ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಬರಗಾಲ: ಟ್ಯಾಂಕ್‌ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ

ನಿಂತು ಹೋದ ಕೊಳವೆ ಬಾವಿಗಳು ಅಡಿಕೆ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಪೂರೈಕೆ
ವಿ.ವೀರಣ್ಣ ಧರ್ಮಪುರ
Published 26 ಮಾರ್ಚ್ 2024, 6:00 IST
Last Updated 26 ಮಾರ್ಚ್ 2024, 6:00 IST
ಅಕ್ಷರ ಗಾತ್ರ

ಧರ್ಮಪುರ: ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ವೈಫಲ್ಯದಿಂದ ಕೊಳವೆ ಬಾವಿಗಳು ಭತ್ತಿ ಹೋಗಿದ್ದು, ತೋಟಗಾರಿಕಾ ಬೆಳೆಗಳಿಗೆ ನೀರಿಲ್ಲದೆ ರೈತರು ಆತಂಕಕ್ಕೀಡಾಗಿದ್ದಾರೆ. ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರುಣಿಸಲು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ, ಟ್ಯಾಂಕರ್‌ ನಿರ್ಮಾಣಕ್ಕೆ ಹೆಚ್ಚು ಬೇಡಿಕೆ ಉಂಟಾಗಿದೆ. 

ಧರ್ಮಪುರ ಹೋಬಳಿಯಲ್ಲಿ ಐದಾರು ವರ್ಷಗಳ ಹಿಂದೆ ಅಡಿಕೆ ಬೆಳೆಯ ವಿಸ್ತೀರ್ಣ ಕಡಿಮೆ ಇತ್ತು. ಕೇವಲ ದಾಳಿಂಬೆ, ಪಪ್ಪಾಯಿ ಹಾಗೂ ಮಳೆಯಾದಾರಿತ ಶೇಂಗಾ ಬೆಳೆಯಲಾಗುತ್ತಿತ್ತು. ಹೀಗಾಗಿ ನೀರಿಗಾಗಿ ಟ್ಯಾಂಕರ್ ಬಳಕೆ ಕಡಿಮೆಯೇ ಇತ್ತು. ಆದರೆ ಈಗ ಅಡಿಕೆ ತೋಟಗಳ ಸಂಖ್ಯೆ ಅಧಿಕವಾಗಿದ್ದು, ನೀರುಣಿಸಲು ಟ್ಯಾಂಕರ್ ಬೇಕೇಬೇಕು ಎಂಬ ಸ್ಥಿತಿ ನಿರ್ಮಾಣವಾಗಿದ್ದು,  ಟ್ಯಾಂಕರ್‌ಗಳ ಮೇಲಿನ ಅವಲಂಬನೆ ಹೆಚ್ಚಿದೆ.

ಟ್ಯಾಂಕರ್ ತಯಾರಿಸುವ ವರ್ಕ್‌ಶಾಪ್‌ಗಳಲ್ಲಿ ಈಗ ಬಿಡುವಿಲ್ಲದ ಕೆಲಸ. ಟ್ಯಾಂಕರ್ ನಿರ್ಮಾಣ ಮಾಡಿಕೊಡುವಂತೆ ಬೇಡಿಕೆ ಇಡುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವರ್ಕ್‌ಶಾಪ್‌ ಮಾಲೀಕರಾದ ಜಯಣ್ಣ ಮಂಜುನಾಥ್ ಮತ್ತು ಶ್ರೀನಿವಾಸ ಹೇಳಿದ್ದಾರೆ. 

ಜಿಲ್ಲೆಯ ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ತಾಲ್ಲೂಕಿನ ಹಳ್ಳಿಗಳ ರೈತರಿಂದ ಟ್ಯಾಂಕ್ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ಈಗಾಗಲೇ 10 ಹೊಸ ಟ್ಯಾಂಕರ್‌ಗಳನ್ನು ತಯಾರಿಸಿಕೊಟ್ಟಿದ್ದೇವೆ. ಮತ್ತೆ 10 ಟ್ಯಾಂಕರ್‌ ನಿರ್ಮಾಣಕ್ಕೆ ಬೇಡಿಕೆ ಬಂದಿದೆ ಎಂದು ತಿಳಿಸಿದರು. 

ಜಿಂಕ್ ಮೆಟಲ್‌ನ 5,000 ಲೀಟರ್ ಸಾಮರ್ಥ್ಯದ 3 ಎಂ.ಎಂ. ಗೇಜ್ ಶೀಟ್‌ನ ಒಂದು ಟ್ಯಾಂಕರ್‌ ಅನ್ನು ₹1.45 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. ಅದೇ ಎಂ.ಎಸ್ ಶೀಟ್‌ನ 5,000 ಲೀಟರ್ ಸಾಮರ್ಥ್ಯದ ಟ್ಯಾಂಕರ್‌ಗೆ ₹1.35 ಲಕ್ಷ ದರ ನಿಗದಿ ಮಾಡಲಾಗಿದೆ ಎಂದು ಮಂಜುನಾಥ್ ತಿಳಿಸಿದರು.

ರೈತರು ನಮ್ಮ ವರ್ಕ್‌ಶಾಪ್‌ಗೆ ಪ್ರತಿನಿತ್ಯ ಬಂದು ಟ್ಯಾಂಕರ್ ನಿರ್ಮಾಣಕ್ಕೆ ಬೇಡಿಕೆ ಇಡುತ್ತಾರೆ. ಸಕಾಲದಲ್ಲಿ ಮಾಡಿಕೊಡುವ ಉದ್ದೇಶದಿಂದ ಹೆಚ್ಚಿನ ಕೆಲಸಗಾರರನ್ನು ನೇಮಿಸಿಕೊಂಡಿದ್ದೇವೆ ಎಂದು ಶ್ರೀನಿವಾಸ ತಿಳಿಸಿದರು.

ತಾಲ್ಲೂಕಿನಲ್ಲಿ ಕುಡಿಯುವ ನೀರು ಪೂರೈಕೆ ಮಾಡಲು ಟೆಂಡರ್ ಕರೆದಿದ್ದಾರೆ. ಇದರಿಂದ ಟ್ಯಾಂಕರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಧರ್ಮಪುರದಲ್ಲಿ ಎರಡು ಕಡೆ ಟ್ಯಾಂಕರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ 8 ಟ್ಯಾಂಕರ್ ಸರಬರಾಜು ಮಾಡಿದ್ದೇವೆ. ಮತ್ತೆ 6ಕ್ಕೆ ಬೇಡಿಕೆ ಬಂದಿದೆ ಎಂದು ಇಲಾಹಿ ವೆಲ್ಡಿಂಗ್ ವರ್ಕ್‌ನ ಮಾಲೀಕ ಇನಾಯತ್ ಉಲ್ಲಾ ತಿಳಿಸಿದರು. 

ಧರ್ಮಪುರದಲ್ಲಿ ಟ್ಯಾಂಕರ್ ಬೇಡಿಕೆ ಹೆಚ್ಚಾಗಿದ್ದು ವರ್ಕ್‌ ಶಾಪ್‌ವೊಂದರಲ್ಲಿ ಟ್ಯಾಂಕರ್ ನಿರ್ಮಾಣಕ್ಕೆ ನಡೆಯುತ್ತಿರುವ ಸಿದ್ಧತೆ
ಧರ್ಮಪುರದಲ್ಲಿ ಟ್ಯಾಂಕರ್ ಬೇಡಿಕೆ ಹೆಚ್ಚಾಗಿದ್ದು ವರ್ಕ್‌ ಶಾಪ್‌ವೊಂದರಲ್ಲಿ ಟ್ಯಾಂಕರ್ ನಿರ್ಮಾಣಕ್ಕೆ ನಡೆಯುತ್ತಿರುವ ಸಿದ್ಧತೆ

ನದಿ ಹರಿದರೂ ನೀರಿಲ್ಲ:  ‘ಸಮುದ್ರದ ನೆಂಟಸ್ಥನವಿದ್ದರೂ ಕುಡಿಯುವ ನೀರಿಗೆ ಬರ’ ಎಂಬ ಮಾತಿನಂತೆ ವೇದಾವತಿ ಮತ್ತು ಸುವರ್ಣಮುಖಿ ಎರಡು ನದಿಗಳು ಹೋಬಳಿ ವ್ಯಾಪ್ತಿಯಲ್ಲಿ  ಹರಿಯುತ್ತವೆ. ಆದರೆ ಈ ನದಿಗಳ ನೀರಿನ ಬಳಕೆ ಹೋಬಳಿಯ ಕೆಲವೇ ಗ್ರಾಮಗಳ ರೈತರಿಗೆ ಸಿಕ್ಕಿದೆ. ದೇವರಕೊಟ್ಟ ಗ್ರಾಮದಿಂದ ಕೆಳಗಿನ ಬಹುತೇಕ ಗ್ರಾಮಗಳು ನದಿ ನೀರಿನಿಂದ ವಂಚಿತವಾಗಿವೆ. ಈಗ ಹೊಸಹಳ್ಳಿ ಬ್ಯಾರೇಜ್ ನಿರ್ಮಾಣವಾಗಿದ್ದು ₹90 ಕೋಟಿ ವೆಚ್ಚದಲ್ಲಿ ಹೋಬಳಿಯ 7 ಕೆರೆಗಳಿಗೆ ನೀರು ಹರಿಸುವ ಯತ್ನ ನಡೆಯುತ್ತಿದೆ. ಕಾಮಗಾರಿ ತುರ್ತಾಗಿ ನಡೆದು 7 ಕೆರೆಗಳಿಗೆ ನೀರುಣಿಸಿದರೆ ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕರೆ ತೋಟಗಾರಿಕಾ ಬೆಳೆಗಳು ಜೀವ ಪಡೆಯುತ್ತವೆ. ಕಾಮಗಾರಿಯನ್ನು ಶೀಘ್ರವೇ ಮುಗಿಸಬೇಕು ಎಂದು ಮದ್ದಿಹಳ್ಳಿಯ ರೈತ ಕೆ.ದೊಡ್ಡಯ್ಯ ಒತ್ತಾಯಿಸಿದ್ದಾರೆ.

ಬರಿದಾದ ಅಂತರ್ಜಲ ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಧರ್ಮಪುರ ಹೋಬಳಿಯ 32 ಕೆರೆಗಳ ಪೈಕಿ ಅಬ್ಬಿನಹೊಳೆ ಮುಂಗುಸುವಳ್ಳಿ ಮತ್ತು ಗೂಳ್ಯ ಕೆರೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕೆರೆಗಳು ಕೋಡಿ ಹರಿದಿದ್ದವು. ಅಂತರ್ಜಲ ಹೆಚ್ಚಳವಾಗಿ ಕೊಳವೆ ಬಾವಿಗಳು ಮರುಪೂರಣವಾಗಿದ್ದವು. ಆದರೆ 2020-21ಕ್ಕೂ ಮುನ್ನ ಸತತ ಮಳೆ ವೈಫಲ್ಯದಿಂದ ಒಂದು ಸಾವಿರ ಅಡಿಯವರೆಗೂ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿರಲಿಲ್ಲ. ಹತಾಶರಾಗಿ ಎಷ್ಟೋ ರೈತರು  ತೋಟಗಾರಿಕಾ ಬೆಳೆಗಳನ್ನು ಕೈ ಬಿಟ್ಟರು. ಆದರೆ ಕಳೆದ ವರ್ಷ ಕೆರೆಗಳು ತುಂಬಿದ್ದರಿಂದ ರೈತರು ಮತ್ತೆ ತೋಟಗಾರಿಕಾ ಬೆಳೆಗಳತ್ತ ಮುಖ ಮಾಡಿದ್ದರು. ಅದರಲ್ಲಿಯೂ ಅಡಿಕೆ ಸಸಿಗಳನ್ನು ನೆಡಲು ರೈತರು ಯುದ್ಧದ ರೀತಿಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು. 2021-22ರಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ 6920 ಹೆಕ್ಟೇರ್‌ನಷ್ಟು ಇದ್ದ ಅಡಿಕೆ ಬೆಳೆ 2022-23ರಲ್ಲಿ 9884 ಹೆಕ್ಟೇರ್‌ಗೆ ವಿಸ್ತೀರ್ಣ ಹೆಚ್ಚಿಸಿಕೊಂಡಿತು. ಆದರೆ ಮಳೆ ಕೈಕೊಟ್ಟಿದ್ದರಿಂದ ಅಡಿಕೆ ಗಿಡಗಳು ಒಣಗಲಾರಂಭಿಸಿವೆ. ರೈತರು ಕಂಗಾಲರಾಗಿದ್ದಾರೆ. ರೈತರು ಬೆಳೆ ಉಳಿಸಿಕೊಳ್ಳಲೇಬೇಕೆಂದು ಟ್ಯಾಂಕರ್ ಮೊರೆ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT