ಚಳ್ಳಕೆರೆ: ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಬಳಿ 9 ಎಕರೆ ಪ್ರದೇಶದಲ್ಲಿ₹ 1.06 ಕೋಟಿ ವೆಚ್ಚದಲ್ಲಿ ಮಾದರಿ ಗೋಶಾಲೆ ನಿರ್ಮಿಸಲು ಜಿಲ್ಲಾಡಳಿತ ಕ್ರಮವಹಿಸಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಚಿತ್ರದುರ್ಗ ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಪ್ರಾಣಿದಯಾಸಂಘ ಗಳ
ಸಹಯೋಗದಲ್ಲಿ ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಗೊಂದು ಗೋಶಾಲೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನರೇಗಾ ಯೋಜನೆಯಡಿಯಲ್ಲಿ ₹ 60 ಲಕ್ಷ ಮತ್ತು ಪಶುವೈದ್ಯ ಇಲಾಖೆಯಿಂದ ₹ 46 ಲಕ್ಷ ಸೇರಿ ₹ 1.06 ಕೋಟಿ ವೆಚ್ಚದಲ್ಲಿ ಜಿಲ್ಲಾ ಮಟ್ಟದ ಮಾದರಿ ಗೋಶಾಲೆ ನಿರ್ಮಿಸಲಾಗುವುದು. ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಗೋಶಾಲೆ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು. ಜಾನುವಾರು ತಪಾಸಣೆಗೆ ಪಶುವೈದ್ಯರು, ಸಹಾಯಕರನ್ನು ಕೂಡಲೇ ಗೋಶಾಲೆಗೆ ನಿಯೋಜನೆ ಮಾಡಬೇಕು. ಸಮರ್ಪಕ ನೀರು, ಮೇವು ಒದಗಿಸುವುದರ ಜತೆಗೆ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ‘ಸರ್ಕಾರ ಮಂಜೂರು ಮಾಡಿದ್ದ ಜಿಲ್ಲೆಗೊಂದರಂತೆ ಗೋಶಾಲೆ ನಿರ್ಮಿಸಲು ಚಳ್ಳಕೆರೆ ತಾಲ್ಲೂಕು ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಅರೆಮಲೆನಾಡು ಪ್ರದೇಶವಾದ ಹೊಳಲ್ಕೆರೆ, ಹೊಸದುರ್ಗವನ್ನು ಹೊರತುಪಡಿಸಿ ಇನ್ನುಳಿದ ಹಿರಿಯೂರು, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಹೆಚ್ಚುವರಿಯಾಗಿ ಗೋಶಾಲೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ, ‘ಗೋಶಾಲೆ ಜಾಗದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಎರಡು ಕೊಳವೆಬಾವಿ ಕೊರೆಯಿಸಲಾಗಿದೆ. 100 ದನಗಳಿಗೆ ಒಂದು ಶೆಡ್ ನಿರ್ಮಿಸಲಾಗುವುದು. ಜಾನುವಾರು ಸಂಖ್ಯೆ ನೋಡಿಕೊಂಡು ಹೆಚ್ಚುವರಿ ಶೆಡ್ ನಿರ್ಮಿಸಲಾಗುವುದು. ರಕ್ಷಣೆಗಾಗಿ ಗೋಶಾಲೆಯ 9 ಎಕರೆ ಪ್ರದೇಶದ ಸುತ್ತಲು ಮುಳ್ಳು ತಂತಿ ಬೇಲಿ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.
ರೈತ ಸಂಘದ ರಾಜ್ಯ ಮುಖಂಡ ಸೋಮಗುದ್ದು ರಂಗಸ್ವಾಮಿ, ‘ಜಾನುವಾರನ್ನು ಹೊಡೆದುಕೊಂಡು ಹೋದವರು ಗೋಶಾಲೆಯಲ್ಲೇ ಉಳಿಯಬೇಕು. ಮೇವು, ನೀರು ಒದಗಿಸುವ ಮೂಲಕ ರಾಸುಗಳನ್ನು ಕಾಪಾಡಿಕೊಳ್ಳಬೇಕು’ ಎಂದು ರೈತರಿಗೆ ಸಲಹೆ ನೀಡಿದರು.
ಕುರಿ ಮಂಡಳಿಯ ಸಹಾಯಕ ನಿರ್ದೇಶಕ ಡಾ. ತಿಪ್ಪೇಸ್ವಾಮಿ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ. ತಿಪ್ಪೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜು, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೇವಣ್ಣ, ಪಶು ವೈದ್ಯಾಧಿಕಾರಿ ಡಾ,ರಾಜಣ್ಣ, ಡಾ.ಶ್ರೀನಿವಾಸ್‍ಬಾಬು, ಡಾ.ರಘವೀರ, ಡಾ. ಶಿವಪ್ರಕಾಶ್, ಡಾ.ಕುಮಾರ್,
ಕಂದಾಯ ಇಲಾಖೆ ಅಧಿಕಾರಿ ನಿಂಗೇಗೌಡ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.