ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತೆಯೊಂದಿಗೆ ಸೌಭಾಗ್ಯ ಮಾತುಕತೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಆಡಿಯೊ
Last Updated 25 ನವೆಂಬರ್ 2022, 20:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಸಂತ್ರಸ್ತ ವಿದ್ಯಾರ್ಥಿನಿಯೊಬ್ಬರೊಂದಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಾಲಮಂದಿರದಿಂದ ಬಿಡುಗಡೆಗೊಂಡು ಪ್ರವಾಸದಲ್ಲಿರುವ ಮೊದಲ ಪ್ರಕರಣದ ಸಂತ್ರಸ್ತ ವಿದ್ಯಾರ್ಥಿನಿಯನ್ನು ಮೊಬೈಲ್‌ ಫೋನ್‌ ಮೂಲಕ ಸಂಪರ್ಕಿಸಿದ ಸೌಭಾಗ್ಯ, ಸುಮಾರು 13 ನಿಮಿಷ ಸಂಭಾಷಣೆ ನಡೆಸಿದ್ದಾರೆ. ಜೀವನದಲ್ಲಿ ಜುಗುಪ್ಸೆಗೊಂಡಿರುವ ಬಗ್ಗೆ ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾಳೆ.

ಶಿವಮೂರ್ತಿ ಶರಣರ ವಿರುದ್ಧ ದೂರು ದಾಖಲಿಸುವಂತೆ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ನೀಡಿದ ಆರೋಪ ಸೌಭಾಗ್ಯ ಬಸವರಾಜನ್‌ ಮೇಲಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಅವರು ಸಂತ್ರಸ್ತೆಯೊಂದಿಗೆ ಮಾತನಾಡಿದಸಂಭಾಷಣೆ ಚರ್ಚೆಗೆ ಗ್ರಾಸವಾಗಿದೆ.

‘ನೀನು ಜಾಣೆ, ಬುದ್ಧಿವಂತೆ. ಚಿಕ್ಕ ವಯಸ್ಸಿಗೇ ಎಲ್ಲ ಗೊತ್ತಿದೆ. ಪುಟ್ಟ ಹೃದಯದಲ್ಲಿ ಸಾಕಷ್ಟು ದುಃಖ ತುಂಬಿಕೊಂಡಿದ್ದೀಯ. ವಿದ್ಯಾಭ್ಯಾಸದ ಕಡೆ ಗಮನ ಹರಿಸು. ಎಸ್ಸೆಸ್ಸೆಲ್ಸಿ ಉತ್ತೀರ್ಣಳಾದ ಬಳಿಕ ಇಷ್ಟಪಟ್ಟ ಕಾಲೇಜಿಗೆ ಪ್ರವೇಶ ಕೊಡಿಸುವೆ..’ ಎಂದು ಬಾಲಕಿಗೆ ಸೌಭಾಗ್ಯ ಆಶ್ವಾಸನೆ ನೀಡಿರುವುದು ಆಡಿಯೊದಲ್ಲಿದೆ.

‘ನೀನು ಸಂತೋಷವಾಗಿರಬೇಕು, ಓದಿ ದೊಡ್ಡವಳಾಗಿ ಜಿಲ್ಲಾಧಿಕಾರಿ ಆಗಬೇಕು ಎಂಬುದು ನಮ್ಮ ಅಪೇಕ್ಷೆ. ಕೊಂಚ ಶ್ರಮ ಹಾಕಿ ಓದಿದರೆ ಖಂಡಿತ ಐಎಎಸ್‌ ಅಧಿಕಾರಿಯಾಗುತ್ತೀಯ. ಪ್ರವಾಸ ಮುಗಿಸಿ ಚಿತ್ರದುರ್ಗಕ್ಕೆ ಮರಳಿದ ಬಳಿಕ ಸಂಪರ್ಕಿಸು’ ಎಂದು ವಿದ್ಯಾರ್ಥಿನಿಗೆ ಸೂಚನೆ ನೀಡಿದ್ದಾರೆ.

ಡಿ.3ರವರೆಗೆ ನ್ಯಾಯಾಂಗ ಬಂಧನ

ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರು ಸೇರಿದಂತೆ ಮೂವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ಡಿ.3ರವರೆಗೆ ವಿಸ್ತರಿಸಿದೆ.

ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಶುಕ್ರವಾರ ಮುಕ್ತಾಯಗೊಂಡಿತ್ತು. ಶಿವಮೂರ್ತಿ ಶರಣರು, ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ಹಾಗೂ ಪರಮಶಿವಯ್ಯ ಅವರನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಯಿತು.

ಶಿವಮೂರ್ತಿ ಶರಣರು ಎರಡನೇ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ಶುಕ್ರವಾರ ನಡೆಯಿತು. ಆರೋಪಿ ಪರ ವಕೀಲರು ವಾದ ಮಂಡಿಸಿದ್ದು, ಪ್ರತಿವಾದಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು ನ.28ಕ್ಕೆ ಮುಂದೂಡಲಾಯಿತು.

ಪ್ರಕರಣ ದಾಖಲಿಸಲು ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನ.28ಕ್ಕೆ ಮುಂದೂಡಿದೆ.

‘ಒಡನಾಡಿ’ಯ ತನಿಖೆಗೆ ಮನವಿ

ಶಿವಮೂರ್ತಿ ಶರಣರ ವಿರುದ್ಧ ಷಡ್ಯಂತ್ರ ನಡೆಸಿದ ಪ್ರಕರಣದಲ್ಲಿ ಮೈಸೂರಿನ ‘ಒಡನಾಡಿ’ ಸೇವಾ ಸಂಸ್ಥೆ ಹಾಗೂ ಅದರ ನಿರ್ದೇಶಕರನ್ನು ತನಿಖೆಗೆ ಒಳಪಡಿಸಬೇಕು ಎಂದು ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಹುಲಿಕುಂಟೆ ಒತ್ತಾಯಿಸಿದ್ದಾರೆ.

ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ಮಠದ ವತಿಯಿಂದ ದಾಖಲಿಸಿದ ಪ್ರಕರಣದಲ್ಲಿ ‘ಒಡನಾಡಿ’ ಸಂಸ್ಥೆಯನ್ನು ಮೂರನೇ ಆರೋಪಿಯಾಗಿ ಹೆಸರಿಸಲಾಗಿದೆ. ಸಂಸ್ಥೆಯ ನಿರ್ದೇಶಕರಾದ ಕೆ.ವಿ.ಸ್ಟ್ಯಾನ್ಲಿ ಹಾಗೂ ಎಂ.ಎಲ್‌. ಪರಶುರಾಮ್‌ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್‌ ಅವರಿಗೆ ನೀಡಿದ ಮನವಿಯಲ್ಲಿ ಕೋರಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT