ಮಂಗಳವಾರ, ಜೂನ್ 2, 2020
27 °C
ಬೆಂಗಳೂರಿಗೆ ಉದ್ಯೋಗಕ್ಕೆ ಹೋಗಿದ್ದ ಜನ ಸ್ವಗ್ರಾಮಕ್ಕೆ ವಾಪಸ್‌

ಹೊಸದುರ್ಗ: ಹಳ್ಳಿಗಳಲ್ಲಿ ಹೆಚ್ಚಿದ ಕೊರೊನಾ ಆತಂಕ

ಎಸ್‌.ಸುರೇಶ್‌ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ತಾಲ್ಲೂಕಿನ ಬಹುತೇಕ ಹಳ್ಳಿಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದ ಜನರು ಕೊರೊನಾ ಭೀತಿಯಿಂದ ಸ್ವಗ್ರಾಮಗಳಿಗೆ ಮರಳಿರುವುದರಿಂದ ಹಳ್ಳಿಗಳಲ್ಲಿ ಕೊರೊನಾ ಆತಂಕದ ವಾತಾವರಣ ಸೃಷ್ಟಿಸಿದೆ.

ಕಳೆದ ಹತ್ತಾರು ವರ್ಷಗಳಿಂದ ಕಾಲ ಕಾಲಕ್ಕೆ ಸಮೃದ್ಧವಾಗಿ ಮಳೆ ಆಗದೆ ಇದ್ದಿದ್ದರಿಂದ ಅಂತರ್ಜಲ ಕುಸಿತವಾಗಿತ್ತು. ಹಲವೆಡೆ ತೆಂಗು, ಅಡಿಕೆ ತೋಟಗಳು ಒಣಗಿ ಹೋಗಿದ್ದವು. ಇದರಿಂದ ಹಳ್ಳಿಗಳಲ್ಲಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಾಗಿತ್ತು. ನಿರುದ್ಯೋಗದ ಸಮಸ್ಯೆ ಎದುರಾಗಿದ್ದರಿಂದ ಬಹುತೇಕ ಕೃಷಿಕ ವರ್ಗದವರು ತಮ್ಮ ಕುಟುಂಬದಲ್ಲಿ ಕೃಷಿ ಕಾರ್ಯಕ್ಕೆ ಒಬ್ಬರು ಅಥವಾ ಇಬ್ಬರನ್ನು ಮನೆಯಲ್ಲಿ ಬಿಟ್ಟು ಉಳಿದವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಿದ್ದರು.

‘ತಂದೆ,ತಾಯಿಯನ್ನು ಸಾಕಲು ಸಾಧ್ಯವಾಗದವರು, ಸಹೋದರರ ಜತೆಗೆ ಹೊಂದಾಣಿಕೆಯಿಂದ ಇರಲಾಗದವರು ಹಾಗೂ ಕೃಷಿ ಕೆಲಸ ಮಾಡಲಾಗದವರು ಬೆಂಗಳೂರಿನಲ್ಲಿ ಉದ್ಯೋಗ ಸಿಗುತ್ತದೆ ಎಂದು ಬಯಸಿ ವಲಸೆ ಹೋಗಿದ್ದರು. ತಾಲ್ಲೂಕಿನ ಸುಮಾರು 350 ಹಳ್ಳಿಗಳ ಪೈಕಿ 10,000ಕ್ಕೂ ಹೆಚ್ಚಿನ ಜನ ಬೆಂಗಳೂರಿಗೆ ಹೋಗಿದ್ದಾರೆ. ಈ ರೀತಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗದೇ ಇರುವ ಗ್ರಾಮ ತಾಲ್ಲೂಕಿನಲ್ಲಿ ಸಿಗುವುದು ಅತೀ ವಿರಳ’ ಎನ್ನುತ್ತಾರೆ ಕಂಚೀಪುರದ ಹಿರಿಯ ನಾಗರಿಕ ಪರುಶುರಾಮಪ್ಪ.

ಕೋವಿಡ್‌–19 ಸೋಂಕು ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಯುಗಾದಿ ಹಬ್ಬದ ನೆಪದಲ್ಲಿ ಸಾವಿರಾರು ಜನ  ಸ್ವಗ್ರಾಮಗಳತ್ತ ಬಂದಿದ್ದಾರೆ. ಐದಾರು ವರ್ಷಗಳಿಂದ ಸ್ವಂತ ಊರಿಗೆ ಬಾರದವರು ಈಗ ಬಂದಿರುವುದು ವಿಶೇಷ. ಲಾಕ್‌ಡೌನ್‌ ಪರಿಣಾಮ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್‌ ಆಗಿದ್ದರೂ ಕಳೆದ ಎರಡು ದಿನಗಳಿಂದ ಬಾಡಿಗೆ ಜೀಪ್‌, ಕಾರು, ಬೈಕ್‌ ಏರಿ ದುಪ್ಪಟ್ಟು ಚಾರ್ಜ್‌ ಕೊಟ್ಟು ಅಹೋರಾತ್ರಿ ಪೊಲೀಸರ ಕಣ್ತಪ್ಪಿಸಿ ಸ್ವಗ್ರಾಮಕ್ಕೆ ಬಂದಿದ್ದಾರೆ.

ತಾಲ್ಲೂಕಿನ ಶ್ರೀರಾಂಪುರ, ಮಾಡದಕೆರೆ, ಮತ್ತೋಡು, ಬಾಗೂರು, ಬೆಲಗೂರು, ಕಂಚೀಪುರ, ಬಲ್ಲಾಳಸಮುದ್ರ, ಲಕ್ಕಿಹಳ್ಳಿ ಸೇರಿ ಇನ್ನಿತರ ಗ್ರಾಮಗಳಿಗೆ ಬೆಂಗಳೂರು, ಕೇರಳದಿಂದ ಹೆಚ್ಚಿನ ಜನ ಬಂದಿದ್ದಾರೆ. ಅಪರೂಪಕ್ಕೆ ಊರಿಗೆ ಬಂದಿರುವವರು ಗ್ರಾಮದ ತಮ್ಮ ಸಂಬಂಧಿ ಹಾಗೂ ಪರಿಚಯಸ್ಥರ ಮನೆಗಳಿಗೆ ನಿರಾತಂಕವಾಗಿ ಹೋಗುತ್ತಿದ್ದಾರೆ. ಬೆಂಗಳೂರಿಗೆ ಹೋಗಿದ್ದವರು ಈಗ ನಮ್ಮೂರಿಗೆ ಬಂದು ನಮಗೂ ತೊಂದರೆ ಕೊಡುತ್ತಿದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಹಳ್ಳಿಯ ಜನರಲ್ಲಿ ಕೊರೊನಾ ಭೀತಿ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು