ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ನಾಟಿ ಅವರೆಗೆ ಬಂತು ಬಂಪರ್ ಬೆಲೆ

ಎಚ್.ಡಿ. ಪುರ ಮಾರುಕಟ್ಟೆಯಲ್ಲಿ ಕ್ವಿಂಟಲ್ ಅವರೆಗೆ ₹ 3,500ದಿಂದ ₹ 4,000
Last Updated 29 ಡಿಸೆಂಬರ್ 2021, 4:04 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಬೆಳೆಯುವ ನಾಟಿ ಸೊಗಡು ಅವರೆಗೆ ಈ ಬಾರಿ ಬಂಪರ್ ಬೆಲೆ ಬಂದಿದ್ದು, ರೈತರು ಸಂತಗೊಂಡಿದ್ದಾರೆ.

ಕಳೆದ ವರ್ಷ ಪ್ರತಿ ಕೆ.ಜಿ.ಗೆ ಕೇವಲ ₹ 15ರಿಂದ ₹ 20ಕ್ಕೆ ಮಾರಾಟವಾಗುತ್ತಿತ್ತು. ಈ ಬಾರಿ ಕೆ.ಜಿ.ಗೆ ₹ 35ರಿಂದ ₹ 40ಕ್ಕೆ ಹೆಚ್ಚಳವಾಗಿದೆ.

ಎಚ್.ಡಿ. ಪುರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ರೈತರಿಂದ ಪ್ರತಿ ಕ್ವಿಂಟಲ್ ಅವರೆಯನ್ನು ₹ 3,500ದಿಂದ ₹ 4,000ಕ್ಕೆ ಖರೀದಿಸುತ್ತಿದ್ದಾರೆ. ಬೆಂಗಳೂರು ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಅವರೆ ₹ 5,500ದಿಂದ ₹ 6,000ಕ್ಕೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿ ಕೆ.ಜಿ.ಗೆ ₹ 100ರ ವರೆಗೆ ಚಿಲ್ಲರೆ ಮಾರಾಟ ನಡೆಯುತ್ತಿದೆ.

ತಾಳ್ಯ ಹೋಬಳಿಯ ನಂದನ ಹೊಸೂರು, ಕಸವನಹಳ್ಳಿ, ಗೊಲ್ಲರಹಟ್ಟಿ, ಸಂಗೇನಹಳ್ಳಿ, ಹೊಸಹಟ್ಟಿ, ನಗರಘಟ್ಟ, ಬಿ.ಜಿ. ಹಳ್ಳಿ, ಬ್ರಹ್ಮಪುರ, ಟಿ. ನುಲೇನೂರು, ತೊಡರನಾಳು, ತಾಳ್ಯ, ಮದ್ದೇರು, ರಾಮೇನಹಳ್ಳಿ, ಬೋರೇನಹಳ್ಳಿ, ನೆಲ್ಲಿಕಟ್ಟೆ ಮತ್ತಿತರ ಗ್ರಾಮಗಳಲ್ಲಿನ ರೈತರು ಹೆಚ್ಚು ಅವರೆ ಬೆಳೆಯುತ್ತಾರೆ. ಹೊರಕೆರೆ ದೇವರಪುರ ಅವರೆ ಮಾರುಕಟ್ಟೆಯಿಂದ ನಿತ್ಯ 100ರಿಂದ 150 ಚೀಲ ಹಸಿ ಅವರೆಕಾಯಿ ಬೆಂಗಳೂರಿನ ಕಲಾಸಿಪಾಳ್ಯ ಮಾರುಕಟ್ಟೆ ತಲುಪುತ್ತಿದೆ.

‘ಈ ವರ್ಷ ನವೆಂಬರ್ ತಿಂಗಳಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಅವರೆ ಬೆಳೆ ನಾಶವಾಗಿದೆ. ಎತ್ತರ ಪ್ರದೇಶದ ಹೊಲಗಳಲ್ಲಿ ಮಾತ್ರ ಸ್ವಲ್ಪ ಬೆಳೆ ಇದ್ದು, ಇಳುವರಿಯೂ ಕಡಿಮೆ ಇದೆ. ಕಳೆದ ವರ್ಷ ಹೆಚ್ಚು ಮಾಲು ಬರುತ್ತಿತ್ತು. ಈ ವರ್ಷ ಕಡಿಮೆ ಬರುತ್ತಿದೆ. ಆದರೆ, ಈ ವರ್ಷ ಎಂದೂ ಕೇಳಿರದ ರೇಟ್ ಬಂದಿದೆ. ನಮಗೂ ಟೆಂಪೊ ಬಾಡಿಗೆ ಸೇರಿ ಕೆ.ಜಿ.ಗೆ ₹ 10ರ ವರೆಗೆ ಖರ್ಚು ಬರುತ್ತದೆ’ ಎನ್ನುತ್ತಾರೆ ಹೊರಕೆರೆ ದೇವರಪುರದ ಅವರೆಕಾಯಿ ವ್ಯಾಪಾರಿ ಆನಂದ್.

‘ಸುತ್ತಲಿನ ಗ್ರಾಮಗಳ ರೈತರು ಇಲ್ಲಿಗೆ ಅವರೆಕಾಯಿ ತಂದು ಮಾರಾಟ ಮಾಡುತ್ತಾರೆ. ಸಂಜೆ 4ರಿಂದ ವ್ಯಾಪಾರ ಆರಂಭಿಸುತ್ತೇವೆ. ಅವರೆ ಕಾಯಿಯನ್ನು ಬೇಗ ಚೀಲಕ್ಕೆ ತುಂಬಿದರೆ ಬಿಸಿಯಾಗುತ್ತದೆ. ರಾತ್ರಿ 10ರ ನಂತರ ಚೀಲಕ್ಕೆ ತುಂಬುತ್ತೇವೆ. 60 ಕೆ.ಜಿ.ಯ ಚೀಲಗಳಿಗೆ ತುಂಬಿ ಟೆಂಪೊಗಳಲ್ಲಿ ಬೆಂಗಳೂರಿಗೆ ಕಳುಹಿಸುತ್ತೇವೆ. ಅಲ್ಲಿ ಬೆಳಗಿನಜಾವ ವ್ಯಾಪಾರ ನಡೆಯುತ್ತದೆ’ ಎನ್ನುತ್ತಾರೆ ವ್ಯಾಪಾರಿಗಳಾದ ಶರಣಪ್ಪ ಹಾಗೂ ಹಾಲೇಶ್.

‘ವರ್ಷದ 365 ದಿನವೂ ಹಸಿ ಅವರೆಕಾಯಿ ಸಿಗುತ್ತದೆ. ಕೆಲವು ರೈತರು ಹೈಬ್ರಿಡ್ ತಳಿಯ ‘ಹೆಬ್ಬಾಳ ಅವರೆ’ ಬೆಳೆಯುತ್ತಾರೆ. ಈ ಅವರೆ ಸೊಗಡುರಹಿತವಾಗಿದ್ದು, ಹೆಚ್ಚು ರುಚಿ ಇರುವುದಿಲ್ಲ. ಆದರೆ, ಚಳಿಗಾಲಕ್ಕೆ ಬರುವ ನಾಟಿ ಅವರೆ ಹೆಚ್ಚು ರುಚಿ ಇರುತ್ತದೆ. ಆದ್ದರಿಂದ ಬೇಡಿಕೆ ಹೆಚ್ಚು. ಇಡೀ ರಾಜ್ಯದಲ್ಲಿ ನಮ್ಮ ಭಾಗದಿಂದ ಮಾತ್ರ ಸೊಗಡು ಅವರೆ ಸಿಗುತ್ತದೆ. ಆದರೆ, ಬೆಂಗಳೂರಿನ ಜನರಿಗೆ ಹೈಬ್ರಿಡ್ ಹಾಗೂ ನಾಟಿ ಅವರೆಯ ವ್ಯತ್ಯಾಸ ತಿಳಿಯುವುದಿಲ್ಲ. ಎಲ್ಲಾ ಅವರೆಯೂ ಒಂದೇ ಎಂದುಕೊಳ್ಳುತ್ತಾರೆ’ ಎನ್ನುತ್ತಾರೆ ವ್ಯಾಪಾರಿಗಳು.

ಹತ್ತಿಯೊಂದಿಗೆ ಮಿಶ್ರಬೆಳೆಯಾಗಿ ಹಾಕಿದ ಅವರೆ ಹೆಚ್ಚು ಇಳುವರಿ ಬರುತ್ತದೆ. ಹತ್ತಿ ಬೆಳೆಗೆ ಔಷಧ ಸಿಂಪಡಿಸುವುದರಿಂದ ಅವರೆಗೆ ಹುಳು ಬೀಳುವುದಿಲ್ಲ.

ರಂಗಸ್ವಾಮಿ, ರಾಮೇನಹಳ್ಳಿಯ ರೈತ

ನಾನು 30 ವರ್ಷಗಳಿಂದ ಅವರೆಕಾಯಿ ವ್ಯಾಪಾರ ಮಾಡುತ್ತಿದ್ದು, ಇಷ್ಟು ಬೆಲೆ ನೋಡಿಲ್ಲ. ಮಧ್ಯವರ್ತಿಗಳಿಗಿಂತ ಚಿಲ್ಲರೆ ಮಾರಾಟಗಾರರಿಗೆ ಲಾಭ ಹೆಚ್ಚು. ಆನಂದ್, ಅವರೆಕಾಯಿ ವ್ಯಾಪಾರಿ, ಎಚ್.ಡಿ. ಪುರ

ಜವಾರಿ ಅವರೆ ನಮ್ಮ ಭಾಗದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಇಲ್ಲಿನ ಹವಾಮಾನ ಸೊಗಡು ಅವರೆಗೆ ಪೂರಕವಾಗಿದೆ. ಈ ಸೊಗಡು ಅವರೆ ಹೆಚ್ಚು ರುಚಿಯಾಗಿರುವುದರಿಂದ ಬೆಲೆ ಹೆಚ್ಚಿರುತ್ತದೆ.

ಎನ್.ವಿ. ಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT