ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಉಯ್ಯಾಲೆ ಆಡಿದ ಏಕನಾಥೇಶ್ವರಿ ದೇವಿ, ಭಕ್ತರ ಸಂಭ್ರಮ

Published 5 ಸೆಪ್ಟೆಂಬರ್ 2023, 15:36 IST
Last Updated 5 ಸೆಪ್ಟೆಂಬರ್ 2023, 15:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋಟೆನಾಡಿನ ಅಧಿದೇವತೆ ಏಕನಾಥೇಶ್ವರಿ ದೇವಿಗೆ ಬಂಗಾರದ ಮುಖಪದ್ಮದ ಲೋಕಾರ್ಪಣೆ ನಿಮಿತ್ತ ಮಂಗಳವಾರ ಮೇಲುದುರ್ಗದ ಏಕನಾಥೇಶ್ವರಿ ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿ ಹೋಮ, ಉಯ್ಯಾಲೋತ್ಸವ ನೆರವೇರಿದವು.

ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಆರಂಭವಾಗಿದ್ದವು. ಕಲಾಹೋಮ, ಅಭಿಷೇಕ ನಡೆಸಲಾಯಿತು. ಮುಖಪದ್ಮಕ್ಕೆ ಬಂಗಾರ ನೀಡಿದಂತಹ ಭಕ್ತರನ್ನು ಸನ್ಮಾನಿಸಲಾಯಿತು. ದೇವಸ್ಥಾನ ಆವರಣದಲ್ಲಿ ಹಾಕಿದ್ದ ರಂಗೋಲಿಗಳು ಭಕ್ತರ ಗಮನ ಸೆಳೆದವು.

ಮಧ್ಯಾಹ್ನ 3 ಗಂಟೆ ವೇಳೆಗೆ ದೇವಸ್ಥಾನದ ಆವರಣದಲ್ಲಿ ಸಂಪ್ರದಾಯದಂತೆ ಏಕನಾಥೇಶ್ವರಿ ಅಮ್ಮನವರಿಗೆ ಉಯ್ಯಾಲೆ ಉತ್ಸವ ಜರುಗಿತು. ವಿವಿಧ ಪುಷ್ಪಗಳಿಂದ ಮನಮೋಹಕವಾಗಿ ಅಲಂಕಾರ ಮಾಡಲಾಗಿದ್ದ ದೇವಿಯ ಉತ್ಸವಮೂರ್ತಿಯನ್ನು ‘ಉಧೋ...ಉಧೋ..’ ಎಂಬ ಭಕ್ತರ ಉದ್ಘಾರ ಘೋಷಗಳೊಂದಿಗೆ ಉಯ್ಯಾಲೆ ಕಂಬದ ಬಳಿ ಕರೆತಂದು, ಅಲಂಕೃತ ಉಯ್ಯಾಲೆಯಲ್ಲಿ ದೇವಿಯನ್ನು ಕೂರಿಸುತ್ತಿದ್ದಂತೆ ನಾದಸ್ವರದ ನೀನಾದ, ಕಹಳೆ ಸದ್ದು ಮೊಳಗಿದವು. ಶಾಸಕ ಎಂ.ಚಂದ್ರಪ್ಪ ಉಯ್ಯಾಲೋತ್ಸವಕ್ಕೆ ಚಾಲನೆ ನೀಡಿದರು.

ಕಾಮನಬಾವಿ ಬಡಾವಣೆ, ಬುರುಜನಹಟ್ಟಿ, ಜೋಗಿಮಟ್ಟಿ ರಸ್ತೆ ಸೇರಿದಂತೆ ನಗರದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಮೇಲುದುರ್ಗಕ್ಕೆ ಭೇಟಿ ನೀಡಿದರು. ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ದೇವಿಯ ಪೂಜಾ ಕಾರ್ಯದ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಂಡರು.

ಸೆ.6ರ ಬೆಳಿಗ್ಗೆ 10ಗಂಟೆಗೆ ನಗರದಲ್ಲಿ ಅಮ್ಮನವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಹೂವಿನ ಅಲಂಕಾರದೊಂದಿಗೆ ಕೋಟೆ ರಸ್ತೆಯಲ್ಲಿನ ಅಮ್ಮನವರ ಪಾದಗಟ್ಟೆಯಿಂದ ನಗರದ ರಾಜ ಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಲಿದೆ. ಜಾನಪದ ಕಲಾತಂಡಗಳು ಭಾಗವಹಿಸಲಿವೆ.

ಮುಖಪದ್ಮ ಲೋಕಾರ್ಪಣೆ ನಿಮಿತ್ತ ಪೂಜಾ ಕೈಂಕರ್ಯ ಉಯ್ಯಾಲೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಚಂದ್ರಪ್ಪ ರಾಜಬೀದಿಯಲ್ಲಿ ಉತ್ಸವಮೂರ್ತಿ ಮೆರವಣಿಗೆ ಇಂದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT