ಶನಿವಾರ, ಸೆಪ್ಟೆಂಬರ್ 24, 2022
21 °C
ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಚಾಲನೆ – ಸಂಭ್ರಮಕ್ಕೆ ಕೋಟೆನಾಡು ಸಿದ್ಧ

ಮೊಳಗಲಿದೆ ಸ್ವಾತಂತ್ರ್ಯೋತ್ಸವದ ಕಹಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವದ ಕಹಳೆ ಮೊಳಗಲಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ‘ಹರ್‌ ಘರ್‌ ತಿರಂಗಾ’ (ಮನೆ ಮನೆಯಲ್ಲೂ ರಾಷ್ಟ್ರೀಯ ತ್ರಿವರ್ಣ ಧ್ವಜ) ಅಭಿಯಾನಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಚಾಲನೆ ನೀಡಿದರು.

‘ಸಾರ್ವಜನಿಕರು ಅವರವರ ಮನೆಗಳ ಮೇಲೆ ಆಗಸ್ಟ್‌ 13ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸಬೇಕು’ ಎಂದರು.

‘ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಧ್ವಜಗಳು ಮಾರಾಟಕ್ಕೆ ಲಭ್ಯವಿದೆ. ₹ 22ರಂತೆ ಧ್ವಜಗಳನ್ನು ಸಾರ್ವಜನಿಕರು ತಮ್ಮ ಹಣದಿಂದ ಖರೀದಿಸಿ ಅವುಗಳನ್ನು ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ಧನಂಜಯ ಮಾತನಾಡಿ, ‘ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ದೇಶದ ಜನತೆಗೆ ಬಹಳ ವಿಶೇಷವಾಗಿದೆ. ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜಾರೋಣ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರವು ಅಭಿಯಾನ ಹಮ್ಮಿಕೊಂಡಿದೆ’ ಎಂದು ಹೇಳಿದರು.

‘ಆಗಸ್ಟ್‌ 15ರಂದು ಬೆಳಿಗ್ಗೆ 9ಕ್ಕೆ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2.5 ಲಕ್ಷ ತ್ರಿವರ್ಣ ಧ್ವಜಗಳನ್ನು ಜಿಲ್ಲೆಯಲ್ಲಿ ಮಾರಾಟ ಮಾಡಲು ಪ್ರಸ್ತಾವ ಸಲ್ಲಿಸಲಾಗಿತ್ತು. ಈಗಾಗಲೇ 50 ಸಾವಿರ ಧ್ವಜಗಳು ಬಂದಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ತಿಳಿಸಿದರು.

‘ಎರಡು ಮೂರು ದಿನಗಳಲ್ಲಿ ಪುನಃ 50 ಸಾವಿರ ಧ್ವಜಗಳು ಬರಲಿವೆ. ನಾಗರಿಕರಿಗೆ ಸುಲಭವಾಗಿ ಧ್ವಜಗಳು ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಂಚೆ ಕಚೇರಿಗಳಲ್ಲೂ ಧ್ವಜ ಮಾರಾಟ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿಯಿಂದ ಧ್ವಜಗಳನ್ನು ಸ್ಥಳೀಯ ಗಾರ್ಮೆಂಟ್‌ಗಳಿಂದ ಸಿದ್ಧಗೊಳಿಸಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮಹಾಂತೇಶ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶ್ವರಪ್ಪ ಇದ್ದರು.

22 ತಂಡಗಳ ಕವಾಯತು

ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್‌ 15ರಂದು ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭಕ್ಕೆ ನೃತ್ಯ ರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಲಿವೆ.

ಪೊಲೀಸ್‌, ಶಸ್ತ್ರಾಸ್ತ್ರ ಮೀಸಲು ಪಡೆ, ಗೃಹ ರಕ್ಷಕ, ಅರಣ್ಯ, ಅಗ್ನಿಶಾಮಕ, ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ ಸೇರಿದಂತೆ ಶಾಲಾ ವಿದ್ಯಾರ್ಥಿಗಳ 22ಕ್ಕೂ ಹೆಚ್ಚು ತಂಡಗಳು ಕವಾಯತು ನಡೆಸಲಿವೆ. ದೇಶ ಭಕ್ತಿ ಬಿಂಬಿಸುವ ನೃತ್ಯ ರೂಪಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. ಸಂಜೆ 6ರಿಂದ ನಗರದ ತರಾಸು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು