ಬುಧವಾರ, ಮಾರ್ಚ್ 29, 2023
27 °C
ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು

ಆರ್ಥಿಕ ಸಬಲೀಕರಣವೇ ಸರ್ಕಾರದ ಧ್ಯೇಯ: ಬಿ.ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬುಡಕಟ್ಟು ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತಂದು ಆರ್ಥಿಕ ಶಕ್ತಿ ತುಂಬುವ ಕಾರ್ಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿವೆ. ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯಲ್ಲಿ ಸುಧಾರಣೆ ತರಲು ಹಗಲಿರುಳು ಶ್ರಮಿಸಲಾಗುತ್ತಿದೆ ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ರಾಜ್ಯ ಬುಡಕಟ್ಟು ಉತ್ಸವಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಬುಡಕಟ್ಟು ಸಮುದಾಯ ಅಭಿವೃದ್ಧಿ ಹೊಂದುವ ಅಗತ್ಯವಿದೆ. ಕಾಡಂಚಿನಲ್ಲಿ ಜೀವನ ನಡೆಸುವ ಜನರು ಒಂದೇ ವೇದಿಕೆಯಡಿ ಒಗ್ಗೂಡಬೇಕು. ಕಲೆ, ಸಂಸ್ಕೃತಿ, ಆಹಾರ ಪದ್ಧತಿ, ವ್ಯವಹಾರವನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಇಂತಹ ಉತ್ಸವ ಮುಖ್ಯವಾಗುತ್ತದೆ. ಆಂತರಿಕ ಭಿನ್ನಾಭಿಪ್ರಾಯ, ಕಚ್ಚಾಟವನ್ನು ಬಿಟ್ಟು ಒಗ್ಗೂಡೋಣ’ ಎಂದು ಕರೆ
ನೀಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಬುಡಕಟ್ಟು ಸಮುದಾಯ ಇನ್ನೂ ಶೋಚನೀಯ ಸ್ಥಿತಿಯಲ್ಲಿದೆ. ಬಹುತೇಕ ಹಾಡಿ, ಹಟ್ಟಿಗಳಿಗೆ ಇನ್ನೂ ಮೂಲಸೌಲಭ್ಯ ಸಿಕ್ಕಿಲ್ಲ. ಗಿರಿಜನರ ಹಾಡಿಗಳನ್ನು ನೋಡಿದರೆ ನೋವು, ಸಂತೋಷ ಎರಡೂ ಉಕ್ಕಿ ಬರುತ್ತದೆ. ಈ ಸಮುದಾಯದ ಏಳಿಗೆಗೆ ಪ್ರಧಾನಿ ಮೋದಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪರಿಶಿಷ್ಟ ಪಂಗಡಕ್ಕೆ ಆರ್ಥಿಕವಾಗಿ ಶಕ್ತಿ ತುಂಬುವ ಭಾಗವಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸಲಾಗಿದೆ. ಸರ್ಕಾರದ ಹಲವು ಸುತ್ತಿನ ಪ್ರಯತ್ನದ ಫಲವಾಗಿ ಅರಣ್ಯ ಉತ್ಪನ್ನಗಳು ಅಮೆಜಾನ್‌ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಆಶ್ರಮ ಶಾಲೆಯ ಮೂಲಕ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನೂ ನೀಡಲಾಗುತ್ತಿದೆ’ ಎಂದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್.ಕಾಂತರಾಜ್, ಉಪನಿರ್ದೇಶಕ ರಾಜಕುಮಾರ್, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಬಸವನಗೌಡ, ಕಲಾವಿದ ಡಿ.ಒ. ಮುರಾರ್ಜಿ, ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಪ್ರತಿನಿಧಿ ನಿರ್ಮಲ್ ಕುಮಾರ್ ವೇದ್ ಇದ್ದರು. 

‘ಒತ್ತಡದಲ್ಲಿ ಬುಡಕಟ್ಟು ಜನ’

ಅರಣ್ಯದ ಹಕ್ಕಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಸಮಾಜ ನಡೆಸಿಕೊಳ್ಳುವ ರೀತಿಯಿಂದಾಗಿ ಬುಡಕಟ್ಟು ಸಮುದಾಯ ಒತ್ತಡಕ್ಕೆ ಸಿಲುಕಿದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಬೇಸರ ವ್ಯಕ್ತಪಡಿಸಿದರು.

‘ಅಭಿವೃದ್ಧಿಯ ನೆಪದಲ್ಲಿ ಅನೇಕರು ಕಾಡಿನ ಜನರನ್ನು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಲೆ ಕೆಡಿಸಿ ಜನರನ್ನು ಹಾಳು ಮಾಡಲು ಹವಣಿಸುತ್ತಿದ್ದಾರೆ. ಇದರಿಂದ ಬೇಸತ್ತ ಜನರು ಕಾಡಿನಿಂದ ಹೊರಗೆ ವಲಸೆ ಹೋಗುತ್ತಿದ್ದಾರೆ. ನಮ್ಮ ಸಂಸ್ಕೃತಿ, ಕಲೆ ಹಾಗೂ ಪರಂಪರೆಯಿಂದ ವಿಮುಖರಾಗುತ್ತಿದ್ದಾರೆ’ ಎಂದು ಹೇಳಿದರು.

‘ಕಾಡಿನಲ್ಲಿ ವಾಸಿಸುವ ಜನರಿಗೆ ಅರಣ್ಯ ಇಲಾಖೆ ಹಲವು ರೀತಿಯ ನಿರ್ಬಂಧಗಳನ್ನು ಹೇರಿದೆ. ಇದರಿಂದ ರಾಜ್ಯದ ಹಲವೆಡೆ ಆದಿವಾಸಿ ಸಮುದಾಯದ ಜನರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಿದರೆ ಅನುಕೂಲವಾಗಲಿದೆ’ ಎಂದರು.

ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ

ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಇರುವ ಮೀಸಲಾತಿಯ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸಬೇಕು ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಬೇಡಿಕೆ ಮುಂದಿಟ್ಟರು.

 

ಅರಣ್ಯ ಆಧಾರಿತ ಬುಡಕಟ್ಟು ಸಮುದಾಯದಲ್ಲಿ ಮುಗ್ಧತೆ ಇದೆ. ಆಧುನಿಕ ಜಗತ್ತಿನಲ್ಲಿಯೂ ಹಟ್ಟಿ ಜನರು ಸಂಸ್ಕೃತಿ ಬಿಟ್ಟಿಲ್ಲ. ಆದರೆ, ಮೂಢನಂಬಿಕೆ ಹೋಗಲಾಡಿಸುವ ಕೆಲಸ ಆಗಬೇಕಿದೆ.

-ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

ಹಾಡಿಯಲ್ಲಿ ಬದುಕುವ ಜನರು ಕಲೆ–ಸಂಸ್ಕೃತಿ ರಕ್ಷಿಸುತ್ತಿದ್ದಾರೆ. ಸ್ಥಳೀಯ ಪರಿಸ್ಥಿತಿ, ನೈತಿಕ ಮೌಲ್ಯಗಳು ಅವರ ಹಾಡಿನಲ್ಲಿ ಬೆರೆತಿವೆ. ಈ ಸಮುದಾಯಕ್ಕೆ ಹುಟ್ಟಿನಿಂದಲೇ ಕಲೆ ಸಿದ್ಧಿಸಿದೆ.

-ಕೆ.ಪೂರ್ಣಿಮಾ, ಶಾಸಕಿ, ಹಿರಿಯೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು