ಶುಕ್ರವಾರ, ಏಪ್ರಿಲ್ 16, 2021
31 °C
ನಗರ ಸುತ್ತಿ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ

ರಸ್ತೆ ಒತ್ತುವರಿ ತೆರವಿಗೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಿ.ಡಿ.ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪ, ಬಂಜಾರ ಸಮುದಾಯ ಭವನ, ಕೆಎಸ್‍ಆರ್‌ಟಿಸಿ ರಸ್ತೆಯಲ್ಲಿರುವ ದರ್ಗಾ ಸೇರಿ ಹಲವೆಡೆ ಒತ್ತುವರಿ ಕಂಡುಬಂದಿದೆ. ನ್ಯಾಯಾಲಯದ ತಡೆಯಾಜ್ಞೆ ಇರುವ ಕಟ್ಟಡ ಹೊರತುಪಡಿಸಿ ಉಳಿದೆಡೆ ಒತ್ತುವರಿ ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಬೆಳಿಗ್ಗೆ ನಗರ ಸುತ್ತಿದ ಜಿಲ್ಲಾಧಿಕಾರಿ, ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ರಸ್ತೆಯಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ಕಾಮಗಾರಿ ವಿಳಂಬ ಆಗುತ್ತಿರುವುದಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದರು.

ಬಿ.ಡಿ.ರಸ್ತೆಯ ಚಳ್ಳಕೆರೆ ಗೇಟಿನಿಂದ ಆರಂಭವಾದ ಪರಿಶೀಲನೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೆ ನಡೆಯಿತು. ಚರಂಡಿ ನಿರ್ಮಾಣ, ಪಾದಚಾರಿ ಮಾರ್ಗದ ಅಭಿವೃದ್ಧಿ ಸೇರಿ ಹಲವು ಕಾಮಗಾರಿಗಳನ್ನು ಗಮನಿಸಿದರು. ಸ್ಥಳದಲ್ಲೇ ಅಧಿಕಾರಿಗಳನ್ನು ಪ್ರಶ್ನಿಸಿ ವಿಳಂಬ ಮಾಡದಂತೆ ತಾಕೀತು ಮಾಡಿದರು.

ಬಿ.ಡಿ.ರಸ್ತೆಯಲ್ಲಿ ಸಾಗುವಾಗ ಪಂಚಾಚಾರ್ಯ ಕಲ್ಯಾಣ ಮಂಟಪದ ಬಗ್ಗೆ ಅಧಿಕಾರಿಗಳು ಗಮನ ಸೆಳೆದರು. ಬಂಜಾರ ಸಮುದಾಯ ಭವನವನ್ನೂ ವೀಕ್ಷಿಸಿದರು. ಒತ್ತುವರಿ ತೆರವಿಗೆ ಕಾನೂನು ರೀತಿಯಲ್ಲಿ ಮುಂದುವರಿಯುವಂತೆ ಸಲಹೆ ನೀಡಿದರು. ಮದಕರಿನಾಯಕ ವೃತ್ತದಲ್ಲಿ ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಂಡರು. ಗಾಂಧಿ ವೃತ್ತದ ಮೂಲಕ ಕೆಎಸ್‌ಆರ್‌ಟಿಸಿ ರಸ್ತೆಗೆ ಸಾಗಿದರು.

ಬಸ್‌ ನಿಲ್ದಾಣದ ಸಮೀಪ ಇರುವ ದರ್ಗಾ ಗಮನಿಸಿ ಒತ್ತುವರಿಯ ಬಗ್ಗೆ ಮಾಹಿತಿ ಪಡೆದರು. ಮತ್ತೊಂದು ಬದಿಯಲ್ಲಿರುವ ಕಾಂಪೌಂಡ್‌ ಏಕೆ ತೆರವುಗೊಳಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಪ್ರಧಾನ ಅಂಚೆಕಚೇರಿ ಮಾರ್ಗದ ಮೂಲಕ ಸಾಗಿ ಹೊಳಲ್ಕೆರೆ ರಸ್ತೆಯನ್ನು ವೀಕ್ಷಿಸಿದರು.

ಆರು ತಿಂಗಳು ಗಡವು

‘ನಗರದ ಎಲ್ಲ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು. ದೂಳು ಹೆಚ್ಚಾಗದಂತೆ ನಿತ್ಯ ನೀರು ಹಾಕಬೇಕು. ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಇಲ್ಲವಾದರೆ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ. ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

‘ನಗರದ ರಸ್ತೆ ಅಭಿವೃದ್ಧಿಗೆ ಏಕಕಾಲಕ್ಕೆ ಅನುದಾನ ಬಿಡುಗಡೆಯಾಗಿದೆ. ಹೀಗಾಗಿ, ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಲ್ಲವಾದರೆ, ಅನುದಾನ ವಾಪಾಸ್‌ ಹೋಗುವ ಸಾಧ್ಯತೆ ಇದೆ. ನಗರದ ಎಲ್ಲ ರಸ್ತೆಗಳು ಏಕಕಾಲಕ್ಕೆ ಅಭಿವೃದ್ಧಿ ಹೊಂದಲಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಸ್ಕೈವಾಕ್‌ ಆಲೋಚನೆ

ಬಿ.ಡಿ. ರಸ್ತೆಯಲ್ಲಿ ಸ್ಕೈವಾಕ್‌ ಅಗತ್ಯವಿರುವ ಬಗ್ಗೆ ಬಹುದಿನಗಳಿಂದ ಬೇಡಿಕೆ ಇರುವುದು ಗಮನಕ್ಕೆ ಬಂದಿಲ್ಲ. ಅಗತ್ಯವಿದ್ದರೆ ಸ್ಕೈವಾಕ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕವಿತಾ ಆಶ್ವಾಸನೆ ನೀಡಿದರು.

‘ಮಳೆ ಬಿದ್ದಾಗ ರಸ್ತೆಯಲ್ಲಿ ನೀರು ಹರಿದು ನದಿಯಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ’ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ‘ಮಳೆನೀರು ರಸ್ತೆಯಲ್ಲಿ ನಿಲ್ಲದಂತೆ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಸತೀಶ್‍ಬಾಬು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‍ರೆಡ್ಡಿ, ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು