ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆಗೆ ಪ್ರಯೋಗಾಲಯ ಕೊರತೆ

ಜಿಲ್ಲಾ ಆಸ್ಪತ್ರೆ, ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಮಾತ್ರ ಪರೀಕ್ಷೆ
Last Updated 26 ಏಪ್ರಿಲ್ 2021, 13:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿತರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಪರೀಕ್ಷಿಸಲು ಜಿಲ್ಲೆಯಲ್ಲಿ ಆರ್‌ಟಿ–ಪಿಸಿಆರ್‌ ಪ್ರಯೋಗಾಲಯದ ಕೊರತೆ ಕಾಡುತ್ತಿದೆ. ನಿತ್ಯ ಸರಾಸರಿ ಎರಡು ಸಾವಿರ ಮಾದರಿಗಳನ್ನು ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ.

ಜಿಲ್ಲಾ ಆಸ್ಪತ್ರೆ ಹಾಗೂ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಆರ್‌ಟಿ–ಪಿಸಿಆರ್‌ ಪ್ರಯೋಗಾಲಯ ಇವೆ. ಜಿಲ್ಲಾ ಆಸ್ಪತ್ರೆಯ ಲ್ಯಾಬಿನಲ್ಲಿ ನಿತ್ಯ ಸರಾಸರಿ 1,500 ಮಾದರಿಗಳನ್ನು ಪರೀಕ್ಷಿಸಲು ಸಾಧ್ಯವಿದೆ. ಉಳಿದವನ್ನು ಖಾಸಗಿ ಪ್ರಯೋಗಾಲಯಕ್ಕೆ ರವಾನೆ ಮಾಡಬೇಕಿದೆ. ಜಿಲ್ಲೆಯಲ್ಲಿ ನಿತ್ಯ ಸರಾಸರಿ ಎರಡು ಸಾವಿರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.

ಕೊರೊನಾ ಸೋಂಕು ಪತ್ತೆಗೆ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಸೂಚನೆ ನೀಡಿದೆ. ದಿನಕ್ಕೆ ಕನಿಷ್ಠ 1,600 ಮಾದರಿ ಸಂಗ್ರಹಿಸುವಂತೆ ಗುರಿ ನಿಗದಿ ಮಾಡಿದೆ. ಗಂಟಲು ಮತ್ತು ಮೂಗಿನ ದ್ರವದ ಮಾದರಿ ಸಂಗ್ರಹಕ್ಕೆ ಜಿಲ್ಲೆಯಲ್ಲಿ 25 ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯ 86 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಮಾದರಿ ಸಂಗ್ರಹಕ್ಕೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಆದರೆ, ಈ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವುದು ಮಾತ್ರ ಸವಾಲಾಗಿದೆ.

ಸೋಂಕಿತರನ್ನು ತ್ವರಿತವಾಗಿ ಪತ್ತೆ ಮಾಡಿದರೆ ಕೋವಿಡ್‌ ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂಬುದು ತಜ್ಞರ ಅಭಿಪ್ರಾಯ. ಇದಕ್ಕೆ ಅನುಗುಣವಾಗಿ ಮಾದರಿ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಸರ್ವ ರೀತಿಯಲ್ಲಿ ಸಜ್ಜಾಗಿದೆ. ಆದರೆ, ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ.

ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಶಿವಮೊಗ್ಗಕ್ಕೆ ಮಾದರಿ ಕಳುಹಿಸಲಾಗುತ್ತಿತ್ತು. ಬೆಂಗಳೂರು, ದಾವಣಗೆರೆ ಹಾಗೂ ಬಳ್ಳಾರಿಯ ಪ್ರಯೋಗಾಲಯಗಳನ್ನು ಅಲಂಬಿಸಲಾಗಿತ್ತು. 2020ರ ಆ.30ರಂದು ಜಿಲ್ಲಾ ಆಸ್ಪತ್ರೆಯಲ್ಲೇ ಆರ್‌ಟಿ–ಪಿಸಿಆರ್‌ ಪ್ರಯೋಗಾಲಯ ಆರಂಭವಾಗಿದೆ. ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಇದು ಕೂಡ ಸಾಕಾಗುತ್ತಿಲ್ಲ. ಇದರಿಂದ ಮಾದರಿ ಸಂಗ್ರಹಗಳ ಪ್ರಮಾಣವೂ ಹೆಚ್ಚಳವಾಗುತ್ತಿಲ್ಲ.

ಕೋವಿಡ್ ಪರೀಕ್ಷೆಯ ಸಾಮರ್ಥ್ಯ ವೃದ್ಧಿಯಾಗದ ಪರಿಣಾಮ ಸೋಂಕಿತರಿಗೆ ವರದಿ ತಲುಪುವುದು ವಿಳಂಬವಾಗುತ್ತಿದೆ. ನಿತ್ಯ ಸಾವಿರಕ್ಕೂ ಹೆಚ್ಚು ಮಾದರಿಗಳ ಪರೀಕ್ಷೆ ಬಾಕಿ ಉಳಿಯುತ್ತಿದೆ. ಪರೀಕ್ಷೆಯ ವರದಿಗೆ ಜನರು ಕಾಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ, ಈ ಆರೋಪವನ್ನು ಆರೋಗ್ಯ ಇಲಾಖೆ ತಳ್ಳಿ ಹಾಕುತ್ತಿದೆ.

‘ಕೋವಿಡ್ ಪರೀಕ್ಷೆಯಲ್ಲಿ ವಿಳಂಬ ಆಗುತ್ತಿಲ್ಲ. ತ್ವರಿತವಾಗಿ ಪರೀಕ್ಷೆಗೆ ಒಳಪಡಿಸುವ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಮಾದರಿ ಸಂಗ್ರಹಿಸಿದ 8 ಗಂಟೆಯ ಒಳಗೆ ಪರೀಕ್ಷೆಯ ವರದಿ ಒದಗಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ.

‘ತಾಲ್ಲೂಕಿಗೂ ಬೇಕು ಲ್ಯಾಬ್‌’

ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಮಾತ್ರ ಕೊರೊನಾ ಸೋಂಕಿತರನ್ನು ತ್ವರಿತವಾಗಿ ಪತ್ತೆ ಮಾಡಲು ಸಾಧ್ಯ. ಹೀಗಾಗಿ, ಪ್ರತಿ ತಾಲ್ಲೂಕಿನಲ್ಲೂ ಆರ್‌ಟಿ–ಪಿಸಿಆರ್‌ ಪ್ರಯೋಗಾಲಯದ ಅಗತ್ಯವಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

‘ಸೋಂಕು ತೀವ್ರವಾಗಿ ಹಬ್ಬುತ್ತಿದೆ. ಜಿಲ್ಲೆಯ ಎಲ್ಲರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಸೋಂಕು ಹರುಡುವುದಕ್ಕೆ ಕಡಿವಾಣ ಬೀಳಲಿದೆ. ಪ್ರಯೋಗಾಲಯ ಸ್ಥಾಪನೆಗೆ ಅಗತ್ಯ ಪ್ರಸ್ತಾವವನ್ನು ಆರೋಗ್ಯ ಇಲಾಖೆ ನೀಡಬೇಕು’ ಎಂದು ಹೇಳಿದರು.

ಸರ್ಕಾರ ನಿಗದಿಪಡಿಸಿದ ಮಾದರಿಗಳ ಸಂಗ್ರಹ ಹಾಗೂ ಪರೀಕ್ಷೆ ಸರಾಗವಾಗಿ ನಡೆಯುತ್ತಿದೆ. ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕವೂ ನಿತ್ಯ ಸುಮಾರು 200 ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ.

–ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT