ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ಯಾಂಕರ್‌ ನೀರು ಪೂರೈಕೆ ಕೊನೆ ಆಯ್ಕೆ: ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ
Published 5 ಮಾರ್ಚ್ 2024, 15:44 IST
Last Updated 5 ಮಾರ್ಚ್ 2024, 15:44 IST
ಅಕ್ಷರ ಗಾತ್ರ

ಚಿತ್ರದುರ್ಗ: ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಳಸಿಕೊಳ್ಳಬೇಕು. ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಅಗತ್ಯಬಿದ್ದರೆ ಪೈಪ್‌ಲೈನ್‌ ನಿರ್ಮಿಸಿ ಪೂರೈಕೆಗೆ ವ್ಯವಸ್ಥೆ ಕಲ್ಪಿಸಬೇಕು. ಟ್ಯಾಂಕರ್‌ ನೀರು ಪೂರೈಕೆ ಅಂತಿಮ ಆಯ್ಕೆಯಾಗಿರಲಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ ನೀಡಿದರು.

ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.

‘ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆ ಇರುವ ಗ್ರಾಮಗಳನ್ನು ಗುರುತಿಸಲಾಗಿದೆ. ಇಂತಹ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅಗತ್ಯ ಸಂದರ್ಭದಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಟ್ಯಾಂಕರ್‌ ನೀರು ಪೂರೈಕೆಗೆ ತಾಲ್ಲೂಕು ಮಟ್ಟದಲ್ಲಿ ಅಲ್ಪಾವಧಿ ಟೆಂಡರ್ ಕರೆದು ದರ ಅಂತಿಮಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ಪೂರೈಕೆಗೂ ಮುನ್ನವೇ ಟ್ಯಾಂಕರ್‌ ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು. ನೀರಿನ ಪರಿಶುದ್ಧತೆಯನ್ನು ಖಚಿತಪಡಿಸಿಕೊಂಡು ಪೂರೈಕೆ ಮಾಡಬೇಕು. ನೀರಿನ ಮೂಲ ಹಾಗೂ ವಿತರಣಾ ಸ್ಥಳದಲ್ಲಿ ನೀರಿನ ಮಾಲಿನ್ಯ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಬೇಕು. ನೀರು ಮಲಿನತೆಯಿಂದ ಕೂಡಿರುವುದು ಖಚಿತಪಟ್ಟರೆ ಪೂರೈಕೆ ನಿಲ್ಲಿಸಬೇಕು. ಮಾಲಿನ್ಯ ಪರೀಕ್ಷೆಯ ವಿವರಗಳನ್ನು ನಿಯಮಿತವಾಗಿ ವಿಶ್ಲೇಷಿಸಬೇಕು’ ಎಂದು ಹೇಳಿದರು.

‘ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜಂಟಿಯಾಗಿ ತಾಲ್ಲೂಕು ಮಟ್ಟದ ಸಮಸ್ಯೆಯನ್ನು ನಿಭಾಯಿಸಬೇಕು. ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಬೇಕು. ಬರ ಪರಿಹಾರ ಕಾರ್ಯಗಳ ವೆಚ್ಚಗಳನ್ನು ಪ್ರತಿ ವಾರಾಂತ್ಯಕ್ಕೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ 15 ದಿನಗಳಿಗಿಂತ ಮೇಲ್ಪಟ್ಟ ಬಿಲ್‍ಗಳು ಬಾಕಿ ಇರಬಾರದು’ ಎಂದರು.

‘ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ನಿಗಾ ಇರಬೇಕು. ನೀರು ಪೂರೈಕೆ ಮಾಡುವ ಕೊಳವೆಬಾವಿ, ನೀರಿನ ಪ್ರಮಾಣ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಅನಿವಾರ್ಯ ಸಂದರ್ಭ ಎದುರಾದರೆ ಮಾತ್ರ ಹೊಸ ಕೊಳವೆಬಾವಿ ಕೊರೆಸಬೇಕು. ಹಿರಿಯ ಭೂವಿಜ್ಞಾನಿಯ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಬೇಕು. ಓವರ್‌ಹೆಡ್‌ ಟ್ಯಾಂಕ್‌, ಟ್ಯಾಂಕರ್‌ಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ. ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಬಸವನಗೌಡ ಪಾಟೀಲ್ ಇದ್ದರು.

ಗೋಶಾಲೆ ಮೇವು ಬ್ಯಾಂಕ್‌ ಪ್ರಾರಂಭಿಸಬೇಕು. ಮೇವಿನ ಗುಣಮಟ್ಟವನ್ನು ಆಗಾಗ ಪರಿಶೀಲಿಸಬೇಕು. ಯಾವ ಸ್ಥಳದಿಂದ ಮೇವು ಬಂದಿದೆ ಎಂಬುದು ಗೊತ್ತಿರಬೇಕು

-ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ

ಸಹಾಯವಾಣಿಗೆ ಸೂಚನೆ

ತಾಲ್ಲೂಕು ವ್ಯಾಪ್ತಿಯಲ್ಲಿ ಬರಪರಿಹಾರ ಕಾರ್ಯಗಳ ಸಮರ್ಪಕ ಅನುಷ್ಠಾನಕ್ಕೆ 24X7 ಮಾದರಿಯಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು. ‘ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು ಜಾನುವಾರು ಮೇವು ಪೂರೈಕೆ ಸೇರಿ ಬರ ಪರಿಹಾರ ಕಾರ್ಯಗಳ ಬಗ್ಗೆ ಎಚ್ಚರಿಕೆ ಅಗತ್ಯ. ಪ್ರತಿವಾರ ಕಡ್ಡಾಯವಾಗಿ ತಾಲ್ಲೂಕು ಕಾರ್ಯಪಡೆ ಸಭೆ ನಡೆಸಬೇಕು. ಸಹಾಯವಾಣಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಿ ಕುಂದು ಕೊರತೆ ನಿವಾರಣೆಗೆ ಶ್ರಮಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT