ವಾಣಿವಿಲಾಸಕ್ಕೆ ಹೆಚ್ಚುವರಿ 5 ಟಿಎಂಸಿ ನೀರಿಗೆ ಒತ್ತಾಯ

ಹಿರಿಯೂರು: ‘ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿವಿಲಾಸ ಜಲಾಶಯಕ್ಕೆ ಕೇವಲ 2 ಟಿಎಂಸಿ ಅಡಿ ನೀರು ಮೀಸಲಿಟ್ಟಿದ್ದು, ಹೆಚ್ಚುವರಿ ಯಾಗಿ 5 ಟಿಎಂಸಿ ಅಡಿ ನೀರು ಪೂರೈಕೆಗೆ ಮುಖ್ಯಮಂತ್ರಿಗಳಿಂದ ಆದೇಶ ಮಾಡಿಸಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಭಾನುವಾರ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನೀರಾವರಿ ವಿಷಯಕ್ಕೆ ಸಂಬಂಧಿಸಿ ಭಾನುವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಈ ಒತ್ತಾಯ ಕೇಳಿಬಂದಿತು.
‘ಪ್ರಸ್ತುತ ಇರುವ 2 ಟಿಎಂಸಿ ಅಡಿ ನೀರಿನಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ಎಷ್ಟು ನೀರು, ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಡಿಆರ್‌ಡಿಒ, ನಾಯಕನಹಟ್ಟಿ, ಐಮಂಗಲ ಹೋಬಳಿಗೆ ಕುಡಿಯುವ ನೀರು, ಚಳ್ಳಕೆರೆ–ಮೊಳಕಾಲ್ಮುರು ತಾಲ್ಲೂಕುಗಳಿಗೆ ವೇದಾವತಿ ನದಿ ಮೂಲಕ ನೀರು ಹರಿಸಲಾಗುತ್ತಿದೆ. ಇದಲ್ಲದೆ ಹೊಳಲ್ಕೆರೆ ತಾಲ್ಲೂಕಿಗೂ ನೀರು ಕೊಡುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ’ ಎಂದು ಮುಖಂಡರು ತಿಳಿಸಿದರು.
‘ಜಲಾಶಯಕ್ಕೆ ಬರುವ 2 ಟಿಎಂಸಿ ಅಡಿ ನೀರನ್ನು ಯಾರ‍್ಯಾರಿಗೆ ಎಷ್ಟು ಪ್ರಮಾಣದಲ್ಲಿ ಹಂಚುತ್ತಾರೆ? ಇದಕ್ಕೆ ಲೆಕ್ಕಾಚಾರ ಬೇಡವೇ? ಈಗಿನ ಬೇಡಿಕೆಯಂತೆ ಕನಿಷ್ಠ 10 ಟಿಎಂಸಿ ಅಡಿ ನೀರು ಬಂದಲ್ಲಿ ಮಾತ್ರ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯ. ಇಲ್ಲವಾದಲ್ಲಿ ಭವಿಷ್ಯದಲ್ಲಿ ತಾಲ್ಲೂಕು ತಾಲ್ಲೂಕುಗಳ ಜನರ ಮಧ್ಯೆ ವೈಮನಸ್ಸಿಗೆ ದಾರಿಯಾಗುತ್ತದೆ’ ಎಂದು ರೈತ ಮುಖಂಡರು ಎಚ್ಚರಿಸಿದರು.
ಸಭೆಯಲ್ಲಿ ಕಸವನಹಳ್ಳಿ ರಮೇಶ್, ಎಚ್.ಆರ್. ತಿಮ್ಮಯ್ಯ, ಆಲೂರು ಸಿದ್ದರಾಮಣ್ಣ, ಬಬ್ಬೂರು ಸುರೇಶ್, ಆನಂದಶೆಟ್ಟಿ, ಸಿ. ನಾರಾಯಣಾಚಾರ್, ಷಫೀವುಲ್ಲಾ, ಆರ್.ಕೆ. ಗೌಡ, ಗಿರಿಸ್ವಾಮಿ, ಪಾಪಣ್ಣ, ಮಂಜುನಾಥ ಮಾಳಿಗೆ, ಎಂ.ಎಂ.ಎಂ. ಮಣಿ, ಶ್ರೀನಿವಾಸ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.