ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಮತ್ತೆ ನಾಲ್ವರು ಕೋವಿಡ್‌ ಗುಣಮುಖ

ಕೊರೊನಾ ಮುಕ್ತ ಜಿಲ್ಲೆಯತ್ತ ಕೋಟೆನಾಡು, ಉಳಿದವರು ಶೀಘ್ರ ಬಿಡುಗಡೆ
Last Updated 9 ಜೂನ್ 2020, 15:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಗುಣಮುಖರಾಗಿದ್ದು, ಮಂಗಳವಾರ ಬಿಡುಗಡೆಯಾದರು. ಇದರಿಂದ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದ ಎಲ್ಲ ಕೊರೊನಾ ಸೋಂಕಿತರು ಮನೆಗೆ ಮರಳಿದಂತಾಗಿದೆ.

ಕೊರೊನಾ ಸೋಂಕು ದೃಢಪಟ್ಟಿದ್ದ ಉತ್ತರಪ್ರದೇಶದ ಕಾರ್ಮಿಕರಾದ ಪಿ–2237, ಪಿ–2248, ಪಿ– 2253 ಹಾಗೂ ಒಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ ಪಿ.2831 ಕೋವಿಡ್‌ ಗುಣಮುಖದವರು. ಕಾರ್ಮಿಕರನ್ನು ಚಳ್ಳಕೆರೆಗೆ ಹಾಗೂ ಕಾನ್‌ಸ್ಟೆಬಲ್‌ ಸೊಂಡೆಕೊಳ ಗ್ರಾಮಕ್ಕೆ ತೆರಳಿದರು.

ಚಳ್ಳಕೆರೆಯ ಕೊರೊನಾ ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ ಇನ್ನೂ 12 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಗುಣಮುಖರಾಗಿದ್ದು, ಪ್ರಯೋಗಾಲಯದ ಖಚಿತತೆಗೆ ಆರೋಗ್ಯ ಇಲಾಖೆ ಕಾಯುತ್ತಿದೆ. ಪ್ರಯೋಗಾಲಯದ ವರದಿ ಬುಧವಾರ ಕೈಸೇರುವ ನಿರೀಕ್ಷೆ ಇದ್ದು, ಅಂದೇ ಕೇರ್‌ ಸೆಂಟರ್‌ನಿಂದ ಬಿಡುಗಡೆ ಹೊಂದುವ ಸಾಧ್ಯತೆ ಇದೆ.

ಸೋಂಕು ಮುಕ್ತರಿಗೆ ಹೂಮಳೆ:

ಸೋಂಕಿನಿಂದ ಮುಕ್ತರಾದ ನಾಲ್ವರು ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಹೂಮಳೆ ಸುರಿಸಲಾಯಿತು. ಪೊಲೀಸ್‌ ಕಾನ್‌ಸ್ಟೆಬಲ್‌ ಸ್ವಾಗತಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರೇ ಆಸ್ಪತ್ರೆಗೆ ಬಂದಿದ್ದರು. ಪ್ರತಿಯೊಬ್ಬರಿಗೂ ಹೂಗುಚ್ಛ ನೀಡಿ ಶುಭಕೋರಲಾಯಿತು.

ಮೇ 15ರಂದು ಪರಶುರಾಂಪುರ ಸಮೀಪದ ಕಂಟೇನರ್‌ನಲ್ಲಿ ಪತ್ತೆಯಾಗಿದ್ದ ಉತ್ತರಪ್ರದೇಶದ ಕಾರ್ಮಿಕರನ್ನು ಚಳ್ಳಕೆರೆಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಈ ಪೈಕಿ ಕೆಲವರಲ್ಲಿ ಸೋಂಕು ದೃಢಪಟ್ಟಿತ್ತು. ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಬ್ಬರು ಈ ಹಿಂದೆಯೇ ಬಿಡುಗಡೆ ಹೊಂದಿದ್ದರು.

‘ಉತ್ತರಪ್ರದೇಶದ ಎಲ್ಲ ಕಾರ್ಮಿಕರು ಸೋಂಕು ಮುಕ್ತರಾದ ಬಳಿಕ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಚಳ್ಳಕೆರೆಯ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಜ್ವರ, ಕೆಮ್ಮು, ನೆಗಡಿಯಂಥ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ.ಬಸವರಾಜಪ್ಪ ತಿಳಿಸಿದರು.

ಕಾನ್‌ಸ್ಟೆಬಲ್‌ ಗುಣಮುಖ:ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) 27 ವರ್ಷದ ಕಾನ್‌ಸ್ಟೆಬಲ್‌ ಕೊರೊನಾ ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ. ಇವರು ಗ್ರಾಮಕ್ಕೆ ಮರಳಿದ್ದು, 14 ದಿನಗಳ ಗೃಹ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ ಬಳಿಕ ಕರ್ತವ್ಯಕ್ಕೆ ಮರಳಬಹುದಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಸೊಂಡೆಕೊಳದ ಕಾನ್‌ಸ್ಟೆಬಲ್‌ ಹಾಸನದ ಕೆಎಸ್‌ಆರ್‌ಪಿ ಬೆಟಾಲಿಯನ್‌ನಲ್ಲಿದ್ದರು. ಇವರನ್ನು ಬೆಂಗಳೂರಿನ ಅತ್ತಿಬೆಲೆ ಚೆಕ್‌ಪೋಸ್ಟ್‌ಗೆ ನಿಯೋಜಿಸಲಾಗಿತ್ತು. ಮೇ 7ರಿಂದ 17ರವರೆಗೆ ಕರ್ತವ್ಯನಿರ್ವಹಿಸಿದ್ದ ಕಾನ್‌ಸ್ಟೆಬಲ್‌, ಗ್ರಾಮಕ್ಕೆ ಮರಳಿ ಕ್ವಾರಂಟೈನ್‌ನಲ್ಲಿದ್ದಾಗ ಸೋಂಕು ಪತ್ತೆಯಾಗಿತ್ತು.

ಜಿಲ್ಲೆಯಲ್ಲಿ ಮಾರ್ಚ್‌ 24ರಂದೇ ಮೊದಲ ಸೋಂಕು ಪತ್ತೆಯಾಗಿತ್ತು. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆ ಗುಣಮುಖರಾಗಿದ್ದರು. ಗುಜರಾತಿನಿಂದ ಬಂದ ತಬ್ಲಿಗಿ ಜಮಾತ್‌ ಸದಸ್ಯರಲ್ಲಿ ಸೋಂಕು ಪತ್ತೆಯಾಗಿತ್ತು. ತಮಿಳುನಾಡಿನಿಂದ ಉತ್ತರಪ್ರದೇಶಕ್ಕೆ ಹೊರಟಿದ್ದ ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೊಳಲ್ಕೆರೆ ತಾಲ್ಲೂಕಿನ ಬಾಲಕಿಯೊಬ್ಬರು ಉಡುಪಿ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT