ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು ಹೊರಗಿಲ್ಲ; ನಮ್ಮೊಳಗೆ ಇದ್ದಾರೆ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Last Updated 3 ನವೆಂಬರ್ 2021, 6:17 IST
ಅಕ್ಷರ ಗಾತ್ರ

ಸಾಣೇಹಳ್ಳಿ (ಹೊಸದುರ್ಗ): ಸತ್ಯದ ದಾರಿಯಲ್ಲಿ ಸಾಗಿದರೆ, ನಮ್ಮನ್ನು ನಾವು ಅರ್ಥಮಾಡಿಕೊಂಡರೆ ದೇವರ ಅಗತ್ಯವೂ ಇಲ್ಲ. ಧರ್ಮ, ದೇವರು ಹೊರಗಿಲ್ಲ; ನಮ್ಮ ಒಳಗಡೆಯೇ ಇದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಾಣೇಹಳ್ಳಿಯಲ್ಲಿ ಆರಂಭ ವಾಗಿರುವ ನಾಟಕೋತ್ಸವದ ಮೊದಲ ದಿನವಾದ ಮಂಗಳವಾರ ಶಿವಧ್ವಜಾರೋಹಣ ನೆರವೇರಿಸಿ, ಚಿಂತನಾಗೋಷ್ಠಿಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘ಧ್ಯಾನ, ಮೌನ, ಪ್ರಾರ್ಥನೆ, ತತ್ವಗಳ ಭೋಧನೆ ಪರಿಣಾಮಕಾರಿಯಾಗ ಬೇಕಾದರೆ ಸಜ್ಜನರ ಸಂಗ ಅವಶ್ಯ. ಮನುಷ್ಯ ಅಧರ್ಮಿಯನಾಗದೇ ಧರ್ಮದ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು. ನಮ್ಮಲ್ಲಿ ನಿಷ್ಠೆ, ಅರಿವು, ಸತ್ಯ, ಭಾವಶುದ್ಧಿ ಇದ್ದಾಗ ದೇವರಿಗೂ ಅಂಜಬೇಕಾಗಿಲ್ಲ. ಆತ್ಮಕಲ್ಯಾಣ ಮತ್ತು ಲೋಕ ಕಲ್ಯಾಣಗ ಳೆರೆಡೂ ಈಡೇರುವವು’ ಎಂದರು.

‘ಶರಣ ಧರ್ಮದಲ್ಲಿ ಪಂಚಾಚಾರಗಳು ಮುಖ್ಯವಾದವು. ಇವನ್ನು ಬಿಟ್ಟು ಅಧರ್ಮದ ದಾರಿಯಲ್ಲಿ ನಡೆದಾಗ ಬದುಕು ದಿಕ್ಕುತಪ್ಪುವುದು. ಇಂದು ಹಿಂಸೆ ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿ, ವೈಭವದ, ಲೋಲುಪದ ಜೀವನ ನಡೆಸುತ್ತ ಪರಿಸರವನ್ನು ತನಗೆ ಬೇಕೆಂದಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಈ ಕಾರಣವಾಗಿಯೇ ಎಂದೂ ಕೇಳರಿಯದ ಹೊಸ ರೋಗಗಳು ಮನುಷ್ಯನನ್ನು ಮುತ್ತುತ್ತಿವೆ’ ಎಂದು ಹೇಳಿದರು.

‘ವೈಭವ ಸಾಧನೆಯಲ್ಲ, ಸರಳತೆಯೇ ಸಾಧನೆ. ಗಾಂಧೀಜಿ ಅವರ ಬದುಕು ಸರಳತೆಗೆ ಒಳ್ಳೆಯ ಉದಾಹರಣೆ. ಆತ್ಮಾವಲೋಕನವೇ ಧರ್ಮದ ದಾರಿಯಲ್ಲಿ ನಡೆಯಲು ಪ್ರೇರಣೆ. ಸ್ವಚ್ಛತೆಯೂ ಧರ್ಮದ ಆಚರಣೆ. ಅಂತಮುರ್ಖಿತನ ಮೈಗೂಡಿಸಿಕೊಂಡರೆ ನಿಜಧರ್ಮದ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ತನ್ನರಿವೇ ತನಗೆ ಗುರುವಾಗಬೇಕು. ದಯೆ, ಪ್ರೀತಿ, ಸತ್ಯ, ಕರುಣೆಗಳೆಂಬ ಮೌಲ್ಯಗಳೆಲ್ಲವೂ ನಮ್ಮೊಳಗಿವೆ. ಬಾಹ್ಯ ಸಂಪತ್ತಿಗೆ ಜೋತುಬೀಳದೆ ಒಳಗಿನ ಜ್ಞಾನವೆಂಬ ಸಂಪತ್ತಿಗೆ ಮಾರುಹೋಗಬೇಕು’ ಎಂದು ಸಲಹೆ ನೀಡಿದರು.

‘ಜಗತ್ತಿನಲ್ಲಿ ಅನೇಕ ಧರ್ಮಗಳಿವೆ. ಆ ಎಲ್ಲ ಧರ್ಮಗಳ ಅಂತಿಮ ಗುರಿ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವಂಥದ್ದು. ಅಹಿಂಸೆಯೇ ಪರಮಧರ್ಮ. ಎಲ್ಲ ಧರ್ಮದ ತತ್ವಗಳು ಚೆನ್ನಾಗಿಯೇ ಇವೆ. ಆದರೆ, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ಧರ್ಮಾನುಯಾಯಿಗಳು ಎಡವು ತ್ತಿದ್ದೇವೆ. ನಡೆ-ನುಡಿ ಒಂದಾ ಗುವುದೇ ಧರ್ಮ. ಹಿಂಸೆ, ಮೋಸ, ವಂಚನೆಯನ್ನು ಮಾಡಬಾರದು’ ಎಂದು ಹೇಳಿದರು.

ಸಂಗೀತ ಶಿಕ್ಷಕ ಎಚ್.ಎಸ್. ನಾಗರಾಜ್ ಮತ್ತು ವಿದ್ಯಾರ್ಥಿಗಳು ವಚನಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕ ಸಿದ್ಧೇಶ್ ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT