ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಲಾಕ್‌ಡೌನ್ ಆತಂಕದಲ್ಲಿ ಹೂ ಬೆಳೆಗಾರರು

ಕಳೆದ ವರ್ಷದ ನಷ್ಟದಿಂದ ಚೇತರಿಕೆ ಕಾಣುವ ಹೊತ್ತಲ್ಲೇ ಮತ್ತೆ ಸಂಕಷ್ಟ
Last Updated 23 ಏಪ್ರಿಲ್ 2021, 5:09 IST
ಅಕ್ಷರ ಗಾತ್ರ

ಮೊಳಕಾಲ್ಮುರು:ಕೊರೊನಾ ಎರಡನೇ ಅಲೆ ಹೆಚ್ಚಳವಾಗುತ್ತಿರುವ ಪರಿಣಾಮ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದು ತಾಲ್ಲೂಕಿನ ಹೂವಿನ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಸರ್ಕಾರ ಮತ್ತೆ ಲಾಕ್‌ಡೌನ್‌ ಮಾಡಬಹುದು ಎಂದು ಆತಂಕ ಎದುರಾಗಿದೆ.

‘ತಾಲ್ಲೂಕಿನಲ್ಲಿ ಕಾಡುತ್ತಿರುವ ಅಂತರ್ಜಲ ಸಮಸ್ಯೆ ಮಧ್ಯೆಯೂ ಕಷ್ಟಪಟ್ಟುಹೂವಿನ ಕೃಷಿ ಮಾಡಿದ್ದೆವು. ಕಳೆದ ಬಾರಿ ಏಕಾಏಕಿ ಲಾಕ್‌ಡೌನ್ ಮಾಡಿದ ಕಾರಣ ದೇವಸ್ಥಾನಗಳು, ಹಬ್ಬಗಳು ಸ್ಥಗಿತವಾಗಿ ಹೂವನ್ನು ಕೇಳುವವರು ಇಲ್ಲದಾಗಿತ್ತು. ಹೂಬಿಡಿಸುವುದನ್ನು ಕೈಬಿಟ್ಟಿದ್ದೆವು. ಅನೇಕ ಬೆಳೆಗಾರರು ಲಕ್ಷಾಂತರ ರೂಪಾಯಿ ನಷ್ಟ ಕಂಡಿದ್ದಾರೆ’ ಎಂದು ಬೆಳೆಗಾರ ಧರ್ಮಣ್ಣ ಬೇಸರಿಸಿದರು.

ದೇವಸಮುದ್ರ ಹೋಬಳಿಯ ರಾಂಪುರ, ಕೆರೆಕೊಂಡಾಪುರ, ಓಬಳಾಪುರ, ಜೆ.ಬಿ.ಹಳ್ಳಿ, ಕೆಳಗಿನ ಕಣಿವೆ, ಸಂತೇಗುಡ್ಡ, ಬೊಮ್ಮದೇವರಹಳ್ಳಿ ಗ್ರಾಮಗಳ ಸುತ್ತಮುತ್ತ ಹೂವಿನ ಕೃಷಿ ಹೆಚ್ಚಾಗಿದೆ. ಕನಕಾಂಬರ, ಕಾಕಡ ಮಲ್ಲಿಗೆ, ಸೇವಂತಿಗೆ ಹೂವುಗಳನ್ನು ಇಲ್ಲಿ ಬೆಳೆಯಲಾಗುತ್ತದೆ. 100ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿದೆ. ಹೂ ಬಿಡಿಸುವುದು, ಕಟ್ಟುವ ಕಾರ್ಯ ಸೇರಿನೂರಾರು ಕಾರ್ಮಿಕರು ಇದರಿಂದಬದುಕು ಕಂಡುಕೊಂಡಿದ್ದಾರೆ ಎಂದು ಹೇಳಿದರು.

ಇಲ್ಲಿ ಬೆಳೆದ ಹೂವನ್ನು ಕಟಾವು ಮಾಡಿ ನಿತ್ಯ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ರಾಯದುರ್ಗ, ಚಳ್ಳಕೆರೆ ಮಾರುಕಟ್ಟೆಗಳಿಗೆ ಕಳಿಸಲಾಗುತ್ತಿದೆ. ಲಾಕ್‌ಡೌಡೌನ್ ತೆರವು ಆದರೂ ಇನ್ನೂ ಬಿಡಿ ಹೂವಿನ ದರ ಅಷ್ಟಾಗಿ ಸುಧಾರಣೆಯಾಗಿಲ್ಲ ಎಂದು ಬೆಳೆಗಾರನಿಂಗಾರೆಡ್ಡಿ ಹೇಳಿದರು.

‘ಈಗ ಕನಕಾಂಬರ, ಕಾಕಡ ಮಲ್ಲಿಗೆ ಬೆಳೆದು ನಿಂತಿವೆ. ಕಳೆದ ವರ್ಷದ ನಷ್ಟದ ಮಧ್ಯೆಯೂ ಗೊಬ್ಬರ, ಉಸ್ತುವಾರಿ ಸೇರಿ ಅಪಾರ ಖರ್ಚು ಭರಿಸಿದ್ದೇವೆ. ಮತ್ತೆ ಲಾಕ್‌ಡೌನ್ ಮಾಡಿದಲ್ಲಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ದಾರಿಯಂತಹ ಯೋಚನೆಗಳನ್ನು ಮಾಡಬೇಕಾಗುತ್ತದೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು’ ಎಂದು ಬೆಳೆಗಾರ ಮಂಜಣ್ಣ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT