ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಬರದ ತೀವ್ರತೆಗೆ ನಲುಗಿದ ಪುಷ್ಪ ಕೃಷಿ

Published 18 ಮೇ 2024, 8:28 IST
Last Updated 18 ಮೇ 2024, 8:28 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಹಳ್ಳ ಹರಿಯೋ ಹಾಗೆ ಮಳೆ ಬಂದ್ರೆ ಮಾತ್ರ ಈ ಬಾರಿ ಉಳಿತೀವಿ. ಇಲ್ಲ ಅಂದ್ರೆ ಒಪ್ಪತ್ತಿನ ಊಟಕ್ಕೂ ಕಷ್ಟ ಆಗತ್ತೆ’ ಎಂಬುದು ತಾಲ್ಲೂಕಿನ ರೈತರ ಹೇಳಿಕೆ.

ಕಳೆದ ಕೆಲ ದಿನಗಳಿಂದ ಚದುರಿದಂತೆ ಬೀಳುತ್ತಿರುವ ಮಳೆ ಕೊಂಚ ಆಶಾಭಾವ ಮೂಡಿಸಿದ್ದರೂ, ಬರದ ಆತಂಕ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ತಾಲ್ಲೂಕಿನಲ್ಲಿ ಎಲ್ಲೆಡೆ ಹೊಲ–ಗದ್ದೆ, ತೋಟಗಳು ಬಯಲು ಪ್ರದೇಶದಂತಾಗಿವೆ. ತೋಟಗಳಲ್ಲಿ ಮಾತ್ರ ಹಸಿರು ಕಾಣಿಸುತ್ತಿದೆ. ಕೃಷಿ ಹೊಂಡಗಳು ಬರಿದಾಗಿ ತಿಂಗಳುಗಳೇ ಕಳೆದಿವೆ.

ಮಳೆಯಿಲ್ಲದೆ ಕೊಳವೆಬಾವಿಗಳು ಬತ್ತಿದ ಪರಿಣಾಮ ಕೃಷಿ ಚಟುವಟಿಕೆ ಕ್ಷೀಣಿಸಿದೆ.ತಾಲ್ಲೂಕಿನ ರೈತರ ವರ್ಷ ಪೂರ್ಣ ಆದಾಯದ ಮೂಲವಾಗಿದ್ದ ಸೊಪ್ಪು, ತರಕಾರಿ, ಹೂವಿನ ಕೃಷಿ ಬರಕ್ಕೆ ನಲುಗಿದೆ. ಇಳುವರಿ ಸಂಪೂರ್ಣ ಕುಂಠಿತವಾದ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಆದರೆ ಇದರ ಲಾಭ ಮಾತ್ರ ರೈತರ ಕೈ ಸೇರುತ್ತಿಲ್ಲ.

ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ಹಾಗೂ ಚಳ್ಳಕೆರೆ ತಾಲ್ಲೂಕು ಸೇರಿ ಜಿಲ್ಲೆಯಲ್ಲಿ 3,439 ಹೆಕ್ಟೇರ್‌ನಲ್ಲಿ ಹೂವು ಬೆಳೆಯುವ ಪ್ರದೇಶವಾಗಿದೆ. ಉತ್ತಮ ಇಳುವರಿ ಇದ್ದಾಗ ನಿತ್ಯ ಟನ್‌ಗಟ್ಟಲೇ ‘ಹೂವು’ ಮಾರುಕಟ್ಟೆಗೆ ಬರುತ್ತದೆ. ಸೇವಂತಿ, ಸುಗಂಧರಾಜ, ಕನಕಾಂಬರ, ಮಲ್ಲಿಗೆ, ಕಾಕಡ, ಚೆಂಡು ಹೂ, ಗುಲಾಬಿ, ಬಟನ್‌ ರೋಸ್, ಅಸ್ಟರ್‌, ಬರ್ಡ್‌ ಆಫ್‌ ಪ್ಯಾರಡೈಸ್‌ ಹೂಗಳನ್ನು ಇಲ್ಲಿನ ಬೆಳೆಗಾರರು ಹೆಚ್ಚಾಗಿ ಬೆಳೆಯುತ್ತಾರೆ. ಈ ಪೈಕಿ ಸೇವಂತಿ ಹೂ ಮೊದಲ ಸ್ಥಾನದಲ್ಲಿದೆ.

ಮದಕರಿಪುರ, ಹುಣಸೆಕಟ್ಟೆ ಸೇರಿ ಹಲವು ಗ್ರಾಮಗಳಲ್ಲಿ ಪುಷ್ಪ ಕೃಷಿಯನ್ನು ಬಹುಬೆಳೆ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಚಿಕ್ಕಸಿದ್ದವ್ವನಹಳ್ಳಿ, ಪಾಲವ್ವನಹಳ್ಳಿ, ಕ್ಯಾದಿಗ್ಗೆರೆ ಗ್ರಾಮಗಳಿಂದ ರೈತರು ಹೂವು–ಮೊಗ್ಗು ತಂದು ಮಾರಾಟ ಮಾಡುತ್ತಾರೆ. ಆದರೆ ಈ ಬಾರಿ ಮಳೆ ಬಾರದೆ ಬರ ಆವರಿಸಿದ ಕಾರಣ ಹೂವು ಬಿಡಿಸಿದ ಕೈಗಳು ಖಾಲಿಯಾಗಿವೆ.

‘ಮೂವತ್ತು ವರ್ಷ ಕೈ ಹಿಡಿದಿದ್ದ ಹೂವಿನ ಬೆಳೆ ನೀರಿಲ್ಲದೆ ಕೈತಪ್ಪಿದೆ. ಒಣಗಿದ ಗಿಡಗಳನ್ನು ಕಿತ್ತು ಹಾಕುವಾಗ ಸಂಕಟವಾಗುತ್ತದೆ. ನಾಲ್ಕು ಕೊಳವೆಬಾವಿ ಪೈಕಿ ಎರಡರಲ್ಲಿ ಮಾತ್ರ ಕೊಂಚ ನೀರು ಬರುತ್ತಿದೆ. ಇದನ್ನು ನಂಬಿ ಪುನಃ ಹೂವು ಬೆಳೆಗೆ ಮುಂದಾಗಿದ್ದೇನೆ. ಈ ಬಾರಿ ವಿಫಲವಾದರೆ ಬದುಕು ಕಷ್ಟವಾಗುತ್ತದೆ’ ಎನ್ನುತ್ತಾರೆ ಮದಕರಿಪುರದ ರೈತ ನಾಗಣ್ಣ.

ಹೂವು ಬೆಳಗೆ ನೀರಿನ ಜತೆಗೆ ವಾತಾವರಣ ಸಹ ತಂಪಾಗಿರಬೇಕು. ಆದರೆ ಈ ಬಾರಿ ತಾಪಮಾನ 40 ಡಿಗ್ರಿ ಸೆಲಿಯಸ್ಸ್‌ ದಾಟಿದ ಪರಿಣಾಮ ಪುಷ್ಪ ಕೃಷಿ ನಲುಗಿದೆ.

‘ಭೂಮಿಯಲ್ಲಿ ತೇವಾಂಶವಿಲ್ಲದೆ ಹೊಲಗಳ ಬದು, ಗೋಮಾಳಗಳಲ್ಲಿ ಮೇವು ಚಿಗುರೊಡೆದಿಲ್ಲ. ಇದರಿಂದ ಕುರಿ, ಮೇಕೆಗಳಿಗೆ ಮೇವು ಹೊಂದಿಸುವುದು ಕಷ್ಟವಾಗಿದೆ. ನಿತ್ಯ 25ರಿಂದ 30 ಕಿ.ಮೀ. ಸಾಗಿದರೂ ಕುರಿ, ಮೇಕೆಗಳ ಹಸಿವು ನೀಗುತ್ತಿಲ್ಲ’ ಎನ್ನುತ್ತಾರೆ ದೊಡ್ಡಸಿದ್ದವ್ವನಹಳ್ಳಿ ರಾಜಪ್ಪ.

ಜಾನುವಾರುಗಳಿಗೆ ಕುಡಿಯಲು ನೀರು ಸಿಗದ ಸ್ಥಿತಿ ಗ್ರಾಮೀಣ ಪ್ರದೇಶದಲ್ಲಿದೆ. ಬೆಳೆ ಸಾಲ ಸಹ ರೈತರನ್ನು ಸಂಕಷ್ಟಕ್ಕೆ ನೂಕಿದ್ದು, ಸಾಲಕ್ಕೆ ಸಾಲ ಎಂಬ ಸ್ಥಿತಿಗೆ ತಲುಪಿದ್ದಾರೆ. ಬಹುತೇಕರು ಕೃಷಿ ತ್ಯಜಿಸಿ ಬೃಹತ್‌ ನಗರಗಳತ್ತ ಮುಖ ಮಾಡುತ್ತಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಸಮೀಪ ಬತ್ತಿದ ಕೃಷಿ ಹೊಂಡ
ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಸಮೀಪ ಬತ್ತಿದ ಕೃಷಿ ಹೊಂಡ
ಎಂ.ಎನ್‌.ನಾಗಣ್ಣ
ಎಂ.ಎನ್‌.ನಾಗಣ್ಣ
ಪಿ.ಸಾವಿತ್ರಮ್ಮ
ಪಿ.ಸಾವಿತ್ರಮ್ಮ
ಎಸ್‌.ಪದ್ಮ
ಎಸ್‌.ಪದ್ಮ

Quote - ಮಳೆ ಇಲ್ಲದೆ ಕುಟುಂಬದ ಆದಾಯದ ಮೂಲವಾಗಿದ್ದ ಹೂವಿನ ಬೆಳೆ ಕೈ ತಪ್ಪಿದೆ. ನೀರಿಲ್ಲದೆ ಗಿಡಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಬದುಕು ಕಷ್ಟವಾಗಲಿದೆ. ಎಂ.ಎನ್‌.ನಾಗಣ್ಣ ಹೂವು ಬೆಳೆಗಾರ ಮದಕರಿಪುರ

Quote - ಬರದಿಂದ ತೋಟಗಳು ಒಣಗಿವೆ. ತಾಪಮಾನ ಹೆಚ್ಚಿದ ಪರಿಣಾಮ ಹೂವಿನ ಗಿಡಗಳು ಬಾಡಿದ್ದು ಹೂವು ಬಿಡಿಸುವ ಕೂಲಿ ಕೆಲಸ ಇಲ್ಲದಂತಾಗಿದೆ. ನಿತ್ಯ ₹ 300 ಸಿಗುತ್ತಿದ್ದ ಕೂಲಿ ಸಹ ಕೈತಪ್ಪಿದೆ. ಪಿ.ಸಾವಿತ್ರಮ್ಮ ಕೂಲಿ ಕಾರ್ಮಿಕ ಮಹಿಳೆ ಮದಕರಿಪುರ

Quote - ಕೂಲಿ ಅರಸಿ ಊರಿನಿಂದ ಊರಿಗೆ ಬಂದರೂ ಕೆಲಸ ಸಿಗುತ್ತಿಲ್ಲ. ನಾಲ್ಕೈದು ತಿಂಗಳಿನಿಂದ ದುಡಿಮೆ ಇಲ್ಲದಂತಾಗಿದೆ. ದೇವರು ಕಣ್ಣು ಬಿಟ್ಟು ಮಳೆ ಬಂದರೆ ಎಲ್ಲರ ಬದುಕು ಹಸನಾಗುತ್ತದೆ. ಎಸ್‌.ಪದ್ಮ ಕೂಲಿ ಕಾರ್ಮಿಕ ಮಹಿಳೆ ಕುರುಡಿಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT