ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸ್ಮಾರಕವಾಗದ ನಿಜಲಿಂಗಪ್ಪನವರ ‘ವಿನಯ’

Last Updated 2 ಅಕ್ಟೋಬರ್ 2020, 5:06 IST
ಅಕ್ಷರ ಗಾತ್ರ
ADVERTISEMENT
""
""

ಚಿತ್ರದುರ್ಗ: ರಾಷ್ಟ್ರನಾಯಕ, ಕರ್ನಾಟಕ ಏಕೀಕರಣದ ರೂವಾರಿ ಎಸ್.ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವುದಾಗಿ ಸರ್ಕಾರ ಘೋಷಿಸಿ ಹತ್ತು ತಿಂಗಳು ಕಳೆದಿವೆ. ಬಜೆಟ್‌ನಲ್ಲಿ ₹5 ಕೋಟಿ ಅನುದಾನ ಮೀಸಲಿಡಲಾಗಿದೆ. ಅನುಷ್ಠಾನಗೊಳಿಸುವ ಪ್ರಕ್ರಿಯೆ ಮಾತ್ರ ಇನ್ನೂ ಕಾಗದದಲ್ಲೇ ಉಳಿದಿದೆ.

ಬೆಂಗಳೂರಿನಲ್ಲಿರುವ ಎಸ್‌.ನಿಜಲಿಂಗಪ್ಪ ಅವರ ಪುತ್ಥಳಿಗೆ 2019ರ ಡಿ.10ರಂದು ಮಾಲಾರ್ಪಣೆ ಮಾಡಿದ ಬಿ.ಎಸ್‌.ಯಡಿಯೂರಪ್ಪ ಸ್ಮಾರಕದ ನಿರ್ಧಾರವನ್ನು ಪ್ರಕಟಿಸಿದ್ದರು. ನಿಜಲಿಂಗಪ್ಪ ಅವರ 118ನೇ ಜನ್ಮದಿನಕ್ಕೆ ಸರ್ಕಾರ ನೀಡಿದ ಕೊಡುಗೆ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತ್ತು. ಸರ್ಕಾರದ ನಿಲುವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ವರ್ಷ ಸಮೀಪಿಸಿದರೂ ಸ್ಮಾರಕ ಕಾರ್ಯಗತವಾಗದಿರುವುದು ಇವರಲ್ಲಿ ಬೇಸರ ಮೂಡಿಸಿದೆ.

ಚಿತ್ರದುರ್ಗದ ಎಸ್‌.ನಿಜಲಿಂಗಪ್ಪ ರಾಷ್ಟ್ರರಾಜಕಾರಣದಲ್ಲಿ ಛಾಪು ಮೂಡಿಸಿದ ವ್ಯಕ್ತಿತ್ವ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡ ನಾಯಕ. ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ ಗಾದಿಯವರೆಗೆ ಹಲವು ಸ್ಥಾನಗಳನ್ನು ಅಲಂಕರಿಸಿದವರು. ಮಣ್ಣಿನ ಸಂಬಂಧವನ್ನು ಕಡಿದುಕೊಳ್ಳದ ಅವರು ‘ವಿನಯ’ದಲ್ಲೇ ಕೊನೆಯುಸಿರೆಳೆದರು. ಅವರು ವಾಸವಾಗಿದ್ದ ‘ವಿನಯ’ವನ್ನು ಸ್ಮಾರಕವಾಗಿಸುವ ಒತ್ತಾಯ ಅಂದಿನಿಂದಲೇ ಮುನ್ನೆಲೆಗೆ ಬಂದಿತು.

1937ರ ಸಮಯದಲ್ಲಿ ಭಾರತ ಬ್ರಿಟಿಷರ ಕಪಿಮುಷ್ಟಿಯಲ್ಲಿತ್ತು. ಹೆಸರಾಂತ ವಕೀಲರಾಗಿದ್ದ ಎಸ್‌.ನಿಜಲಿಂಗಪ್ಪ ಅವರು ಜಿಲ್ಲಾಧಿಕಾರಿ ನಿವಾಸದ ಪಕ್ಕದಲ್ಲೇ ಮನೆ ಕಟ್ಟಿದರು. 26 ಸಾವಿರ ಚದರ ಅಡಿಯ ಈ ಕಟ್ಟಡ ಪಾರಂಪರಿಕ ಶೈಲಿಯಲ್ಲಿದೆ. ಮನೆಯ ಮುಂದೆ ಆಕರ್ಷಕ ಕೈತೋಟವಿದೆ. ನ್ಯಾಯಾಲಯಕ್ಕೆ ಬರುತ್ತಿದ್ದ ಕಕ್ಷಿದಾರರ ಊಟಕ್ಕೂ ಮನೆಯಲ್ಲಿ ವ್ಯವಸ್ಥೆ ಇತ್ತು. ನಿಜಲಿಂಗಪ್ಪನವರೇ ಬೆಳೆಸಿದ ಮಾವು, ತೆಂಗಿನ ಮರಗಳು ಈಗಲೂ ಫಲ ನೀಡುತ್ತಿವೆ. ನಿರ್ವಹಣೆಯ ಕೊರತೆಯಿಂದ ಕೆಲ ಮರಗಳು ಒಣಗಿವೆ.

ಹೆಂಡದ ವಿರುದ್ಧ ತುರುವನೂರಿನಲ್ಲಿ ನಡೆದ ಚಳವಳಿ ನಿಜಲಿಂಗಪ್ಪ ಅವರನ್ನು ಸ್ವಾತಂತ್ರ್ಯ ಹೋರಾಟದ ಅಂಗಳಕ್ಕೆ ತಂದು ನಿಲ್ಲಿಸಿತು. ಅಪಾರ ವಿದ್ವತ್ತು, ಚಾಣಾಕ್ಷ ನಡೆಯಿಂದ ಸ್ವಾತಂತ್ರ್ಯಾನಂತರ ಅವರು ರಾಷ್ಟಮಟ್ಟದಲ್ಲಿ ಗುರುತಿಸಿಕೊಂಡರು. ಇಳಿವಯಸ್ಸಿನಲ್ಲಿ ಚಿತ್ರದುರ್ಗದ ವೈಟ್‌ಹೌಸ್‌ ಎಂದೇ ಗುರುತಿಸಿಕೊಂಡ ‘ವಿನಯ’ಕ್ಕೆ ಮರಳಿದರು. ಅವರ ಕಾಲಾನಂತರ ಮನೆ ಎರಡು ಬಾರಿ ಕಳವಾಯಿತು. ಕರ್ನಾಟಕ ರತ್ನ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಅಮೂಲ್ಯ ಪ್ರಶಸ್ತಿಗಳು ಕಣ್ಮರೆಯಾದವು. ಪೊಲೀಸರು ಕಳ್ಳರನ್ನು ಪತ್ತೆ ಮಾಡಿ ಅರ್ಧ ಕೆ.ಜಿ ಬೆಳ್ಳಿ ಜಪ್ತಿ ಮಾಡಿದರು. ಆದರೆ, ‍ಪ್ರಶಸ್ತಿಗಳು ಮಾತ್ರ ನಿವಾಸಕ್ಕೆ ಮರಳಲೇ ಇಲ್ಲ.

2009ರಲ್ಲಿ ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ನಿಜಲಿಂಗಪ್ಪನವರ ಮನೆಯನ್ನು ಸ್ಮಾರಕ ಮಾಡುವುದಾಗಿ ಘೋಷಿಸಿದರು. ಇದಕ್ಕೆ ₹ 1 ಕೋಟಿ ಅನುದಾನವನ್ನೂ ಮೀಸಲಿಟ್ಟರು. ನಿಜಲಿಂಗಪ್ಪನವರ ಕುಟುಂಬದೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸುವುದು ವಿಳಂಬವಾಗಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಹತ್ತು ತಿಂಗಳ ಹಿಂದೆ ಮತ್ತೆ ಇದಕ್ಕೆ ಚಾಲನೆ ನೀಡಿದ ಸರ್ಕಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಜವಾಬ್ದಾರಿ ನೀಡಿದೆ.

‘ಎಸ್‌.ನಿಜಲಿಂಗಪ್ಪ ಅವರ ನಿವಾಸ ಸ್ವಾಧೀನಕ್ಕೆ ಪಡೆದು ಅಭಿವೃದ್ಧಿ ಮಾಡಬೇಕಿದೆ. ಮೇ ತಿಂಗಳಿಂದ ಪತ್ರ ವ್ಯವಹಾರ ನಡೆದಿದೆ. ನಿಜಲಿಂಗಪ್ಪ ಅವರ ಮಕ್ಕಳು ಹಾಗೂ ಸಂಬಂಧಿಕರು ಬೆಂಗಳೂರಿನಲ್ಲಿ ಇರುವುದರಿಂದ ಸ್ವಾಧೀನ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ. ಮನೆ ಖರೀದಿ ಮೌಲ್ಯವನ್ನು ಲೋಕೋಪಯೋಗಿ ಇಲಾಖೆ ನಿರ್ಧರಿಸಲಿದೆ. ಪರಿಹಾರದ ಮೊತ್ತವನ್ನು ಸರ್ಕಾರ ನಿರ್ಧರಿಸಲಿದೆ. ಶೀಘ್ರವೇ ಎಲ್ಲ ಕೆಲಸವೂ ಪೂರ್ಣಗೊಳ್ಳಲಿದೆ’ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ.

ಚಿತ್ರದುರ್ಗದಲ್ಲಿರುವ ಎಸ್‌.ನಿಜಲಿಂಗಪ್ಪ ಅವರ ನಿವಾಸ.

ಲೋಕೋಪಯೋಗಿ ಇಲಾಖೆ ಎಂಜಿನಿಯರುಗಳು ಈಚೆಗೆ ‘ವಿನಯ’ಕ್ಕೆ ಭೇಟಿ ನೀಡಿ ಮನೆಯ ಮೌಲ್ಯವನ್ನು ಅಂದಾಜು ಮಾಡಿದ್ದಾರೆ. ವಿ.ಪಿ.ಬಡಾವಣೆಯಲ್ಲಿ ನಿವೇಶನಕ್ಕಿರುವ ಬೆಲೆ ಹಾಗೂ ಕಟ್ಟಡದ ಸುಸ್ಥಿತಿಯನ್ನು ಗಮನಿಸಿ ₹ 4.18 ಕೋಟಿಗೆ ಖರೀದಿಸಬಹುದು ಎಂಬ ಅಭಿಪ್ರಾಯವನ್ನು ಜಿಲ್ಲಾಧಿಕಾರಿ ಮುಂದಿಟ್ಟಿದ್ದಾರೆ. ಉಳಿದ ₹ 82 ಲಕ್ಷ ಅನುದಾನದಲ್ಲಿ ಹಲವು ಕಾಮಗಾರಿ ಕೈಗೆತ್ತಿಕೊಳ್ಳುವ ಸಲಹೆ ನೀಡಿದ್ದಾರೆ. ಇದಕ್ಕೆ ಶೀಘ್ರ ಅನುಮೋದನೆ ಸಿಕ್ಕರೆ ಮಾತ್ರ ನಿಜಲಿಂಗಪ್ಪನವರ 119ನೇ ಜನ್ಮದಿನಕ್ಕೆ ಮನೆ ಸ್ಮಾರಕವಾಗುವ ಸಾಧ್ಯತೆ ಇದೆ.

ಮತ್ತೊಂದೆಡೆ ನಿಜಲಿಂಗಪ್ಪನವರ ಸಮಾಧಿ ಸ್ಥಳವನ್ನು ಸ್ಮಾರಕವಾಗಿ ರೂಪಿಸಲಾಗಿದೆ. ಎಸ್‌.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್‌ ನಿರ್ವಹಣೆಯ ಹೊಣೆ ಹೊತ್ತಿದೆ. ಚಿತ್ರದುರ್ಗದಿಂದ 10 ಕಿ.ಮೀ ದೂರದಲ್ಲಿರುವ ಈ ಸ್ಮಾರಕದ ಸಮೀಪವೇ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಆದರೆ, ಗಣಿಗಾರಿಕೆ ಮಾತ್ರ ಸ್ಥಗಿತಗೊಂಡಿಲ್ಲ ಎಂಬುದಕ್ಕೆ ಸ್ಮಾರಕದಲ್ಲಿ ಕಾಣುವ ಬಿರುಕುಗಳೇ ಸಾಕ್ಷ್ಯ ಒದಗಿಸುತ್ತವೆ.

‘ಸಮಾಧಿ ಸ್ಥಳದ ಸ್ಮಾರಕದ ನಿರ್ವಹಣೆಗೆ ಮಾಸಿಕ ₹ 50 ಸಾವಿರಕ್ಕೂ ಅಧಿಕ ಹಣ ವೆಚ್ಚವಾಗುತ್ತಿದೆ. ಟ್ರಸ್ಟ್‌ಗೆ ನೀಡುವ ಅನುದಾನವನ್ನು ಸರ್ಕಾರ ಕಡಿತಗೊಳಿಸಿದ್ದರಿಂದ ನಿರ್ವಹಣೆ ಕಷ್ಟವಾಗುತ್ತಿದೆ’ ಎನ್ನುತ್ತಾರೆ ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್‌ನ ಸಂಯೋಜಕ ಕೆಇಬಿ ಷಣ್ಮುಖಪ್ಪ.

ಚಿತ್ರದುರ್ಗದ ಎಸ್‌.ನಿಜಲಿಂಗಪ್ಪನವರ ಮನೆಯ ಆವರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT