ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳು ಹಬ್ಬ: ಮಂಡಿಯೂರಿ ಎಡೆ ಉಣ್ಣುವ ಸವಾಲು

Published 4 ಮಾರ್ಚ್ 2024, 16:35 IST
Last Updated 4 ಮಾರ್ಚ್ 2024, 16:35 IST
ಅಕ್ಷರ ಗಾತ್ರ

ಸಿರಿಗೆರೆ: ಸಮೀಪದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ಕಾಳು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. 100 ದಾಸಯ್ಯಗಳು 1,100 ಎಡೆ ಉಣ್ಣುವ ವಿಶೇಷ ಆಚರಣೆ ಗಮನ ಸೆಳೆಯಿತು.

ಗ್ರಾಮದ ಆಂಜನೇಯಸ್ವಾಮಿ ಉತ್ಸವದೊಂದಿಗೆ ಆಚರಿಸಲಾಗುವ ಈ ಹಬ್ಬಕ್ಕೆ ವಿಶೇಷ ಸಂಪ್ರದಾಯ ತಳುಕು ಹಾಕಿಕೊಂಡಿದೆ. ಪೂಜೆ ಕಾರ್ಯಕ್ರಮ ಮುಗಿದ ನಂತರ ಊರಿನ 100 ದಾಸಯ್ಯಗಳು 1,100 ಬಾಳೆಎಲೆಗಳಲ್ಲಿ ಮಾಡಲಾದ ಎಡೆಗಳನ್ನು ಊಟ ಮಾಡಬೇಕು. ಅದು ಅವರಿಗೆ ಸವಾಲು. ಇದು ಹಬ್ಬದ ಸಂಪ್ರದಾಯ.

ಮಹಿಳೆಯರು ಮತ್ತು ಮಕ್ಕಳು ಈ ಉತ್ಸವದಲ್ಲಿ ಸಂಭ್ರಮದಿಂದ ಪಾಲುಗೊಳ್ಳುತ್ತಾರೆ. ಹಬ್ಬದ ಅಂಗವಾಗಿ ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸಿ, ರಂಗೋಲಿಯ ಚಿತ್ತಾರ ಮೂಡಿಸಲಾಗಿತ್ತು. ಪ್ರತಿ ಮನೆಯಲ್ಲಿಯೂ ಹುರುಳಿ ಕಾಳು ಬೇಯಿಸಿ, ಬೆಲ್ಲದ ರಸ ಹಾಗೂ ಹಾಲು ಬಳಸಿದ ಖಾದ್ಯವನ್ನು ವಿಶೇಷವಾಗಿ ತಯಾರಿಸಲಾಗುತ್ತದೆ.

ಹಬ್ಬದ ಅಂಗವಾಗಿ ಗ್ರಾಮದ ಮುಖ್ಯ ಬೀದಿಯುದ್ದಕ್ಕೂ 1100 ಬಾಳೆಎಲೆಗಳನ್ನು ಹಾಕಿ, ಪ್ರತಿಯೊಂದು ಎಲೆಯ ಮೇಲೆ ನಾಲ್ಕಾರು ಸುಲಿದ ಬಾಳೆಹಣ್ಣುಗಳನ್ನು ಇಟ್ಟು, ತುಪ್ಪ ಹಾಕಲಾಗುತ್ತದೆ. ಈ ಖಾದ್ಯಕ್ಕೆ ರುಚಿಕಟ್ಟಲೆಂದೇ ಬೆಲ್ಲವನ್ನು ಪುಡಿ ಮಾಡಿ ಹಾಕಲಾಗುತ್ತದೆ. ಇದಕ್ಕಾಗಿ ಸುಮಾರು 5000 ಬಾಳೆಹಣ್ಣುಗಳನ್ನು ಬಳಸಲಾಗುತ್ತದೆ. ಹೀಗೆ ಎಡೆ ಸಿದ್ಧಗೊಂಡ ನಂತರ ಆಂಜನೇಯಸ್ವಾಮಿಯ ಮೆರವಣಿಗೆ ಗ್ರಾಮದೆಲ್ಲೆಡೆ ಸಾಗುತ್ತದೆ.

ದಾಸಯ್ಯಗಳು ಪ್ರಸಾದ ಸ್ವೀಕಾರಕ್ಕೆ ಸಿದ್ಧರಾಗುತ್ತಾರೆ. ಬಾಳೆಎಲೆಯ ಮೇಲಿನ ಪ್ರಸಾದವನ್ನು ಕೈಯಿಂದ ಮುಟ್ಟದೆ, ಮಂಡಿಯೂರಿ, ನೇರವಾಗಿ ಎಡೆ ಸ್ವೀಕಾರ ಮಾಡಬೇಕು. ಇದನ್ನು ನೋಡಲು ನೂರಾರು ಜನರು ಸೇರುತ್ತಾರೆ. ಗ್ರಾಮದ ಮುಖಂಡರಾದ ಗೌಡ್ರ ಮಹದೇವಪ್ಪ, ಕೃಷ್ಣಮೂರ್ತಿ, ಪೂಜಾರ್‌ ತಿಮ್ಮಪ್ಪ, ಪೂಜಾರ್‌ ಮಧು, ಶಿವಣ್ಣ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT