ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಶೇಂಗಾ ಇಳುವರಿ, ರೈತರ ಆತಂಕ

ಮೊಳಕಾಲ್ಮುರು: ಕೈಕೊಟ್ಟ ಮಘೆ ಮಳೆ, ಬಂಡವಾಳ ಬಾರದ ಸ್ಥಿತಿ
Last Updated 12 ಅಕ್ಟೋಬರ್ 2020, 8:18 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಆಗಿರುವ ಶೇಂಗಾ ತೀವ್ರ ಇಳುವರಿ ಕೊರತೆ ಎದುರಿಸುತ್ತಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.

ತಾಲ್ಲೂಕು ಮಳೆಯಾಶ್ರಿತ ಕೃಷಿಯನ್ನು ಅವಲಂಬಿಸಿದೆ. ಇಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯನ್ನು ನಂಬಿಕೊಂಡು ವಾರ್ಷಿಕ ಒಂದು ಬೆಳೆಯನ್ನು ಮಾತ್ರ ತೆಗೆಯಲಾಗುತ್ತದೆ. ಅನೇಕ ದಶಕಗಳಿಂದ ಇಲ್ಲಿ ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮಿದೆ.

ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಗಿರೀಶ್ ‘ಪ್ರಜಾವಾಣಿ’ ಜತೆ ಮಾತನಾಡಿ, ‘ತಾಲ್ಲೂಕಿನಲ್ಲಿ ಈ ವರ್ಷ ಮಳೆ ಮುಂಚಿತವಾಗಿ ಬಂದ ಕಾರಣ ಜೂನ್ ಅಂತ್ಯ ಹಾಗೂ ಜುಲೈ ಆದಿಯಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 32,000 ಹೆಕ್ಟೇರ್ ಬಿತ್ತನೆ ಗುರಿಗೆ 28,000 ಹೆಕ್ಟೇರ್ ವಿಸ್ತೀರ್ಣದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. 5 ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ವರ್ಷ ಹೆಚ್ಚಿನ ರೈತರು ಶೇಂಗಾ ಬಿತ್ತನೆ ಮಾಡಿದ್ದಾರೆ. ಇದಕ್ಕೆ ಮಳೆ ಮುಂಚಿತವಾಗಿ ಬಂದಿದ್ದು ಒಂದು ಕಾರಣ’ ಎಂದು ಹೇಳಿದರು.

‘ಆರಂಭದಲ್ಲಿ ಒಂದು ತಿಂಗಳು ಬೆಳೆ ಉತ್ತಮವಾಗಿ ಇತ್ತು. ಆದರೆ, ಮಗಿ (ಮಘೆ) ಮಳೆ ಕೈಕೊಟ್ಟ ಪರಿಣಾಮ ಪ್ರಥಮ ಹಂತದ ಹೂಡು (ಹೂ) ನೆಲಕ್ಕೆ ಇಳಿಯಲಿಲ್ಲ. ಇದನ್ನು ಸುಧಾರಿಸಿಕೊಳ್ಳುವ ಹೊತ್ತಿಗೆ ಕಳೆದ ತಿಂಗಳು ಮಳೆ ಹೆಚ್ಚಾಗಿ ಗಿಡಗಳು ಎತ್ತರಕ್ಕೆ ಬೆಳೆದವು. ಆದರೆ, ಇನ್ನೊಂದು ಬೀಡಿನ ಹೂವುಗಳು ನೆಲಕ್ಕೆ ಹೋಗಲಿಲ್ಲ. ನೋಡಲಿಕ್ಕೆ ಗಿಡಗಳು ಎತ್ತರಕ್ಕೆ ಬೆಳೆದು ದಷ್ಟಪುಷ್ಟವಾಗಿವೆ. ಆದರೆ, 3-4 ಕಾಯಿ ಸಹ ಹಿಡಿದಿಲ್ಲ. ತಾಲ್ಲೂಕಿನ ಬಹುತೇಕ ಎಲ್ಲ ಕಡೆ ಇದೇ ಸಮಸ್ಯೆ ಕಾಣಸಿಗುತ್ತದೆ’ ಎಂದು ತಿಳಿಸಿದರು.

‘ಆರೋಗ್ಯಪೂರ್ಣವಾಗಿ ಪ್ರತಿ ಗಿಡದಲ್ಲಿ 15-20 ಕಾಯಿಗಳು ಇದ್ದಲ್ಲಿ ಹಾಕಿದ ಬಂಡವಾಳ ವಾಪಸ್ ಬರುತ್ತದೆ. ಈ ಆಧಾರದಲ್ಲಿ ಈ ವರ್ಷ ಬೆಳೆ ನಷ್ಟವಾಗುವ ಸಾಧ್ಯತೆ ಕಾಣತೊಡಗಿದೆ. ಫಸಲ್ ಬಿಮಾ ಯೋಜನೆ ನಾಲ್ಕು ಹಂತಗಳ ಪೈಕಿ ಇಳುವರಿ ಅಂಶದಲ್ಲಿ ಇದನ್ನು ದಾಖಲಿಸಲಾಗುವುದು. ಇದರಿಂದ ವಿಮೆ ಕಟ್ಟಿದ ರೈತರಿಗೆ ಪರಿಹಾರ ಸಿಗಲು ಅನುಕೂಲವಾಗಲಿದೆ’ ಎಂದು ಗಿರೀಶ್ ಮಾಹಿತಿ ನೀಡಿದರು.

ರೈತ ಪಾಪಯ್ಯ ಮಾತನಾಡಿ, ‘ಹೂವಿಗೆ ಮಸಿ ರೋಗ ಬಿದ್ದಿದೆ. ಹೂವು ಹಾಳಾಗುವ ಜತೆಗೆ ಈಗ ಬೂದಿ ರೋಗ ಕಾಣಿಸಿಕೊಳ್ಳುತ್ತಿದೆ. ಇದು ಬಳ್ಳಿಯನ್ನು ಕಪ್ಪಾಗಿಸುತ್ತಿದೆ. ಶೇಂಗಾ ದರ ಬಿತ್ತನೆ ಸಮಯಕ್ಕೆ ಹೋಲಿಸಿದಲ್ಲಿ ಶೇ 50ರಷ್ಟಿದೆ. ಈಗ ₹150- ₹200 ಕೂಲಿ ಕೇಳುತ್ತಾರೆ. ಕಟಾವು ಮಾಡಿಸಿ ಕಾಯಿ ಬಿಡಿಸಿ ಮಾರಾಟ ಮಾಡಬೇಕು. ಬಂಡವಾಳ ವಾಪಸ್ ಬರುವುದಿಲ್ಲ. ಸತತವಾಗಿ 6-7 ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಸರ್ಕಾರ ನಮ್ಮ ಕಡೆ ತಿರುಗಿಯೂ ನೋಡುತ್ತಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT