ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಬಾಬ್ತಿಗೆ ಬೆಳೆ ನೀಡಲು ನಿರ್ಧಾರ: ಈಚಘಟ್ಟ ಸಿದ್ಧವೀರಪ್ಪ

11ರಂದು ಕಾರ್ಯಕ್ರಮಕ್ಕೆ ಚಾಲನೆ
Last Updated 10 ಮಾರ್ಚ್ 2022, 2:46 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದಲ್ಲಿ ಬ್ಯಾಂಕ್‌ಗಳ ಸಾಲದ ಬಾಬ್ತಿಗೆ ಬದಲಾಗಿ, ರೈತರು ಬೆಳೆದ ಬೆಳೆಯನ್ನು ನೀಡುವ ಕಾರ್ಯಕ್ಕೆ ಮಾರ್ಚ್ 11ರಂದು ಪಟ್ಟಣದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ತಿಳಿಸಿದರು.

ಬೆಳೆಯ ಬೆಲೆಯನ್ನು ಕೂಡ ರೈತನೇ ನಿರ್ಧರಿಸುತ್ತಾನೆ. ಬೆಳೆ ಪಡೆದ ಬ್ಯಾಂಕ್‌ಗಳು ಸಾಲಕ್ಕೆ ಜಮಾ ಮಾಡಿಕೊಂಡು ರಶೀದಿ ನೀಡಬೇಕು ಎಂದು ಪಟ್ಟಣದ ತಾಲ್ಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ
ತಿಳಿಸಿದರು.

‘ಬೆಂಬಲ ಬೆಲೆಗೆ ಆಗ್ರಹಿಸಿ ರಾಯಚೂರು, ಕಲಬುರಗಿ ಸೇರಿ ವಿವಿಧೆಡೆ ರೈತರು‌ ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಬೆಂಬಲ ಬೆಲೆಯಡಿ ಬೆಳೆ ಖರೀದಿ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಕೃಷಿ ಸಾಲ ಮತ್ತು ಕೃಷಿ ಅವಲಂಬಿತ ಸಾಲಗಳನ್ನು ನೀಡುವ ಬ್ಯಾಂಕ್‌ಗಳು ಬಡ್ಡಿಯನ್ನು ಕೂಡ ಹೆಚ್ಚಿಸುತ್ತಿವೆ.
ಪ್ರಕೃತಿ ವಿಕೋಪದ ನಡುವೆ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯಿಲ್ಲದ ಕಾರಣ ವರ್ತಕರೊಟ್ಟಿಗೆ ಸೆಣಸಾಡಬೇಕು. ಇವುಗಳೆಲ್ಲದರ ನಡುವೆ ಬ್ಯಾಂಕ್ ಸಾಲ, ಸಾಲಕ್ಕೆ ಬಡ್ಡಿ ಕಟ್ಟಿ ರೈತ ಆರ್ಥಿಕವಾಗಿ ದುರ್ಬಲನಾಗಿದ್ದಾನೆ’
ಎಂದರು.

‘ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಬೆಳೆಗೆ ರೋಗ ಬಂದಾಗ ಸಲಹೆ ನೀಡಲು ಮುಂದಾಗುತ್ತಾರೆ, ಅದಕ್ಕೂ ಮೊದಲೇ ತಿಳಿಸಿದ್ದರೆ ರೈತರು ಎಚ್ಚರದಿಂದ ಇರುತ್ತಾರೆ. ನಷ್ಟ ಅನುಭವಿಸಿದ ರೈತರ ಆದಾಯ ಕುಂಠಿತದ ಬಗ್ಗೆ ಸರ್ಕಾರಕ್ಕೆ ವರದಿ ಕೊಡಬೇಕು. ಆದರೆ ಈ ಇಲಾಖೆಗಳು ವರದಿ ನೀಡುತ್ತಿಲ್ಲ’
ಎಂದು ಆರೋಪಿಸಿದರು.

ಆಧುನಿಕ ಕೃಷಿ ಭರಾಟೆಯಲ್ಲಿ ರೈತ ಖರ್ಚಿನ ಕೃಷಿ ಅವಲಂಬಿಸಿ ಶೋಷಣೆಗೆ ಒಳಗಾಗುತ್ತಿರುವುದು ನೋವಿನ ಸಂಗತಿ. ಹಾಗಾಗಿ ರೈತ ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸುತ್ತಾನೆ. ಬ್ಯಾಂಕ್, ಬೆಸ್ಕಾಂ ಸೇರಿ ವಿವಿಧ ಸಂಸ್ಥೆಗಳಿಗೆ ಬೆಳೆ ನೀಡಿ, ರಶೀದಿ ಪಡೆಯುವ
ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಒಬ್ಬ ರೈತನಿಂದ ಮತ್ತೊಬ್ಬ ರೈತನಿಗೆ ಬೆಲೆ ವ್ಯತ್ಯಾಸವಾಗಬಹುದು. ಆದರೆ ರೈತ ವಿರೋಧಿ ನೀತಿ ಮಟ್ಟ ಹಾಕಲು ರೈತರೇ ನೇರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ದೇಶದಲ್ಲೇ ವಿನೂತನ ಕಾರ್ಯಕ್ರಮ ಇದಾಗಿದೆ’ ಎಂದು ಹೇಳಿದರು.

ಸಚಿವರ ತಾತ್ಸಾರ: ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಸಿ ಮಹೇಶ್ವರಪ್ಪ ಮಾತನಾಡಿ, ‘ಫೆ. 10ರಿಂದ ತಾಲ್ಲೂಕು ಕಚೇರಿ ಎದುರು ರಾಗಿ ಚೀಲವಿಟ್ಟು ರೈತರು ಪ್ರತಿಭಟನೆಯಲ್ಲಿ ತೊಡಗಿದ್ದರೂ ಕೃಷಿ ಸಚಿವರು ಸಮಸ್ಯೆ ಆಲಿಸಲಿಲ್ಲ. ಹಾಲುರಾಮೇಶ್ವರದಲ್ಲಿ ನಡೆಯುವ ಧಾರ್ಮಿಕ ಉತ್ಸವಕ್ಕೆ ಬಂದ ಸಚಿವರಿಗೆ ಪಟ್ಟಣದಲ್ಲಿನ ರೈತರ ಪ್ರತಿಭಟನೆ ಕಾಣದಂತಾಗಿದೆ’ ಎಂದು ಆರೋಪಿಸಿದರು.

‘ರೈತರ ಪ್ರತಿಭಟನೆ ಬಗ್ಗೆ ವರದಿಯಾಗಿದ್ದರೂ ಯಾವೊಬ್ಬ ಸಚಿವರು ಹಾಗೂ ಶಾಸಕರು ರಾಗಿ ಖರೀದಿ ಕೇಂದ್ರದ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ರಾಜಕಾರಣಿಗಳು ಸಾಲ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಆದರೆ ಆ ಕಾರ್ಯವೈಖರಿಯನ್ನು
ಪರಿಶೀಲಿಸಿಲ್ಲ. ರೈತರಲ್ಲಿ ಹಣವಿಲ್ಲ, ಆತ ಬೆಳೆದ ಬೆಳೆ ಇದೆ ಆದ ಕಾರಣ ಹಣದ ಬದಲು ಬೆಳೆ ನೀಡಿ, ರಶೀದಿ‌ ಪಡೆಯಲಾಗುವುದು’
ಎಂದರು.

ಹೊಸದುರ್ಗ ತಾಲ್ಲೂಕು ಸಮಿತಿ ಉಪಾಧ್ಯಕ್ಷ ಚಿತ್ತಪ್ಪ, ತಾಲ್ಲೂಕು ಕಾರ್ಯದರ್ಶಿ ನಾಗಲಿಂಗಮೂರ್ತಿ, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಸಹ ಕಾರ್ಯದರ್ಶಿ ಓಂಕಾರಪ್ಪ ಕೊರಟಿಕೆರೆ, ರಘು ಆರ್. ನೀರಗುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT