ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಾಸ್ಟ್ಯಾಗ್‌’ಗೆ ಗುಯಿಲಾಳು ಟೋಲ್‌ ಅಣಿ

ನಾಳೆಯಿಂದ ಅನುಷ್ಠಾನ, ವಾಹನ ಮಾಲೀಕರಲ್ಲಿ ಗೊಂದಲ
Last Updated 29 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಡಿ.1ರ ಬಳಿಕ ‘ಫಾಸ್ಟ್ಯಾಗ್’ ಹೊಂದಿರದಿದ್ದರೆ ಟೋಲ್‌ ಫ್ಲಾಜಾದ ಸರತಿಯಲ್ಲಿ ಗಂಟೆಗಟ್ಟಲೆ ಕಾಯುವುದು ಅನಿವಾರ್ಯವಾಗಲಿದೆ. ಬಳಕೆದಾರರ ಶುಲ್ಕದ ಜೊತೆಗೆ ₹ 100 ದಂಡ ಪಾವತಿಸಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕವನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಲು ವಾಹನಗಳಿಗೆ ‘ಫಾಸ್ಟ್ಯಾಗ್‌’ ಕಡ್ಡಾಯಗೊಳಿಸಲಾಗಿದೆ. ಡಿ.1ರಿಂದ ದೇಶದ ಎಲ್ಲೆಡೆ ಇದು ಜಾರಿಗೆ ಬರುವುದು ಬಹುತೇಕ ಖಚಿತವಾಗಿದ್ದು, ‘ಫ್ಯಾಸ್ಟ್ಯಾಗ್‌’ಗೆ ವಾಹನ ಮಾಲೀಕರು ದುಂಬಾಲು ಬೀಳುತ್ತಿದ್ದಾರೆ.

‘ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ –4’ ಹಾಗೂ ‘ಸೊಲ್ಲಾಪುರ–ಮಂಗಳೂರು ರಾಷ್ಟ್ರೀಯ ಹೆದ್ದಾರಿ –13’ ಚಿತ್ರದುರ್ಗ ಜಿಲ್ಲೆಯಲ್ಲಿ ಹಾದುಹೋಗಿವೆ. ರಾಷ್ಟ್ರೀಯ ಹೆದ್ದಾರಿ –4ರ ಹಿರಿಯೂರು ತಾಲ್ಲೂಕಿನ ಗುಯಿಲಾಳು ಬಳಿ ಮಾತ್ರ ಟೋಲ್‌ ಫ್ಲಾಜಾ ಇದೆ. ಈ ಫ್ಲಾಜಾ ಹಾದು ಹೋಗುವ ಪ್ರತಿ ವಾಹನ ಇನ್ನು ಮುಂದೆ ಡಿಜಿಟಲ್‌ ಸ್ವರೂಪದಲ್ಲಿ ಬಳಕೆದಾರರ ಶುಲ್ಕ ಪಾವತಿ ಮಾಡಬೇಕು. ಇದಕ್ಕೆ ಗುಯಿಲಾಳು ಟೋಲ್‌ ಸಂಪೂರ್ಣ ಸಿದ್ಧವಾಗಿದೆ.

ಏನಿದು ಫಾಸ್ಟ್ಯಾಗ್‌?:‘ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌’ ಇರುವ ಸ್ಮಾರ್ಟ್‌ ಲೇಬಲ್‌ಗಳೇ ‘ಫಾಸ್ಟ್ಯಾಗ್‌’. ವಾಹನದ ಮುಂಭಾಗದ ಗಾಜಿನ ಮೇಲೆ ಇದನ್ನು ಅಳವಡಿಸಲಾಗುತ್ತದೆ. ಟೋಲ್‌ ಫ್ಲಾಜಾದಲ್ಲಿ ವಾಹನ ಮುಂದೆ ಸಾಗುತ್ತಿದ್ದಂತೆ ಬಳಕೆದಾರರ ಶುಲ್ಕ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವ್ಯವಸ್ಥೆಯನ್ನು ಎರಡು ವರ್ಷಗಳ ಹಿಂದೆಯೇ ಜಾರಿಗೆ ತಂದಿತ್ತು. ಪ್ರಸಕ್ತ ವರ್ಷ ವಾಹನ ನೋಂದಣಿ ಸಂದರ್ಭದಲ್ಲಿಯೇ ‘ಫಾಸ್ಟ್ಯಗ್‌’ ಕಡ್ಡಾಯಗೊಳಿಸಲಾಗಿತ್ತು.

ಶುಲ್ಕವನ್ನು ನಗದು ರೂಪದಲ್ಲಿ ಸಂಗ್ರಹಿಸುವ ವ್ಯವಸ್ಥೆ ಟೋಗಗಳಲ್ಲಿ ನ.30ರವರೆಗೆ ಇರಲಿದೆ. ಈ ವ್ಯವಸ್ಥೆ ಸಮಯ ನುಂಗಿ ಹಾಕುತ್ತಿತ್ತು. ಅಲ್ಲದೇ, ಚಿಲ್ಲರೆ ಸಮಸ್ಯೆ ಕೂಡ ಟೋಲ್‌ಗಳಲ್ಲಿ ಕಾಡುತ್ತಿತ್ತು. ಇದರಿಂದ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದವು. ಈ ಸಮಸ್ಯೆಯನ್ನು ತಪ್ಪಿಸುವ ಹಾಗೂ ಡಿಜಿಟಲ್‌ ಸ್ವರೂಪದ ವ್ಯವಹಾರನ್ನು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ‘ಫಾಸ್ಟ್ಯಾಗ್‌’ ಕಡ್ಡಾಯಗೊಳಿಸಿದೆ.

ಫಾಸ್ಟ್ಯಾಗ್‌’ ಅಳವಡಿಕೆ ಹೇಗೆ?:‘ಫಾಸ್ಟ್ಯಾಗ್‌’ ಲೇಬಲ್‌ಗಳು ಟೋಲ್‌ ಫ್ಲಾಜಾ ಹಾಗೂ ಬ್ಯಾಂಕುಗಳಲ್ಲಿ ಸಿಗುತ್ತವೆ. ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್‌ ಕೇಂದ್ರದಲ್ಲಿ ‘ಫಾಸ್ಟ್ಯಾಗ್‌’ ವಿತರಣೆ ಮಾಡಲಾಗುತ್ತಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಐಸಿಐಸಿಐ, ಆ್ಯಕ್ಸಿಸ್ ಸೇರಿ ದೇಶದ 22 ಬ್ಯಾಂಕುಗಳು ಸಹಭಾಗಿತ್ವ ಹೊಂದಿವೆ. ಚಿತ್ರದುರ್ಗ ಜಿಲ್ಲೆಯ 14 ಬ್ಯಾಂಕುಗಳಲ್ಲಿ ‘ಫಾಸ್ಟ್ಯಾಗ್‌’ ಲಭ್ಯವಿದೆ. ‘ಮೈಫಾಸ್ಟ್ಯಾಗ್‌’ ಆ್ಯಪ್‌ ಮೂಲಕವೂ ಇದನ್ನು ಹೊಂದಬಹುದು.

‘ಫಾಸ್ಟ್ಯಾಗ್‌’ ಪಡೆಯಲು ಆಧಾರ್‌ ಕಾರ್ಡ್‌ ಹಾಗೂ ವಾಹನ ನೋಂದಣಿ ಪುಸ್ತಕ (ಆರ್‌ಸಿ) ಒದಗಿಸುವುದು ಕಡ್ಡಾಯ. ಲೇಬಲ್‌ಗೆ ₹ 200 ನಿಗದಿಪಡಿಸಲಾಗಿದೆ. ₹ 100 ಸೇವಾ ಶುಲ್ಕ ಹಾಗೂ ಖಾತೆಯಲ್ಲಿ ಕನಿಷ್ಠ ₹ 200 ಬಾಕಿ ಹಣ ಇರುವುದು ಕಡ್ಡಾಯ. ಹೀಗಾಗಿ, ಫಾಸ್ಟ್ಯಾಗ್‌ ಹೊಂದಲು ₹ 500 ವೆಚ್ಚವಾಗುತ್ತದೆ. ನ.30ರ ಒಳಗೆ ‘ಫಾಸ್ಟ್ಯಾಗ್‌’ ಅಳವಡಿಸಿಕೊಂಡರೆ ಸೇವಾ ಶುಲ್ಕದ ರಿಯಾಯಿತಿ ಸಿಗಲಿದೆ’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸ ನಾಯ್ಡು.

ಶೇ 40ರಷ್ಟು ವಾಹನಕ್ಕೆ ‘ಫಾಸ್ಟ್ಯಾಗ್‌’:ಗುಯಿಲಾಳು ಟೋಲ್‌ ಫ್ಲಾಜಾದಲ್ಲಿ ಪ್ರತಿದಿನ 15 ಸಾವಿರಕ್ಕೂ ಅಧಿಕ ವಾಹನ ಸಂಚರಿಸುತ್ತವೆ. ಇವುಗಳಲ್ಲಿ ಶೇ 40ರಷ್ಟು ವಾಹನಗಳು ಮಾತ್ರ ಹೊಸ ವ್ಯವಸ್ಥೆಗೆ ಸಜ್ಜಾಗಿವೆ.

ದೇಶದಾದ್ಯಂತ ಡಿ.1ರಿಂದ ಈ ವ್ಯವಸ್ಥೆ ಕಡ್ಡಾಯಗೊಳ್ಳುತ್ತಿದ್ದರೂ ಗುಯಿಲಾಳು ಟೋಲ್‌ನಲ್ಲಿ ನ.1ರಿಂದಲೇ ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿತ್ತು. ಟೋಲ್‌ನಲ್ಲಿ ಎರಡು ಬದಿಗೆ ತಲಾ ಏಳರಂತೆ ಒಟ್ಟು 14 ಗೇಟುಗಳಿವೆ. ಇದರಲ್ಲಿ ಅಂಬುಲೆನ್ಸ್‌ ಪ್ರಯಾಣಕ್ಕೆ ಪ್ರತ್ಯೇಕ ಗೇಟಿದೆ. ಮತ್ತೊಂದು ಗೇಟಿನಲ್ಲಿ ನಗದು ಸ್ವರೂಪದಲ್ಲಿ ಶುಲ್ಕ ಸಂಗ್ರಹಿಸಲಾಗುತ್ತದೆ. ಐದು ಗೇಟುಗಳಲ್ಲಿ ‘ಫಾಸ್ಟ್ಯಾಗ್‌’ ಹೊಂದಿದ ವಾಹನಕ್ಕೆ ಮಾತ್ರ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT