ಬುಧವಾರ, ಫೆಬ್ರವರಿ 1, 2023
16 °C
ವಿಧಾನಪರಿಷತ್‌ ಮಾಜಿ ಸದಸ್ಯ ಜಿ.ರಘು ಆಚಾರ್‌ ಹೇಳಿಕೆ

ಕೃಷಿ ಅಧ್ಯಯನಕ್ಕೆ ಇಸ್ರೇಲ್‌ಗೆ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಆಧುನಿಕ ಕೃಷಿ ತಂತ್ರಜ್ಞಾನದ ಅಧ್ಯಯನಕ್ಕಾಗಿ ಇಸ್ರೇಲ್‌ ದೇಶಕ್ಕೆ 40 ರೈತರ ತಂಡವನ್ನು ಕಳುಹಿಸಲು ತೀರ್ಮಾನಿಸಿದ್ದೇನೆ. ಕಡಿಮೆ ನೀರಿನಲ್ಲಿ ಕೃಷಿ ಮಾಡುವ ರೀತಿಯನ್ನು ರೈತರಿಗೆ ಮನವರಿಕೆ ಮಾಡಿಕೊಡು ಪ್ರಯತ್ನ ಇದಾಗಿದೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಜಿ.ರಘು ಆಚಾರ್‌ ತಿಳಿಸಿದರು.

‘ಇಸ್ರೇಲ್‌ ಮಾದರಿಯ ಕೃಷಿ ವಿಶ್ವದಲ್ಲಿಯೇ ಯಶಸ್ವಿ ಪ್ರಯೋಗವಾಗಿದೆ. ಸೀಮಿತ ಸಂಪನ್ಮೂಲ ಬಳಸಿಕೊಂಡು ಹೆಚ್ಚಿನ ಕೃಷಿ ಉತ್ಪಾದನೆ ಹಾಗೂ ತಾಜಾ ಉತ್ಪನ್ನಗಳಿಗೆ ಇಸ್ರೇಲ್‌ ಹೆಸರಾಗಿದೆ. ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡು ವಿಶಿಷ್ಟ ಕೃಷಿ ಪದ್ಧತಿ ರೂಪಿಸಿದೆ. ಬರಪೀಡಿತ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಈ ಮಾದರಿಯ ಕೃಷಿ ನೆರವಾಗಲಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಚಿತ್ರದುರ್ಗ ತಾಲ್ಲೂಕಿನ ರೈತರನ್ನು ಮಾತ್ರ ಅಧ್ಯಯನಕ್ಕೆ ಕಳುಹಿಸಲಾಗುತ್ತಿದೆ. ಪ್ರತಿ ತಂಡದಲ್ಲಿ 10 ರೈತರಂತೆ ನಾಲ್ಕು ತಂಡಗಳಲ್ಲಿ 40 ರೈತರು ಅಧ್ಯಯನಕ್ಕೆ ತೆರಳಲಿದ್ದಾರೆ. ಒಂದು ವಾರ ಅಧ್ಯಯನ ಮಾಡಿ ಬರುವ ರೈತರು ಹಳ್ಳಿಗಳಲ್ಲಿ ಕಾರ್ಯಾಗಾರ ನಡೆಸಿ ಇತರರಿಗೆ ತಿಳಿವಳಿಕೆ ನೀಡಲಿದ್ದಾರೆ. ಪ್ರತಿ ರೈತರಿಗೆ ₹ 3.5 ಲಕ್ಷ ವೆಚ್ಚವಾಗಲಿದೆ. ಎಲ್ಲ ಹಣವನ್ನು ನಾನೇ ಭರಿಸಲಿದ್ದೇನೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ 4.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ, ವಿ.ವಿ.ಸಾಗರ, ಗಾಯತ್ರಿ ಜಲಾಶಯ ಸೇರಿ ಲಭ್ಯವಿರುವ ಜಲಮೂಲದಿಂದ 1.5 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಮಾತ್ರ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಿದೆ. ಉಳಿದ ಭೂಮಿ ಮಳೆ ಆಶ್ರಯಿಸುವುದು ಅನಿವಾರ್ಯ. ಮಳೆಯ ಕೊರತೆ, ಅತಿವೃಷ್ಟಿಯಿಂದ ರೈತರು ಪ್ರತಿ ವರ್ಷ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಜಿಲ್ಲೆಯ ರೈತರ ಸಮಸ್ಯೆಗಳಿಗೆ ಇಸ್ರೇಲ್‌ ಮಾದರಿಯ ಕೃಷಿಯಲ್ಲಿ ಪರಿಹಾರವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಅ.3ರಿಂದ ರೈತರ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಅ.25ಕ್ಕೆ ಆಯ್ಕೆ ಪೂರ್ಣಗೊಳ್ಳಲಿದ್ದು, ನ.20ಕ್ಕೆ ಮೊದಲ ತಂಡ ಇಸ್ರೇಲ್‌ಗೆ ಪ್ರಯಾಣ ಬೆಳೆಸಲಿದೆ. ಯುವ ರೈತರು, ಪದವೀಧರರು, ಕೃಷಿ ಸಂಶೋಧನೆ‌ ಬಗ್ಗೆ ಆಸಕ್ತಿ ಇರುವವರಿಗೆ ಆದ್ಯತೆ ನೀಡಲಾಗುತ್ತದೆ. ಆಸಕ್ತರು ಮೊಬೈಲ್‌ ಸಂಖ್ಯೆ 88611 61005, 9880289261 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು