ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮಾನಸಿಕ ತಳಮಳ ಹೆಚ್ಚಿಸಲಿದೆ ಲಾಕ್‌ಡೌನ್‌

ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಆತಂಕ, ಹೊರಗೆ ಸಂಚರಿಸದಂತೆ ಜನರಿಗೆ ನಿರ್ಬಂಧ
Last Updated 4 ಮೇ 2021, 5:25 IST
ಅಕ್ಷರ ಗಾತ್ರ

ಚಿತ್ರದುರ್ಗ: ನಿತ್ಯ ಇಷ್ಟವಾದ ಕಡೆಗೆ ಸಂಚರಿಸಿ ಮನಸಿನ ಭಾರವನ್ನು ಇಳಿಸಿಕೊಳ್ಳುತ್ತಿದ್ದವರಿಗೆ ಲಾಕ್‌ಡೌನ್‌ ನಿರ್ಬಂಧ ವಿಧಿಸಿದೆ. ನಾಲ್ಕು ಗೋಡೆಯ ನಡುವೆ ಕಾಲ ಕಳೆಯುವುದು ಮಾನಸಿಕ ತಳಮಳವನ್ನು ಹೆಚ್ಚಿಸುವ ಆತಂಕ ಸೃಷ್ಟಿಯಾಗಿದೆ.

ಇದರಿಂದ ಮಾನಸಿಕ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಬಹುದು ಎಂಬುದು ಮನೋವೈದ್ಯರ ಲೆಕ್ಕಾಚಾರ. ಕಳೆದ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿ ಎದುರಾದ ಇಂತಹ ಪರಿಸ್ಥಿತಿಯ ಆಧಾರದ ಮೇರೆಗೆ ವೈದ್ಯರು ಈ ನಿರ್ಧಾರಕ್ಕೆ ಬಂದಿದ್ದಾರೆ.

‘ಕಳೆದ ವರ್ಷ ಇದೇ ಸಂದರ್ಭದಲ್ಲಿ ಮಾನಸಿಕ ಸಮಸ್ಯೆ ಉಲ್ಬಣವಾಗಿತ್ತು. ಮನೆಯಲ್ಲೇ ಕಾಲ ಕಳೆಯುವುದು ಅನೇಕರಿಗೆ ಕಷ್ಟವಾಗಿತ್ತು. ಇದು ಬೇರೆ ಬೇರೆ ಸ್ವರೂಪದಲ್ಲಿ ವ್ಯಕ್ತವಾಗಿತ್ತು. ಮತ್ತೆ ಇದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಕೋವಿಡ್‌ ರೋಗಿಗಳು ಇರುವ ಮನೆಯಲ್ಲಿ ಈ ಸಮಸ್ಯೆ ಹೆಚ್ಚು. ಹೀಗಾಗಿ, ಟೆಲಿ ಕೌನ್ಸೆಲಿಂಗ್ ಸೇವೆಯನ್ನು ಪುನಾ ಆರಂಭಿಸಿದ್ದೇವೆ’ ಎನ್ನುತ್ತಾರೆ ಮನೋವೈದ್ಯ ಡಾ.ಆರ್‌. ಮಂಜುನಾಥ್‌.

‘ಕುಟುಂಬದ ಸದಸ್ಯರೊಂದಿಗೆ ಬಲವಾದ ಭಿನ್ನಾಭಿಪ್ರಾಯ ಹೊಂದಿದವರೂ ಒಟ್ಟಿಗೆ ಇರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಷ್ಟವಿಲ್ಲದಿದ್ದರೂ ಜೊತೆಗೆ ಇರಬೇಕಿದೆ. ತಂದೆ–ಮಗ, ಗಂಡ– ಹೆಂಡತಿ... ಇಂತಹ ಸಂಬಂಧದಲ್ಲಿ ಮಾತಿನ ಚಕಮಕಿ, ಜಗಳ ಹೆಚ್ಚಾಗುತ್ತವೆ’ ಎನ್ನುತ್ತಾರೆ ಅವರು.

‘ಅನೇಕ ಕುಟುಂಬಗಳಲ್ಲಿ ದೈಹಿಕವಾಗಿ ಒಂದೆಡೆ ಇರುತ್ತಾರೆ. ಆದರೆ, ಮಾನಸಿಕವಾಗಿ ದೂರವಾಗಿರುತ್ತಾರೆ. ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಇದರಿಂದ ಕೌಟುಂಬಿಕ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಒಬ್ಬರ ಜೀವನದಲ್ಲಿ ಮತ್ತೊಬ್ಬರು ಭಾವನಾತ್ಮಕವಾಗಿ ಪಾಲ್ಗೊಳ್ಳುವುದು ಕಡಿಮೆ ಆಗುತ್ತದೆ. ತಂದೆ–ತಾಯಿ ಬಗೆಗಿನ ಪ್ರೀತಿ, ಗೌರವ ಉಳಿಯಲು ಸಾಧ್ಯವಿಲ್ಲ’ ಎನ್ನುತ್ತಾರೆ ಮನೋವೈದ್ಯರು.

‘ಇಂತಹ ಸಂದರ್ಭದಲ್ಲಿ ಕೃತಕ ಸಂಬಂಧ ನಿರ್ಮಾಣವಾಗುತ್ತವೆ. ಹೊರಗಿನ ಸಮಾಜಕ್ಕೆ ತೋರಿಸಿಕೊಳ್ಳುವ ಉದ್ದೇಶದಿಂದ ನಟನೆ ಮಾಡುತ್ತಾರೆ. ಭಾವನೆಗಳ ಒರತೆ ಬತ್ತಿ ಹೋದಾಗ ಸ್ವಾರ್ಥ ಭಾವ ಹೆಚ್ಚಾಗಿ, ವಿಚಿತ್ರ ವ್ಯಕ್ತಿತ್ವ ಬೆಳೆಯುವ ಸಾಧ್ಯತೆ ಇರುತ್ತದೆ. ನಗರ ಪ್ರದೇಶದ ಶ್ರೀಮಂತ ಕುಟುಂಬದಲ್ಲಿ ಇದನ್ನು ಈಗಲೇ ಕಾಣುತ್ತಿದ್ದೇವೆ. ಹಣವನ್ನು ಸುಲಭವಾಗಿ ಹೊಂದಿಸಿ ನೀಡುತ್ತಾರೆ. ಆದರೆ, ಭಾವನೆಗಳು ನೈಜವಾಗಿ ಹೊರಬರುವುದಿಲ್ಲ’ ಎಂಬುದು ಇವರ ವಿಶ್ಲೇಷಣೆ.

‘ಪ್ರತಿಯೊಬ್ಬರಲ್ಲಿ ಸ್ವಪ್ರತಿಷ್ಠೆ ಬೆಳೆಯುವ ಸಾಧ್ಯತೆ ಇದೆ. ಮನಸಿನ ಭಾವನೆಗಳನ್ನು ಹೊರಗೆ ಹಾಕದೇ ಕೊಣೆಯೊಳಗೆ ಕೂಡಿ ಹಾಕಿದ ಅನುಭವವಾಗುತ್ತದೆ. ಇದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಆತ್ಮಹತ್ಯೆ ಪ್ರಯತ್ನವೂ ನಡೆಯಬಹುದು. ಒಂಟಿತನದಿಂದ ಹೊರಗೆ ಬರಲು ಮದ್ಯಪಾನ, ಧೂಮಪಾನ ಹಾಗೂ ಮಾದಕ ವಸ್ತುಗಳ ವ್ಯಸನಿಗಳಾಗಿ ಪರಿವರ್ತನೆ ಹೊಂದುವ ಅಪಾಯವಿದೆ. ಇದರಿಂದ ಮನಸು ಹಾಗೂ ಆರೋಗ್ಯ ಎರಡೂ ಹಾಳಾಗುತ್ತವೆ’ ಎನ್ನುತ್ತಾರೆ.

*
ಕಳೆದ ಲಾಕ್‌ಡೌನ್‌ ಅವಧಿಯಲ್ಲಿ ಮಾನಸಿಕ ಸಮಸ್ಯೆ ನಿಧಾನವಾಗಿ ಶುರುವಾಗಿ ಬಳಿಕ ಕರಗಿ ಹೋಯಿತು. ಮೊದಲ ಅಲೆ ಸಣ್ಣ ಪ್ರಮಾಣದಲ್ಲಿತ್ತು. ಎರಡನೇ ಅಲೆ ಎಷ್ಟು ಸಮಸ್ಯೆ ಸೃಷ್ಟಿಸಲಿದೆ ಎಂಬುದು ಇನ್ನೂ ಗೊತ್ತಿಲ್ಲ.
-ಡಾ.ಆರ್‌. ಮಂಜುನಾಥ್‌, ಮನೋವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT