ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಕೈ ಹಿಡಿದ ಏಲಕ್ಕಿ ಬಾಳೆ: ಗಂಗಸಮುದ್ರ ಗ್ರಾಮದ ಯುವ ರೈತನ ಸಾಧನೆ

ಗಂಗಸಮುದ್ರ ಗ್ರಾಮದ ಯುವ ಪದವೀಧರ ರೈತ ರಂಗಸ್ವಾಮಿ ಸಾಧನೆ
Last Updated 5 ಜನವರಿ 2022, 4:57 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಗಂಗಸಮುದ್ರ ಗ್ರಾಮದ ಯುವ ಪದವೀಧರ ರೈತ ಕೆ. ರಂಗಸ್ವಾಮಿ 5 ಎಕರೆ ಪ್ರದೇಶದಲ್ಲಿ 3,000 ಗುಣಿ ಏಲಕ್ಕಿ ಬಾಳೆ ಬೆಳೆದಿದ್ದು, ಕೈತುಂಬಾ ಸಂಪಾದನೆ ಮಾಡಿದ್ದಾರೆ.

ಡಿ. 2020ರಲ್ಲಿ ನಾಟಿ ಮಾಡಿದ್ದ ಬಾಳೆ ಗೊನೆಯೊಡೆದಿದ್ದು, ಈಗಾಗಲೇ ಮೂರು ಹಂತಗಳಲ್ಲಿ ಮಾರಾಟ ಮಾಡಿದ್ದಾರೆ. ಪ್ರತಿ ಕೆ.ಜಿ.ಗೆ ₹ 45ರಂತೆ 3 ಟನ್, ₹ 35ರಂತೆ 2 ಟನ್,₹ 30ರಂತೆ ಒಂದು ಟನ್ ಬಾಳೆಗೊನೆ ಮಾರಾಟ ಮಾಡಿ ಹೆಚ್ಚು ಲಾಭ ಗಳಿಸಿದ್ದಾರೆ.

‘₹ 24ಕ್ಕೆ ಒಂದರಂತೆ ಬೆಂಗಳೂರಿನಿಂದ ಅಂಗಾಂಶ ಕೃಷಿ ಬಾಳೆ ಸಸಿ ತರಿಸಿದ್ದೆವು. ಎರಡು ಅಡಿ ಅಗಲ ಹಾಗೂ ಎರಡು ಅಡಿ ಆಳದ ಗುಂಡಿ ತೆಗೆಸಿ ಪ್ರತಿ ಗುಂಡಿಗೆ ಒಂದು ಬುಟ್ಟಿ ಕುರಿ ಗೊಬ್ಬರ, ಗುಡ್ಡದಲ್ಲಿ ಸಿಗುವ ರಗಸ್ ಪಟ್ಟೆ (ಕತ್ತಾಳೆ), ಬೇವಿನ ಸೊಪ್ಪು ಹಾಕಿ ಮಣ್ಣು ಮುಚ್ಚಿ ಸುಮಾರು 20 ದಿನ ಬಿಡಬೇಕು. ಇದು ಕೊಳೆತ ನಂತರ ಮಣ್ಣು ಮಿಶ್ರಣ ಮಾಡಿ, ನೀರು ಹಾಯಿಸಿ ಬಾಳೆ ಸಸಿ ನಾಟಿ ಮಾಡಬೇಕು. ಬಾಳೆ ಸಸಿಗಳನ್ನು 20 ದಿನಗಳ ಮುಂಚೆಯೇ ತರಿಸಿ ಇಡಬೇಕು. ಸಸಿಗಳು ನಮ್ಮ ಹವಾಮಾನಕ್ಕೆ ಹೊಂದಿಕೊಂಡ ನಂತರವೇ ನಾಟಿ ಮಾಡಬೇಕು’ ಎನ್ನುತ್ತಾರೆ ರಂಗಸ್ವಾಮಿ.

‘ನಮಗೆ ಕೃಷಿ ಎಂದರೆ ಇಷ್ಟ. ಬೆಳಿಗ್ಗೆಯಿಂದ ಸಂಜೆಯವರೆಗೆ ತೋಟದಲ್ಲೇ ಇರುತ್ತೇವೆ. ತೋಟವನ್ನು ಮಕ್ಕಳಂತೆ ಸಾಕಿದ್ದೇವೆ. ಬಾಳೆ 9 ತಿಂಗಳಿಗೆ ಹೊಂಬಾಳೆ ಒಡೆಯುತ್ತದೆ. 11 ತಿಂಗಳಿಗೆ ಕಟಾವಿಗೆ ಬರುತ್ತದೆ. ಬಾಳೆ ಗಿಡಗಳು ನೆಲಕ್ಕೆ ಬೀಳದಂತೆ ಗೂಟಗಳನ್ನು ನಿಲ್ಲಿಸಬೇಕು. ಏಕ ವಾರ್ಷಿಕ ಬೆಳೆ ಬೆಳೆಯುವ ಬದಲು ಬಾಳೆ ಬೆಳೆದರೆ ಹೆಚ್ಚು ಲಾಭ ಗಳಿಸಬಹುದು. ಒಮ್ಮೆ ನಾಟಿ ಮಾಡಿದರೆ ಮೂರು ವರ್ಷ ಫಸಲು ಪಡೆಯಬಹುದು. ಈಗ ವ್ಯಾಪಾರಿಗಳು ತೋಟಕ್ಕೇ ಬಂದು ಬಾಳೆ ಖರೀದಿಸುತ್ತಾರೆ. ನಮ್ಮ ತೋಟದ ಬಾಳೆ ಬೆಂಗಳೂರು ಹಾಗೂ ಗೋವಾಗೆ ಕಳುಹಿಸಲಾಗುತ್ತಿದೆ’ ಎನ್ನುತ್ತಾರೆ ರಂಗಸ್ವಾಮಿ ಅವರ ತಂದೆ ಕರಿಯಪ್ಪ ಹಾಗೂ ತಾಯಿ ಸತ್ಯಮ್ಮ.

‘ಬಾಳೆಯೊಂದಿಗೆ ಅಡಿಕೆ ಸಸಿಗಳನ್ನು ಹಾಕಿದ್ದೇವೆ. ಬಾಳೆಗೆ ಕೊಡುವ ಗೊಬ್ಬರದಿಂದ ಅಡಿಕೆ ಸಸಿಗಳು ಉತ್ತಮವಾಗಿ ಬೆಳೆಯುತ್ತಿವೆ. 10 ಲೋಡ್ ಕುರಿ ಗೊಬ್ಬರ ಹಾಕಿಸಿದ್ದು, ಸಾವಯವಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ. ಬೇಸಿಗೆಯಲ್ಲಿ ಬಾಳೆಯ ನೆರಳು ಅಡಿಕೆಗೆ ನೆರವಾಗುತ್ತದೆ. ತೋಟ ಮಾಡಲು ನಮ್ಮ ಅತ್ತೆಯರಾದ ಕರಿಯಮ್ಮ, ಜಯಮ್ಮ ಹಾಗೂ ಸಹೋದರ ನಾಗರಾಜ್ ಪ್ರೇರಣೆ ಇದೆ’ ಎನ್ನುತ್ತಾರೆ ಅವರು.

ಬಾಳೆ ಗೊನೆಯಲ್ಲಿ 300 ಹಣ್ಣುಗಳು

ರಂಗಸ್ವಾಮಿ ತೋಟದಲ್ಲಿ ಬಾಳೆ ಸಮೃದ್ಧವಾಗಿ ಬೆಳೆದಿದ್ದು, ಗೊನೆಗಳು 18 ರಿಂದ 20 ಕೆ.ಜಿ ತೂಗುತ್ತವೆ. ಪ್ರತಿಗೊನೆಯಲ್ಲಿ 250ರಿಂದ 300 ಹಣ್ಣುಗಳಿರುತ್ತವೆ.

‘ಸಾಮಾನ್ಯವಾಗಿ ಏಲಕ್ಕಿ ಬಾಳೆ ಗೊನೆಗಳು ಕಡಿಮೆ ತೂಕವಿರುತ್ತವೆ. ಆದರೆ ಉತ್ತಮ ನೀರು, ಗೊಬ್ಬರ, ಮಣ್ಣು, ಹವಾಮಾನದಿಂದಾಗಿ ದೊಡ್ಡ ಗೊನೆಗಳು ಬಿಟ್ಟಿವೆ. ಪ್ರತಿ ಗೊನೆಗೆ ₹ 500 ರಿಂದ ₹ 900ರವರೆಗೆ ಸಿಕ್ಕಿದೆ. ಒಂದೇ ವರ್ಷಕ್ಕೆ ಖರ್ಚು ತೆಗೆದು ₹ 4.5 ಲಕ್ಷ ಆದಾಯ ಬಂದಿದೆ’ ಎನ್ನುತ್ತಾರೆ ರಂಗಸ್ವಾಮಿ.

...

ಕೃಷಿಯಿಂದ ಲಾಭ ಇಲ್ಲ ಎಂದು ಕೈಚೆಲ್ಲಿ ಕೂರಬಾರದು. ಹೊಸ ಆಲೋಚನೆ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿದರೆ ಭೂತಾಯಿ ಮೋಸ ಮಾಡುವುದಿಲ್ಲ.

-ರಂಗಸ್ವಾಮಿ, ಗಂಗಸಮುದ್ರದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT