ಮಂಗಳವಾರ, ಮೇ 17, 2022
26 °C
ಬರ ಪ್ರದೇಶದಲ್ಲೂ ಕೃಷಿಯಲ್ಲಿ ಬೋಸೆದೇವರಹಟ್ಟಿ ರೈತ ದಂಪತಿಯ ಸಾಹಸಗಾಥೆ

ನಾಯಕನಹಟ್ಟಿ: ಹನಿ ನೀರಾವರಿಯಲ್ಲಿ ನಳನಳಿಸುವ ಮಿಶ್ರ ಬೆಳೆ

ವಿ.ಧನಂಜಯ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ನಾಯಕನಹಟ್ಟಿ ಹೋಬಳಿಯೆಂದರೆ ನಿರಂತರವಾದ ಬರಗಾಲದಿಂದ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಕಣ್ಣಮುಂದೆ ಬರುತ್ತದೆ. ಇಂತಹ ಸಮಸ್ಯೆಯನ್ನು ಮೆಟ್ಟಿನಿಂತು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ ಹೋಬಳಿಯ ಬೋಸೆದೇವರಹಟ್ಟಿ ಗ್ರಾಮದ ರೈತ ದಂಪತಿ.

ಬೋಸೆದೇವರಹಟ್ಟಿ ಗ್ರಾಮದ ದಂಪತಿ ಮುದಿಯಪ್ಪ ಹಾಗೂ ಸುನಿತಾ ವೈಜ್ಞಾನಿಕ ಕೃಷಿ ವಿಧಾನಗಳ ಅನುಸರಿಸಿ ಪಪ್ಪಾಯಿ ಮತ್ತು ದಾಳಿಂಬೆ ಸೇರಿ ತರಹೇವಾರಿ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯದ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಕೃಷಿಯಲ್ಲಿ ಸಾಧಿಸಬೇಕೆಂಬ ಛಲದಿಂದ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಇತರರಿಗೆ ಮಾದರಿಯಾಗಿದ್ದಾರೆ. ತಮ್ಮ 5 ಎಕರೆ ಜಮೀನಿನಲ್ಲಿ 2 ಕೊಳವೆಬಾವಿಯನ್ನು ಕೊರೆದು ಕೃಷಿಗೆ ಧುಮುಕಿದ ದಂಪತಿ ಮೊದಲು ಕೈಸುಟ್ಟುಕೊಂಡರು. ಬಳಿಕ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಉತ್ತಮ ಇಳುವರಿ, ಆದಾಯ ಪಡೆಯುತ್ತಿದ್ದಾರೆ.

ಕೈಹಿಡಿದ ಮಿಶ್ರಬೆಳೆ ಪದ್ಧತಿ: ಒಂದೇ ಬೆಳೆಯನ್ನು ಬೆಳೆದರೆ ನಷ್ಟ ಖಚಿತ ಎಂಬ ಸತ್ಯ ಅರಿತ ಅವರು ಮಿಶ್ರಬೆಳೆ ಬೇಸಾಯ ಪದ್ಧತಿಯನ್ನು ಅನುಸರಿಸಿದರು. ಅದಕ್ಕಾಗಿ ತೋಟದಲ್ಲಿ ತೆಂಗು, ಪಪ್ಪಾಯಿ, ದಾಳಿಂಬೆಯನ್ನು ಬೆಳೆಸಲು ಮುಂದಾದರು. ಐದು ಎಕರೆ ಜಮೀನಿನಲ್ಲಿ 2000 ದಾಳಿಂಬೆ ಸಸಿಗಳನ್ನು ಸಾಲಿನಿಂದ ಸಾಲಿಗೆ 8 ಅಡಿಗಳ ಅಂತರಕ್ಕೆ ನಾಟಿ ಮಾಡಿದರು. ಜತೆಗೆ ನಿತ್ಯ ಆದಾಯಕ್ಕೆ ಪಪ್ಪಾಯಿ ಬೆಳೆದರು.

‘ದಾಳಿಂಬೆಯ ಮಧ್ಯೆ 4 ಅಡಿಗಳಿಗೆ ಅಂತರವಾಗಿ 1,400 ಪಪ್ಪಾಯಿ ಸಸಿಗಳನ್ನು ನಾಟಿ ಮಾಡಿದೆವು. ಪಪ್ಪಾಯಿ ಗಿಡ ಬೆಳೆದಂತೆ ದಾಳಿಂಬೆ ಗಿಡಕ್ಕೆ ಉತ್ತಮವಾದ ನೆರಳು ಮತ್ತು ಗಾಳಿಯಿಂದ ರಕ್ಷಣೆ ಸಿಗುತ್ತದೆ. ಇದರಿಂದ ದಾಳಿಂಬೆಗೆ ರೋಗಾಣುಗಳ ಬಾಧೆ ಇರುವುದಿಲ್ಲ’ ಎನ್ನುತ್ತಾರೆ ರೈತ ಮುದಿಯಪ್ಪ.

ನಿತ್ಯ ಆದಾಯಕ್ಕೆ ಪಪ್ಪಾಯಿ: ‘ಮಿಶ್ರಬೆಳೆ ಬೇಸಾಯ ಮಾಡುವ ಮುನ್ನ ಭೂಮಿಯ ಆರೋಗ್ಯ ಕಾಪಾಡಬೇಕು ಎಂದು ನಿರ್ಧರಿಸಿ ರಾಸಾಯನಿಕ ಗೊಬ್ಬರಗಳನ್ನು ಬಿಟ್ಟು, ತೋಟಗಾರಿಕೆ ಕೃಷಿ ಅಧಿಕಾರಿಗಳ ಸಲಹೆಯ ಮೇರೆಗೆ ಕೊಟ್ಟಿಗೆ ಗೊಬ್ಬರವನ್ನು ಹಾಕಿದೆವು. ಬೆಳೆಗಳಿಗೆ ಕಾಲಕಾಲಕ್ಕೆ ನೀರು, ಗೊಬ್ಬರ, ಗಾಳಿಯಿಂದ ರಕ್ಷಿಸಲು ಪರದೆ ವ್ಯವಸ್ಥೆ ಮಾಡಿದೆವು. ಅಂದುಕೊಂಡಂತೆ ಉತ್ತಮವಾದ ಇಳುವರಿ ಬಂದಿದೆ. ನಿತ್ಯ ಆದಾಯಕ್ಕೆ ಪಪ್ಪಾಯಿ ಬೆಳೆಯಲಾಗಿದೆ. ಒಂದು ಕಟಾವಿಗೆ ಸುಮಾರು 3 ರಿಂದ 4 ಟನ್‍ನಷ್ಟು ಹಣ್ಣು ದೊರೆಯುತ್ತಿದೆ. ಇದುವರೆಗೂ 6 ಬಾರಿ ಹಣ್ಣು ಕಟಾವು ಮಾಡಲಾಗಿದೆ. 1 ಕೆ.ಜಿ ಹಣ್ಣಿಗೆ
₹8 ರಿಂದ 12ರ ವರೆಗೂ ಮಾರಾಟ ಮಾಡುತ್ತೇವೆ. ವ್ಯಾಪಾರಸ್ಥರೇ ಇಲ್ಲಿಗೆ ಬಂದು ಕೊಂಡುಕೊಳ್ಳುತ್ತಿದ್ದಾರೆ’ ಎಂದು ಸಂತಸ ಹಂಚಿಕೊಂಡರು ಮುದಿಯಪ್ಪ, ಸುನಿತಾ.

‘ನಮ್ಮ ಜಮೀನು ಪಕ್ಕದಲ್ಲೇ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ರಸ್ತೆ ಹಾದುಹೋಗಿದೆ. ರಸ್ತೆಯ ಪಕ್ಕದಲ್ಲೇ ಪಪ್ಪಾಯಿ ಅಂಗಡಿ ಮಳಿಗೆ ತೆರೆದಿದ್ದೇವೆ. ಸ್ಥಳೀಯ ಪ್ರಯಾಣಿಕರು ಪಪ್ಪಾಯಿಯ ತಾಜಾತನವನ್ನು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಎಲ್ಲರಿಂದ ಈಗಾಗಲೇ ಸುಮಾರು ₹ 6 ಲಕ್ಷ ಆದಾಯ ದೊರೆತಿದೆ. ಇನ್ನು 6 ತಿಂಗಳಲ್ಲಿ ದಾಳಿಂಬೆ ಫಲ ಬರಲಿದ್ದು, ₹ 10 ಲಕ್ಷ ಲಾಭದ ನಿರೀಕ್ಷೆ ಇದೆ’ ಎಂದು ವಿಶ್ವಾಸದಿಂದ ಹೇಳುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು