ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್

ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಾರಿಗೆ ಸೌಲಭ್ಯ, ಶಾಸಕರ ಅನುದಾನದಲ್ಲಿ ಖರೀದಿ
Last Updated 14 ಆಗಸ್ಟ್ 2022, 2:53 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಮಲ್ಲಾಡಿಹಳ್ಳಿ ಮಾದಣ್ಣನವರ (ಎಂ.ಎಂ.) ಸರ್ಕಾರಿ ಆಂಗ್ಲಮಾಧ್ಯಮ ಶಾಲೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರೂ ಆಗಿರುವ ಎಂ. ಚಂದ್ರಪ್ಪ ಅವರು ತಮ್ಮ ಶಾಸಕರ ಅನುದಾನದಲ್ಲಿ ಬಸ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಶಾಲೆಗಳ ವಿದ್ಯಾರ್ಥಿಗಳಿಗೆ ಇನ್ನು ಉಚಿತವಾಗಿ ಸಾರಿಗೆ ಸೇವೆ ಲಭಿಸಲಿದೆ.

ಎಂ.ಎಂ ಸರ್ಕಾರಿ ಶಾಲೆಗೆ ಒಂದು ಬಸ್, ಕಾಶೀಪುರ ಪಬ್ಲಿಕ್ ಶಾಲೆಗೆ ಒಂದು ಬಸ್ ಬಂದಿದೆ. ಮುಂದಿನ ವಾರ ಎಂ.ಎಂ. ಶಾಲೆಗೆ ಮತ್ತೆ ಮೂರು ಬಸ್‌ಗಳು ಬರಲಿವೆ.ಫೋರ್ಸ್ ಕಂಪನಿಯ ತಲಾ ₹ 27 ಲಕ್ಷ ಬೆಲೆಯ ಐದು ಬಸ್‌ಗಳನ್ನು ಖರೀದಿಸಲಾಗಿದೆ.

ನ್ಯೂ ಎಕ್ಸ್‌ಟೆಷನ್‌ ಸ್ಕೂಲ್‌ (ಎನ್‌ಇಎಸ್) ಇದೀಗ ಎಂ.ಎಂ. ಸರ್ಕಾರಿಯಲ್ಲಿ ವಿಲೀನಗೊಂಡಿದ್ದು, ಒಂದೇ ಕಟ್ಟಡದಲ್ಲೇ ನಡೆಯುತ್ತಿದೆ. ಒಂದು ಬಸ್ ಪಟ್ಟಣದ ವ್ಯಾಪ್ತಿಯಲ್ಲಿಯ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಮೀಸಲಿಡಲಾಗಿದೆ. ಇನ್ನು ಮೂರು ಬಸ್‌ಗಳಲ್ಲಿ ಪಟ್ಟಣದ ಸುತ್ತಲಿನ ಸುಮಾರು 10 ಕಿ.ಮೀ ವ್ಯಾಪ್ತಿಯ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಬಸ್ ನಿರ್ವಹಣೆಯ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ (ಎಸ್‌ಡಿಎಂಸಿ) ನೀಡಲಾಗಿದೆ. ಬಸ್‌ನ ಡೀಸೆಲ್, ಚಾಲಕರ ವೇತನಕ್ಕೆ ಕನಿಷ್ಠ ಶುಲ್ಕ ಪಡೆಯಲು ತೀರ್ಮಾನಿಸಲಾಗಿದೆ.

‘ಸರ್ಕಾರಿ ಶಾಲೆಗಳಿಗೆ ಶಾಸಕರ ಅನುದಾನದಲ್ಲಿ ಬಸ್ ಖರೀದಿ ಮಾಡಬಹುದು ಎಂದು ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿದೆ. ಆದರೆ, ನಾನು ಆರು ತಿಂಗಳ ಹಿಂದೆಯೇ ಬಸ್ ಖರೀದಿಗೆ ಅನುದಾನ ನೀಡಿದ್ದೆ’ ಎಂದು ಶಾಸಕ ಎಂ. ಚಂದ್ರಪ್ಪ
ತಿಳಿಸಿದ್ದಾರೆ.

ಎಂ.ಎಂ ಶಾಲೆಗೆ ಸುಮಾರು ₹ 8.5 ಕೋಟಿ ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಶಾಲೆಗೆ ಈಗಾಗಲೇ ₹ 30 ಲಕ್ಷ ಮೌಲ್ಯದ ಡೆಸ್ಕ್‌ಗಳು ಬಂದಿದೆ. ಶಾಸಕರ ಅನುದಾನದಲ್ಲಿ ಶೀಘ್ರದಲ್ಲೇ ₹ 30 ಲಕ್ಷದ ಪೀಠೋಪಕರಣಗಳು ಬರಲಿವೆ. ಕಂಪ್ಯೂಟರ್ ಲ್ಯಾಬ್, ಶಾಲೆಯ ಪ್ರತಿ ಕೊಠಡಿಗೆ ಪ್ರಾಜೆಕ್ಟರ್, ಸ್ಮಾರ್ಟ್‌ ಕ್ಲಾಸ್, 55 ಇಂಚಿನ ಟಿ.ವಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಕಟ್ಟಡದಲ್ಲಿ 28 ಕೊಠಡಿಗಳಿದ್ದು, ನೆಲಮಹಡಿಗೆ ಹವಾನಿಯಂತ್ರಣ ವ್ಯವಸ್ಥೆ ಮಾಡುವ ಉದ್ದೇಶವೂ
ಇದೆ.

ಒಂದೇ ಸೂರಿನಡಿ ಸದ್ಯ ಎಲ್‌ಕೆಜಿಯಿಂದ ಪಿಯುವರೆಗೆ ಒಟ್ಟು 1,500 ವಿದ್ಯಾರ್ಥಿಗಳು ಓದುತ್ತಿದ್ದಾರೆ.

*
ಸರ್ಕಾರ ಶಾಲೆಗಳಿಗೆ ಬಸ್ ನೀಡುವ ತೀರ್ಮಾನ ಮಾಡುವ ಮೊದಲೇ ನಾನು ಬಸ್ ಖರೀದಿಗೆ ಅನುದಾನ ನೀಡಿದ್ದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗೆ ಬಸ್ ಸೌಲಭ್ಯ ಒದಗಿಸಿದ ಮೊದಲ ತಾಲ್ಲೂಕು ನಮ್ಮದು.
– ಎಂ. ಚಂದ್ರಪ್ಪ, ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT