ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40ರಷ್ಟು ಡಿಎಂಎಫ್‌ ನಿಧಿ ಶಿಕ್ಷಣಕ್ಕೆ: ಸಂಸದ ಎ.ನಾರಾಯಣಸ್ವಾಮಿ ತಾಕೀತು

ಕೇಂದ್ರ ಪುರಸ್ಕೃತ ಯೋಜನೆ ಸಭೆ, ಸಂಸದ ಎ.ನಾರಾಯಣಸ್ವಾಮಿ ತಾಕೀತು
Last Updated 15 ಫೆಬ್ರುವರಿ 2021, 15:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ (ಡಿಎಂಎಫ್‌) ಶೇ 40ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಇಲ್ಲವಾದರೆ ನಿಧಿ ಬಳಕೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಸಂಸದ ಎ.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಕೊಠಡಿ, ಶೌಚಾಲಯ ಸೇರಿದಂತೆ ಮೂಲಸೌಲಭ್ಯ ವಂಚಿತವಾಗಿವೆ. ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುವ ಸ್ಥಿತಿ ಇದೆ. ಇದರಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ ಡಿಎಂಎಫ್‌ ನಿಧಿ ಸದ್ಬಳಕೆ ಆಗಬೇಕಿದೆ’ ಎಂದರು.

‘ಡಿಎಂಎಫ್‌ ನಿಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹12ಕೋಟಿ ಅನುದಾನ ಮೀಸಲಿಡಲಾಗಿದೆ. ಶಿಕ್ಷಣ ಇಲಾಖೆಗೆ ಈವರೆಗೆ ₹47 ಕೋಟಿ ಅನುದಾನ ಸಿಕ್ಕಿದೆ. ಅಭಿವೃದ್ಧಿ, ಸುಧಾರಣೆ ಕಣ್ಣಿಗೆ ಕಾಣುತ್ತಿಲ್ಲ. ಸರ್ಕಾರ ಒದಗಿಸುವ ಅನುದಾನ ಎಲ್ಲಿಗೆ ಹೋಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹಾ ಯೋಜನೆ ಸಿದ್ಧಪಡಿಸಿ’ ಎಂದು ಡಿಡಿಪಿಐ ಕೆ.ರವಿಶಂಕರ್‌ ರೆಡ್ಡಿ ಅವರಿಗೆ ಸೂಚನೆ ನೀಡಿದರು.

ಆಡಳಿತ ವ್ಯವಸ್ಥೆ ಇದೆಯೇ?

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಗಮನ ಸೆಳೆದರು. ಜಿಲ್ಲೆಯಲ್ಲಿರುವ 1,062 ಘಟಕಗಳಲ್ಲಿ 72 ಘಟಕ ಸ್ಥಗತಗೊಂಡಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಸಭೆಯ ಮುಂದಿಟ್ಟರು. ಶಾಲೆಗಳಿಗೆ ಕುಡಿಯುವ ನೀರನ ವ್ಯವಸ್ಥೆ ಕಲ್ಪಿಸುವಲ್ಲಿ ಉಂಟಾಗುತ್ತಿರುವ ವಿಳಂಬ ಸಂಸದರನ್ನು ಕೆರಳಿಸಿತು.

‘ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮೂರು ವರ್ಷವಾದರೂ ಸಾಧ್ಯವಾಗದಿದ್ದರೆ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಇದೆಯೇ ಎಂಬ ಅನುಮಾನ ಮೂಡುತ್ತದೆ. ಕೆಲಸ ಮಾಡುವ ಆಸಕ್ತಿ ಇಲ್ಲದಿದ್ದರೆ ಕುರ್ಚಿಯಲ್ಲಿ ಏಕೆ ಕೂರುತ್ತೀರಿ’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಸಹಜ ಹೆರಿಗೆ ಹೆಚ್ಚಲಿ

ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗುವ ಪ್ರಮಾಣ ದೇಶದಲ್ಲಿ ಸರಾಸರಿ ಶೇ 30ರಷ್ಟಿದೆ. ಆದರೆ, ಜಿಲ್ಲೆಯಲ್ಲಿ ಈ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ಶೇ 48ರಷ್ಟು ಗರ್ಭಿಣಿಯರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿ. ಶಸ್ತ್ರಚಿಕಿತ್ಸೆ ಕಡಿಮೆ ಮಾಡಿ, ಸಹಜ ಹೆರಿಗೆ ಹೆಚ್ಚಿಸಲು ಸರ್ಕಾರಿ ಆಸ್ಪತ್ರೆಯ ವೈದ್ಯರು ಶ್ರಮಿಸಬೇಕಿದೆ ಎಂದು ಸಂಸದರು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ, ‘ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಹೆಚ್ಚಾಗುತ್ತಿವೆ. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒತ್ತು ನೀಡಲಾಗುತ್ತಿದೆ. ಶೇ 7ರಷ್ಟು ಮಹಿಳೆಯರನ್ನು ಕಬ್ಬಿಣಾಂಶದ ಕೊರತೆ ಕಾಡುತ್ತಿದೆ. ಸೊಪ್ಪು, ತರಕಾರಿ ಹಾಗೂ ಮೊಳಕೆ ಕಾಳು ಹೆಚ್ಚಾಗಿ ಸೇವಿಸುವಂತೆ ಅರಿವು ಮೂಡಿಸಲಾಗುತ್ತಿದೆ’ ಎಂದು ಮಹಿತಿ ನೀಡಿದರು.

‘ನಗು–ಮಗು’ ಮಿತಿಗೆ ಕಿಡಿ

‘ನಗು–ಮಗು’ ಯೋಜನೆಯಡಿ ಒದಗಿಸಿದ ಆಂಬುಲೆನ್ಸ್‌ ಸೇವೆಯನ್ನು 30 ಕಿ.ಮೀ.ಗೆ ಮಿತಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಸಂಸದ ಎ.ನಾರಾಯಣಸ್ವಾಮಿ ಕಿಡಿಕಾರಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಮಾತನಾಡಿ, ‘ಚಳ್ಳಕೆರೆ ತಾಲ್ಲೂಕಿನ ಗ್ರಾಮವೊಂದರ ಬಾಣಂತಿಯನ್ನು ಆಂಬುಲೆನ್ಸ್‌ ಸಿಬ್ಬಂದಿ ಮನೆಗೆ ತಲುಪಿಸಿಲ್ಲ. 30 ಕಿ.ಮೀ ಆಚೆಗೆ ಸೇವೆ ಒದಗಿಸಲು ಅವಕಾಶವಿಲ್ಲ ಎಂದು ಅರ್ಧ ದಾರಿಯಲ್ಲೇ ಬಿಟ್ಟು ಬಂದಿದ್ದಾರೆ. ಇದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ‘ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದ ನೆರವು ಪಡೆದು ಬಾಣಂತಿ–ಮಗುವನ್ನು ಮನೆಗೆ ತಲುಪಿಸಬೇಕು’ ಎಂದು ಸೂಚನೆ ನೀಡಿದರು.

‘ಕಣ್ಣು ಬಿಟ್ಟರೆ ವ್ಯವಸ್ಥೆ ನಡುಗುತ್ತದೆ’

‘ಆನೆಕಲ್‌ಗೆ ಹೋಗಿ ಒಮ್ಮೆ ಕೇಳಿ ನೋಡಿ. ನಾನು ಕಣ್ಣು ಬಿಟ್ಟರೆ ಇಡೀ ವ್ಯವಸ್ಥೆ ನಡುಗುತ್ತಿತ್ತು. ಆಗ ಶಾಸಕ, ಸಂಸದ ಏನೂ ಆಗಿರಲಿಲ್ಲ’ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ನಡೆಯುತ್ತಿದ್ದ ಚರ್ಚೆಯ ವೇಳೆ ಮಾತನಾಡಿದ ಅವರು, ‘ಆಸ್ಪತ್ರೆಯ ಈ ಸ್ಥಿತಿಗೆ ಜನಪ್ರತಿನಿಧಿಗಳೇ ಹೊಣೆ. ಸರಿಯಾದ ರೀತಿಯಲ್ಲಿ ಪ್ರಶ್ನೆ ಮಾಡಿದ್ದರೆ ಜನರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಸಂಸದ ಎಂಬ ಕಾರಣಕ್ಕೆ ಜವಾಬ್ದಾರಿಯಿಂದ ವರ್ತಿಸಬೇಕಿದೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಂದಿನಿ ದೇವಿ ಇದ್ದರು.

ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದ್ದು, ಅಗತ್ಯ ಔಷಧ ಲಭ್ಯವಿಲ್ಲ. ವೈದ್ಯರು ಸರಿಯಾಗಿ ಸ್ಪಂದಿಸುವುದಿಲ್ಲ.

–ಡಿ.ಎಂ.ಲಿಂಗರಾಜು

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಚಿತ್ರದುರ್ಗ.

ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಬಂದಿದ್ದೇ ಹೆಚ್ಚು. ಸರಿಯಾದ ಸಮಯಕ್ಕೆ ದುರಸ್ತಿ ಮಾಡುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

–ನರಸಿಂಹರಾಜು

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT