ಗುರುವಾರ , ಅಕ್ಟೋಬರ್ 29, 2020
21 °C
ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಒತ್ತಾಯ

ಪೋಲಾಗುವ ಭದ್ರಾ ನೀರು ವಿ.ವಿ ಸಾಗರಕ್ಕೆ ಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಭದ್ರಾ ನದಿಯಿಂದ ಪೋಲಾಗಿ ಹರಿದು ಸಮುದ್ರ ಸೇರುತ್ತಿರುವ ನೀರನ್ನು ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಬೇಕು ಎಂದು ಇಲ್ಲಿನ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಒತ್ತಾಯಿಸಿದರು.

ತರೀಕೆರೆ ತಾಲ್ಲೂಕು ಬೆಟ್ಟದಾವರಕೆರೆ ಸಮೀಪ ಭದ್ರಾ ಜಲಾಶಯದಿಂದ ವಿ.ವಿ ಸಾಗರಕ್ಕೆ ಹಳ್ಳದ ಮಾರ್ಗವಾಗಿ ನೀರು ಹರಿಸಲು ಪಂಪ್‌ ಚಾಲನೆ ಮಾಡಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು.

ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಗೆ ಹತ್ತಾರು ವರ್ಷಗಳಿಂದ ಸರಿಯಾಗಿ ಮಳೆ ಆಗದೇ ಜಲಮೂಲಗಳು ಬತ್ತಿಹೋಗಿವೆ. ಈ ಬಾರಿಯೂ ವೇದಾವತಿ ನದಿ ಪಾತ್ರದಲ್ಲಿ ಮಳೆಯೂ ಕ್ಷೀಣಿಸಿದೆ. ಈ ಭಾಗದಲ್ಲಿ ಅಂತರ್ಜಲವೂ ಕುಸಿತವಾಗಿದ್ದು, ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹೆಚ್ಚು ನೀರು ಹರಿಸಿದಲ್ಲಿ ಬರದ ನಾಡಿನ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ಬೆಟ್ಟದಾವರಕೆರೆ ಬಳಿಯ ಪಂಪ್‌ಹೌಸ್‌ನಲ್ಲಿ ಕೇವಲ ಒಂದು ಪಂಪ್‌ ಚಾಲನೆ ಮಾಡಿರುವುದರಿಂದ ಹೆಬ್ಬೂರು ಹಳ್ಳದ ಮಾರ್ಗವಾಗಿ ವಿ.ವಿ ಸಾಗರಕ್ಕೆ ಕಡಿಮೆ ನೀರು ಹೋಗುತ್ತಿದೆ. ಇಲ್ಲಿರುವ ಎರಡ್ಮೂರು ಪಂಪ್‌ಗಳನ್ನು ಚಾಲನೆ ಮಾಡಲು ಅವಕಾಶವಿದ್ದು, ಚಾಲನೆ ನೀಡಿದಲ್ಲಿ 2,000ಕ್ಕೂ ಹೆಚ್ಚಿನ ಕ್ಯುಸೆಕ್‌‌ ನೀರು ಹರಿಯಲಿದೆ. ಈಗಾಗಲೇ ಭದ್ರಾ ಜಲಾಶಯ ಭರ್ತಿಯಾಗಿದ್ದು, ಪ್ರತಿದಿನ ಐದಾರು ಸಾವಿರ ಕ್ಯುಸೆಕ್‌ ನೀರು ಸಮುದ್ರ ಸೇರುತ್ತಿದೆ. ಹಾಗಾಗಿ ಸಮುದ್ರ ಸೇರುವ ನೀರನ್ನು ಖಾಲಿ ಇರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಲು ಸರ್ಕಾರ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಕಾಗಿನೆಲೆ ಕನಕ ಗುರುಪೀಠ ಕೆಲ್ಲೋಡು ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ‘ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಜಿಲ್ಲೆಯ ರೈತಪರ ಸಂಘಟನೆಗಳ ಹಲವು ದಶಕಗಳ ಹೋರಾಟದ ಫಲವಾಗಿದೆ. ಕಳೆದ ವರ್ಷದಿಂದ ಹೆಬ್ಬೂರು ಹಳ್ಳದ ಮಾರ್ಗವಾಗಿ ಭದ್ರಾ ನೀರನ್ನು ವಿ.ವಿ ಸಾಗರಕ್ಕೆ ಹರಿಸುತ್ತಿರುವುದು ರೈತರಿಗೆ ಸಮಾಧಾನ ತಂದಿದೆ. ಭದ್ರಾ ಮೇಲ್ದಂಡೆ ಯೋಜನೆಯ ಶಾಶ್ವತ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಬಯಲು ಸೀಮೆಯ ಜಿಲ್ಲೆಯ ಕೆರೆಗಳಿಗೆ ಹಾಗೂ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನದಿಯ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಸಬೇಕು. ಈ ಕಾರ್ಯ ತ್ವರಿತವಾದಲ್ಲಿ ಬರದ ನಾಡಿನ ರೈತರ ಬದುಕು ಹಸನಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.