಿದ್ದರು. ಇದರಿಂದ ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು. ಹಳ್ಳಿಗಳಲ್ಲಿ ಮಾತ್ರ ಹಬ್ಬದ ಸಂಭ್ರಮ ಕಂಡುಬಂತು.

ಗ್ರಾಮ ಪ್ರವೇಶಿಸದಂತೆ ಬೇಲಿ:

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹೊರಗಿನವರು ಪ್ರವೇಶಿಸದಂತೆ ರಸ್ತೆಗೆ ಅಡ್ಡಲಾಗಿ ಬೇಲಿ, ಮಣ್ಣು ಹಾಕಲಾಗಿತ್ತು. ರಾಷ್ಟ್ರೀಯ ಹೆದ್ದಾರಿ-13ರಿಂದ ಬಿ.ಜಿ.ಹಳ್ಳಿ ಪ್ರವೇಶಿಸದಂತೆ ರಸ್ತೆಗೆ ಅಡ್ಡಲಾಗಿ ಮಣ್ಣಿನ ರಾಶಿ ಹಾಕಲಾಗಿತ್ತು. ದುಮ್ಮಿ ಗೊಲ್ಲರಹಟ್ಟಿಯಲ್ಲೂ ಗ್ರಾಮ ಪ್ರವೇಶಿಸುವ ರಸ್ತೆಗೆ ಮುಳ್ಳಿನ ಪೊದೆಗಳನ್ನು ಹಾಕಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು