ಶನಿವಾರ, ಡಿಸೆಂಬರ್ 5, 2020
23 °C

PV Web Exclusive: ದಾಳಿಂಬೆ ಕ್ಲಸ್ಟರ್‌ಗೆ ಸಿದ್ಧತೆ ಆರಂಭ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ ಜಿಲ್ಲೆಯ ಧರ್ಮಪುರದ ಗಿರೀಶ್‌ ಎಂಬುವರು ಬೆಳೆದಿರುವ ದಾಳಿಂಬೆ. (ಸಂಗ್ರಹ ಚಿತ್ರ)

ಚಿತ್ರದುರ್ಗ: ಕೃಷಿ ಉತ್ಪನ್ನಗಳ ರಫ್ತು ಉತ್ತೇಜಿಸುವ ಉದ್ದೇಶದಿಂದ ಚಿತ್ರದುರ್ಗದಲ್ಲಿ ದಾಳಿಂಬೆ ಕ್ಲಸ್ಟರ್‌ ನಿರ್ಮಿಸಲು ಕೇಂದ್ರ ಸರ್ಕಾರದ ಕೃಷಿ ಹಾಗೂ ಸಂಸ್ಕೃರಿಸಿದ ಆಹಾರೋತ್ಪನ್ನಗಳ ಅಭಿವೃದ್ಧಿ ಮಂಡಳಿ (ಅಪೆಡಾ) ಸಿದ್ಧತೆ ಆರಂಭಿಸಿದೆ. ಮಂಡಳಿಯ ಅಧಿಕಾರಿಗಳು ದಾಳಿಂಬೆ ಬೆಳೆಗಾರರ ಸಲಹೆ ಪಡೆದು ರೂಪುರೇಷ ತಯಾರಿಸುವಲ್ಲಿ ತಲ್ಲೀನರಾಗಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಗುಲಾಬಿ ಈರುಳ್ಳಿ, ಚಿಕ್ಕಮಗಳೂರಿನಲ್ಲಿ ಮೆಣಸು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಕ್ಲಸ್ಟರ್‌ ರೂಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ರಾಯಚೂರಿನಲ್ಲಿ ಅಂಜೂರ ಕ್ಲಸ್ಟರ್‌ ಸ್ಥಾಪಿಸುವ ಬಗ್ಗೆಯೂ ಕೇಂದ್ರ ಸರ್ಕಾರ ಒಲವು ತೋರಿದೆ.

ದಾಳಿಂಬೆ ಕ್ಲಸ್ಟರ್‌ಗೆ ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳನ್ನು ಆರಂಭದಲ್ಲಿ ಆಯ್ಕೆ ಮಾಡಲಾಗಿತ್ತು. ದಾಳಿಂಬೆ ಬೆಳೆಯುವ ಪ್ರದೇಶವಾದ ಚಿತ್ರದುರ್ಗವನ್ನು ಬಳಿಕ ಪರಿಗಣಿಸಲಾಗಿದೆ. ಕೃಷಿ ರಫ್ತು ನೀತಿಯ ಅನ್ವಯ ರಾಜ್ಯದ ಪ್ರಮುಖ ತರಕಾರಿ, ಹಣ್ಣು ಹಾಗೂ ಸಾಂಬಾರು ಪದಾರ್ಥದ ಬೆಳೆಗಳಿಗೆ ರಫ್ತು ಉತ್ತೇಜನ ಸಿಗುವ ಆಶಾಭಾವನೆ ಮೂಡಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಚಿತ್ರದುರ್ಗ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆ ದಾಳಿಂಬೆ. ಜಿಲ್ಲೆಯ ಸುಮಾರು 5,335 ಹೆಕ್ಟೇರ್‌ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. 5,109 ಹೆಕ್ಟೇರ್ ಪ್ರದೇಶದಲ್ಲಿರುವ ಬಾಳೆಗಿಂತಲೂ ದಾಳಿಂಬೆಗೆ ತೋಟಗಾರಿಕೆ ಬೆಳೆಗಾರರು ಒಲವು ತೋರಿದ್ದಾರೆ. ಕೆಲ ವರ್ಷಗಳ ಹಿಂದೆ ದಾಳಿಂಬೆಯು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು.

ಸಿರಿಧಾನ್ಯ ಬೆಳೆಯುತ್ತಿದ್ದ ಹೊಸದುರ್ಗ, ಹಿರಿಯೂರು, ಚಳ್ಳಕೆರೆ ಸೇರಿ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ದಾಳಿಂಬೆಯನ್ನು ಎಥೇಚ್ಛವಾಗಿ ಬೆಳೆಯಲಾಗಿತ್ತು. ಆರಂಭದಲ್ಲಿ ದಾಳಿಂಬೆ ಉತ್ತಮ ಇಳುವರಿ ಹಾಗೂ ಲಾಭ ತಂದಕೊಟ್ಟಿತ್ತು. ದುಂಡಾಣು ರೋಗ ಹಾಗೂ ಸೊರಗು ರೋಗ ಕಾಣಿಸಿಕೊಂಡ ಬಳಿಕ ರೈತರು ಕೈಸುಟ್ಟುಕೊಂಡರು. ದುಂಡಾಣು ರೋಗವನ್ನು ನಿವಾರಿಸಲು ಬೆಳೆಗಾರರಿಗೆ ಸೂಕ್ತ ಸಲಹೆ ಸಿಗಲಿಲ್ಲ. ತೋಟಗಾರಿಕೆ ಇಲಾಖೆ ಕೂಡ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಯಿತು ಎಂಬ ಕೊರಗು ಬೆಳೆಗಾರರಲ್ಲಿದೆ. ಲಕ್ಷಾಂತರ ರೂಪಾಯಿ ಬಂಡಾವಳ ಹೂಡಿ ದಾಳಿಂಬೆ ಹಣ್ಣಿನ ನಿರೀಕ್ಷೆಯಲ್ಲಿದ್ದ ರೈತರು ನಷ್ಟದ ಹಾದಿ ತುಳಿಯಬೇಕಾಯಿತು.

ಬಿರುಗಾಳಿ ಹಾಗೂ ಮಳೆಯು ರೋಗ ಹರಡುವ ವಾಹಕಗಳಾದವು. ಒಂದರಿಂದ ಮತ್ತೊಂದು ತೋಟಕ್ಕೆ ರೋಗ ವೇಗವಾಗಿ ಹರಡಿತು. ಖಾಸಗಿ ಕಂಪನಿಗಳು ಸೂಚಿಸಿದ ಕೀಟನಾಶಕ ಸಿಂಪಡಿಸಿದ ಬಹುತೇಕರು ಇನ್ನಷ್ಟು ಸಮಸ್ಯೆಗೆ ಸಿಲುಕಿದರು. ಎಷ್ಟೇ ಶ್ರಮವಹಿಸಿದರೂ ದುಂಡಾಣು ರೋಗ (ಬ್ಯಾಕ್ಟೀರಿಯಲ್‌ ಬೈಟ್‌) ಹಾಗೂ ಸೊರಗು ರೋಗ (ಡೈ ಬ್ಯಾಕ್ಟ್‌) ನಿಯಂತ್ರಣಕ್ಕೆ ಬರಲಿಲ್ಲ. ಸಾವಿರಾರು ಹೆಕ್ಟೇರ್‌ ಪ್ರದೇಶದ ದಾಳಿಂಬೆ ಸಂಪೂರ್ಣ ನಾಶವಾಯಿತು.

ದಾಳಿಂಬೆ ಕ್ಲಸ್ಟರ್‌ಗೆ ಅವಕಾಶ ಸಿಕ್ಕಿರುವುದು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ. ದಾಳಿಂಬೆ ದಾಸ್ತಾನು, ಸೂಕ್ತ ಸಲಹೆ, ಹಣ್ಣಿನ ಬಾಕ್ಸ್‌, ಸಸಿಗಳಿಗೆ ಸಬ್ಸಿಡಿ ಲಭ್ಯವಾಗುವ ಸಾಧ್ಯತೆ ಇದೆ. ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿಯಲ್ಲಿ ಕ್ಲಸ್ಟರ್‌ ನಿರ್ಮಿಸಲು ‘ಅಪೆಡ್‌’ ಮುಂದಾಗಿದೆ. ‘ಅಪೆಡ್‌’ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು, ರೈತರೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಡಿಸೆಂಬರ್ ವೇಳೆಗೆ ರೂಪುರೇಷ ಸಿದ್ಧವಾಗುವ ಸಾಧ್ಯತೆ ಇದೆ.

ದಾಳಿಂಬೆ ಸಸಿಗಳಿಗೆ ಸದ್ಯ ಶೇ 35ರಷ್ಟು ಸಬ್ಸಿಡಿ ಸಿಗುತ್ತಿದೆ. ಕ್ಲಸ್ಟರ್‌ ಬಳಿಕ ಸಬ್ಸಿಡಿ ಮೊತ್ತ ಶೇ 50ಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ದಾಳಿಂಬೆಗೆ ತಗಲುವ ರೋಗಕ್ಕೆ ಸಿಂಪಡಿಸುವ ಕೀಟನಾಶಕದ ಬಗ್ಗೆ ಸರಿಯಾದ ತಿಳಿವಳಿಕೆ ರೈತರಲ್ಲಿಲ್ಲ. ದುಬಾರಿ ಬೆಲೆಯ ಕೀಟನಾಶಕ ಸಿಂಪಡಿಸಿ ಬೆಳೆಗಾರರು ಹೈರಾಣಾಗಿದ್ದಾರೆ. ಉತ್ತಮ ಗುಣಮಟ್ಟದ ಕೀಟನಾಶಕ ಹಾಗೂ ಸಿಂಪಡಣೆ ವಿಧಾನದ ಮಾಹಿತಿ ಲಭ್ಯವಾಗಲಿದೆ. ಮಾರುಕಟ್ಟೆಯಲ್ಲಿ ಹಣ್ಣಿಗೆ ಸರಿಯಾದ ಬೆಲೆ ಸಿಗದಿದ್ದಾಗ ದಾಸ್ತಾನು ಮಾಡಲು ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆ ಆಗಲಿದೆ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

‘ದಾಳಿಂಬೆ ಕ್ಲಸ್ಟರ್‌ಗೆ ಚಿತ್ರದುರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಪೆಡಾ ಸಂಸ್ಥೆಯ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ದಾಳಿಂಬೆ ಬೆಳೆ ವೀಕ್ಷಣೆ ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಅಗತ್ಯ ಸಹಕಾರ ನೀಡಲಿದೆ. ಗುಣಮಟ್ಟದ ಸಸಿ, ಮಾರುಕಟ್ಟೆಯ ಬಗ್ಗೆ ಯೋಜನೆ ಸಿದ್ಧವಾಗಲಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಡಾ.ಸವಿತಾ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು