ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರು ಹೊಂದಿದ್ದ 2,547 ಬಿಪಿಎಲ್‌ ಕಾರ್ಡ್‌ ರದ್ದು; ₹ 2.93 ಲಕ್ಷ ದಂಡ ವಸೂಲಿ

ಜಿಲ್ಲೆಯಲ್ಲಿ ಅನರ್ಹರು ಹೊಂದಿದ್ದ 2,547 ಬಿಪಿಎಲ್‌ ಕಾರ್ಡ್‌ ರದ್ದು
Last Updated 1 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಆರ್ಥಿಕ ಸ್ಥಿತಿವಂತರು ಪಡೆದಿದ್ದ 2,547 ಬಿಪಿಎಲ್‌ ಪಡಿತರ ಚೀಟಿಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರದ್ದುಪಡಿಸಿದೆ. ಇಂಥ ಅನರ್ಹರಿಂದ ₹ 2.93 ಲಕ್ಷ ದಂಡವನ್ನೂ ವಸೂಲಿ ಮಾಡಿದೆ.

ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡುವ ಕಾರ್ಯವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಿಲ್ಲೆಯಲ್ಲಿ ಮೂರು ತಿಂಗಳಿಂದ ಚುರುಕುಗೊಳಿಸಿದೆ. ಸ್ವಯಂ ಪ್ರೇರಿತವಾಗಿ ಬಿಪಿಎಲ್‌ ಕಾರ್ಡ್‌ ಒಪ್ಪಿಸಿದವರಿಗೆ ಎಪಿಎಲ್‌ ಕಾರ್ಡ್‌ ನೀಡಲಾಗಿದೆ. ಮಾಹಿತಿ ಬಚ್ಚಿಟ್ಟವರನ್ನು ಪತ್ತೆ ಮಾಡಿ ಅವರ ವಿರುದ್ಧ ದಂಡದ ಅಸ್ತ್ರ ಪ್ರಯೋಗಿಸಲಾಗುತ್ತಿದೆ.

2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ 3.51 ಲಕ್ಷ ಕುಟುಂಬಗಳಿದ್ದು, 16.59 ಲಕ್ಷ ಜನಸಂಖ್ಯೆ ಇದೆ. ಬಿಪಿಎಲ್‌, ಅಂತ್ಯೋದಯದ 3.69 ಲಕ್ಷ ಕಾರ್ಡ್‌ ಹಾಗೂ 32 ಸಾವಿರ ಎಪಿಎಲ್‌ ಸೇರಿ 4.01 ಲಕ್ಷ ಪಡಿತರ ಚೀಟಿಗಳು ಜಿಲ್ಲೆಯಲ್ಲಿವೆ. ಅನರ್ಹರು ಹೊಂದಿದ ಪಡಿತರ ಚೀಟಿಗಳನ್ನು ಪತ್ತೆ ಮಾಡುವ ಕಾರ್ಯ ಇನ್ನೂ ಮುಂದುವರಿದಿದೆ. ಸರ್ಕಾರಿ ನೌಕರರು ಹಾಗೂ ನಿಗದಿಗಿಂತ ಹೆಚ್ಚು ಭೂಮಿ ಹೊಂದಿದ ಸ್ಥಿತಿವಂತ ರೈತರ ಪತ್ತೆಗೆ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.

ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರು, ವಾರ್ಷಿಕ ₹ 1.2 ಲಕ್ಷ ಆದಾಯ ಗಳಿಸುವವರು, ಮೂರು ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿದವರು ಹಾಗೂ ಕಾರು ಮಾಲೀಕರು ಅಂತ್ಯೋದಯ ಹಾಗೂ ಆದ್ಯತಾ ಪಟ್ಟಿಯಲ್ಲಿರುವ ಕುಟುಂಬಗಳ (ಬಿಪಿಎಲ್‌) ಪಡಿತರ ಚೀಟಿ ಹೊಂದುವಂತಿಲ್ಲ. ಇಂಥವರು ಸ್ವಯಂಪ್ರೇರಿತವಾಗಿ ಪಡಿತರ ಚೀಟಿಯನ್ನು ಒಪ್ಪಿಸುವಂತೆ ಸರ್ಕಾರ ಗಡುವು ನೀಡಿತ್ತು. ಸರ್ಕಾರದ ಸೂಚನೆ ಪಾಲಿಸಿ ಪಡಿತರ ಚೀಟಿಯನ್ನು ಒಪ್ಪಿಸಿದವರು ವಿರಳ. ಹೀಗಾಗಿ, ಅನರ್ಹ ಚೀಟಿಗಳ ಪತ್ತೆಗೆ ಅಧಿಕಾರಿಗಳು ಕ್ರಮಕೈಗೊಂಡರು.

‘ಕಾರು ಹಾಗೂ ನಾಲ್ಕು ಚಕ್ರದ ವಾಹನ ಹೊಂದಿದ ಕುಟುಂಬಗಳ ಮಾಹಿತಿ ಪಡೆದೆವು. ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರ ವಿವರ ಪಡೆದೆವು. ಇಲಾಖೆಯ ಎಲ್ಲ ಸಿಬ್ಬಂದಿ ಶ್ರಮವಹಿಸಿ ಅನರ್ಹರನ್ನು ಪತ್ತೆ ಮಾಡಿದರು. ಈ ಕಾರ್ಯ ನಿರಂತರವಾಗಿ ನಡೆಯಲಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ವಿವರಿಸಿದರು.

ಬಿಪಿಎಲ್‌ ಚೀಟಿ ಹೊಂದಿದ ಅನರ್ಹರ ಕುಟುಂಬಕ್ಕೆ ಪ್ರಾಥಮಿಕ ಹಂತದಲ್ಲಿ ನೋಟಿಸ್‌ ನೀಡಲಾಗಿದೆ. ಸೌಲಭ್ಯವನ್ನು ದುರುಪಯೋಗ ಮಾಡಿಕೊಂಡ ಪರಿಣಾಮವಾಗಿ ದಂಡ ಪಾವತಿಸುವಂತೆ ಸೂಚಿಸಲಾಗಿತ್ತು. ಇದಕ್ಕೆ ಆರಂಭದಲ್ಲಿ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಹಾರ ಇನ್‌ಸ್ಪೆಕ್ಟರ್, ಶಿರಸ್ತೇದಾರ್‌ ಸೇರಿ ಇಲಾಖೆಯ ಸಿಬ್ಬಂದಿ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ಬಳಿಕ ದಂಡ ವಸೂಲಿಯಾಗಿದೆ. ಸರ್ಕಾರಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುವರಲ್ಲಿ ಇದು ಭಯ ಹುಟ್ಟಿಸಿದೆ.

ಐಟಿ ಪಾವತಿಸಿ ಪೇಚಿಗೆ ಸಿಲುಕಿದರು

ಆದಾಯ ತೆರಿಗೆ (ಐಟಿ) ಪಾವತಿಸುವವರು ಬ್ಯಾಂಕುಗಳಲ್ಲಿ ಸಾಲ ಪಡೆಯುವುದು ಸುಲಭ. ಈ ಮಾರ್ಗವನ್ನು ರೈತರು ಅನುಸರಿಸಿ ಪೇಚಿಗೆ ಸಿಲುಕಿದ್ದಾರೆ. ಐಟಿ ಪಾವತಿಸಿದ ಕುಟುಂಬಗಳ ಬಿಪಿಎಲ್‌ ಚೀಟಿ ರದ್ದಾಗಿದೆ.

ಹೆಚ್ಚು ಸಾಲ ಪಡೆಯುವ ಉದ್ದೇಶದಿಂದ ಅನೇಕರು ಹೆಚ್ಚು ಆದಾಯ ತೋರಿಸಿ ತೆರಿಗೆ ಪಾವತಿಸಿದ್ದಾರೆ. ಇದರ ಆಧಾರದ ಮೇರೆಗೆ ಬ್ಯಾಂಕುಗಳಿಂದ ಸಾಲವನ್ನೂ ಪಡೆದಿದ್ದಾರೆ. ಪಡಿತರ ಚೀಟಿ ಪತ್ತೆ ಮಾಡುವ ಕಾರ್ಯ ಚುರುಕುಗೊಳಿಸಿದ ಅಧಿಕಾರಿಗಳು ಆದಾಯ ತೆರಿಗೆ ಪಾವತಿದಾರರ ವಿವರ ಪಡೆದಿದ್ದಾರೆ. ಇದರೊಂದಿಗೆ ಲಗತ್ತಿಸಿದ್ದ ಆಧಾರ್‌ ಕಾರ್ಡ್‌ ಸುಳಿವಿನ ಮೇರೆಗೆ ಪಡಿತರ ಚೀಟಿಯನ್ನು ರದ್ದುಪಡಿಸಿದ್ದಾರೆ.

‘ಸಾಲ ಪಡೆಯಲು ಆದಾಯ ತೆರಿಗೆ ಪಾವತಿಸಿ ಪಡಿತರ ಚೀಟಿ ಕಳೆದುಕೊಂಡ ಕೆಲವರು ಇಲಾಖೆಗೆ ಲಿಖಿತ ಅಹವಾಲು ಸಲ್ಲಿಸಿದ್ದಾರೆ. ಪಡಿತರ ಚೀಟಿ ಮರಳಿ ನೀಡುವಂತೆ ಕೋರಿಕೊಂಡಿದ್ದಾರೆ. ಅವರ ಕುಟುಂಬದ ಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದರು.

* ವ್ಯಕ್ತಿಯೊಬ್ಬರು ಸರ್ಕಾರದಿಂದ ಪಡೆಯುವ ಪ್ರತಿ ಸೌಲಭ್ಯಕ್ಕೆ ಆಧಾರ್‌ ಕಾರ್ಡ್‌ ಲಿಂಕ್‌ ಆಗಿದೆ. ಇದರ ನೆರವಿನಿಂದ ಅನರ್ಹರನ್ನು ಪತ್ತೆ ಮಾಡುವುದು ಸುಲಭವಾಗಿದೆ.

-ಪಿ.ಶಿವಣ್ಣ, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT