ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುವಳ್ಳಿ ಕೆರೆಗೆ ನೀರು ಹರಿಸಲು ಒತ್ತಾಯ: ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Published 7 ಏಪ್ರಿಲ್ 2024, 16:18 IST
Last Updated 7 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಉಡುವಳ್ಳಿ ಕೆರೆಗೆ ವಾಣಿವಿಲಾಸ ಜಲಾಶಯದ ನೀರನ್ನು ಪೂರಕ ನಾಲೆ ನಿರ್ಮಿಸಿ ಹರಿಸುವ ತೀರ್ಮಾನ ಕೈಗೊಳ್ಳದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಎಚ್ಚರಿಸಿದ್ದಾರೆ.

ತಾಲ್ಲೂಕಿನ ಹುಲುಗಲಕುಂಟೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈತರು ಈ ನಿರ್ಧಾರ ಕೈಗೊಂಡರು.

‘ವಾಣಿವಿಲಾಸ ನಾಲೆ ಹಾದು ಬರುವ ಭೂತಪ್ಪನಗುಡಿ ಸಮೀಪದಿಂದ ಪೂರಕ ನಾಲೆ ನಿರ್ಮಿಸುವ ಮೂಲಕ, ಪರಮೇನಹಳ್ಳಿ ಸಮೀಪ ವೇದಾವತಿ ನದಿಯಿಂದ ಏತ ನೀರಾವರಿ ಮೂಲಕ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಕೆರೆಗೆ ನೀರು ತುಂಬಿಸಬಹುದಾಗಿದೆ. ಆದರೆ ಇಲ್ಲಿಯವರೆಗೆ ಜನಪ್ರತಿನಿಧಿಗಳು ಕೆರೆ ತುಂಬಿಸುವ ಪ್ರಯತ್ನ ಮಾಡಲಿಲ್ಲ’ ಎಂದು ರೈತರು ಆರೋಪಿಸಿದರು.

ಉಡುವಳ್ಳಿ ಕೆರೆ ತುಂಬಿದರೆ ಉಡುವಳ್ಳಿ, ಯಲ್ಲದಕೆರೆ ಹಾಗೂ ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳ ಅಂತರ್ಜಲಮಟ್ಟ ಹೆಚ್ಚುತ್ತದೆ. ಬತ್ತಿ ಹೋಗಿರುವ ಕೊಳವೆಬಾವಿಗಳಲ್ಲಿ ಮತ್ತೆ ಜೀವಸೆಲೆ ಕಾಣಿಸಿಕೊಳ್ಳುತ್ತದೆ. ಕೆರೆ ಸುತ್ತಲಿ ಹಳ್ಳಿಗಳಲ್ಲಿ ಹಿಂದಿನ ಮೂರ್ನಾಲ್ಕು ತಿಂಗಳಲ್ಲಿ ನೂರಾರು ಕೊಳವೆಬಾವಿಗಳು ಬತ್ತಿ ಹೋಗಿವೆ. ಹಿಂದೆಂದೂ ಕಾಣದಂತಹ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಜನ–ಜಾನುವಾರುಗಳಿಗೆ, ಕೃಷಿಗೆ ಸಮರ್ಪಕವಾಗಿ ನೀರು ಒದಗಿಸಲು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ತಾಲ್ಲೂಕಿನಲ್ಲಿಯೇ ದೊಡ್ಡದಾದ ಉಡುವಳ್ಳಿ ಕೆರೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

‘ನಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷದ ವಿರುದ್ಧವಲ್ಲ. ನಮ್ಮ ಬದುಕನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಬೀದಿಗೆ ಬರಬೇಕಾಗಿದೆ. ಅಧಿಕಾರಿಗಳು ಚುನಾವಣೆಯ ನೆಪ ಹೇಳದೆ, ನಮ್ಮ ಸಮಸ್ಯೆಯ ಮೂಲ ಅರಿತು ಪರಿಹರಿಸಲು ಮುಂದಾಗಬೇಕು. ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಎಂ. ಉಮೇಶ್, ಎಚ್.ಡಿ. ಸೋಮಶೇಖರ್, ಅಬ್ದುಲ್ ರೆಹಮಾನ್, ಲಕ್ಷ್ಮೀಕಾಂತ್, ಎಚ್. ರಂಗಸ್ವಾಮಿ, ಮಹಲಿಂಗಪ್ಪ, ಎಚ್. ರಂಗನಾಥ್, ಪೂಜಣ್ಣ, ಮಂಜುನಾಥ್, ರಮೇಶ್, ಶೇಖರಪ್ಪ, ತೇಜುಕುಮಾರ್, ನರಸಿಂಹಣ್ಣ, ಮಂಜುನಾಥಗೌಡ, ರಾಜೇಂದ್ರ, ನಾಗರಾಜಪ್ಪ, ಎಚ್.ಇ. ಮಂಜುನಾಥ, ಉಮೇಶಣ್ಣ, ರಾಮು, ಉಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT