ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Last Updated 21 ಮೇ 2022, 4:19 IST
ಅಕ್ಷರ ಗಾತ್ರ

ನಾಯಕನಹಟ್ಟಿ:ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಹಟ್ಟಿಮಲ್ಲಪ್ಪನಾಯಕ ಸಂಘ ಕರೆ ನೀಡಿದ್ದ ಬಂದ್‌ ಕಾರಣಪಟ್ಟಣ ಸೇರಿ ಹೋಬಳಿ ಸಂಪೂರ್ಣವಾಗಿ ಸ್ತಬ್ಧವಾಗಿತ್ತು.

ಬೆಳಿಗ್ಗೆಯೇ ಬಂದ ನಾಯಕ ಸಮುದಾಯದ ಮುಖಂಡರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದ ಕಾರಣ ಅಂಗಡಿಗಳು, ಹೋಟೆಲ್‌, ಶಾಲಾ–ಕಾಲೇಜುಗಳನ್ನು ಮುಚ್ಚಲಾಯಿತು.

ರಾಜ್ಯ ಹೆದ್ದಾರಿ–45 ಅನ್ನು ಬಂದ್ ಮಾಡಲಾಗಿತ್ತು. ಪಟ್ಟಣವನ್ನು ಹಾದುಹೋಗುವ ಚಳ್ಳಕೆರೆ, ಹಿರಿಯೂರು, ಬೆಂಗಳೂರು, ಬಳ್ಳಾರಿ, ದಾವಣಗೆರೆಗೆ ಸಂಚರಿಸುವ ಯಾವುದೇ ವಾಹನಗಳು ಇದರಿಂದಾಗಿ ರಸ್ತೆಗೆ ಇಳಿಯಲಿಲ್ಲ.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪಕ್ಷಗಳ ಮುಖಂಡರು, ಸಮುದಾಯದ ಜನಪ್ರತಿನಿಧಿಗಳು, ನೌಕರರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದರು.

ಹಟ್ಟಿಮಲ್ಲಪ್ಪನಾಯಕ ಸಂಘದ ಅಧ್ಯಕ್ಷ ಪಟೇಲ್‍ ಜಿ.ಎಂ. ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು), ‘ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ವಾಲ್ಮೀಕಿ ಜನಾಂಗದ ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ.ಚಳ್ಳಕೆರೆ, ಮೊಳಕಾಲ್ಮುರು ಸೇರಿ ಚಿತ್ರದುರ್ಗ ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯನ್ನು ನಾಯಕ ಸಮುದಾಯ ಹೊಂದಿದೆ. ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಪ್ರಸನ್ನಾನಂದ ಸ್ವಾಮೀಜಿ ಅವರು 100 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಗೌರವ ನೀಡುತ್ತಿಲ್ಲ. ಇದು ಮುಂದುವರಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಹಟ್ಟಿಮಲ್ಲಪ್ಪನಾಯಕ ಸಂಘದ ಉಪಾಧ್ಯಕ್ಷ ಜಿ. ತಿಪ್ಪೇಸ್ವಾಮಿ, ಚಿಂತಕ ಡಾ. ಗಿರೀಶ್, ಕಾರ್ಯಾಧ್ಯಕ್ಷ ಎಸ್.ಟಿ.ಬೋರಸ್ವಾಮಿ ಮಾತನಾಡಿದರು.

ಕಂದಾಯ ನಿರೀಕ್ಷಕ ಆರ್. ಚೇತನ್‍ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಮುದಾಯದ ಮುಖಂಡರಾದ ಚಿನ್ನಪ್ಪ, ನಾಗರಾಜ, ಬೈಯಣ್ಣ, ಕಾಕಸೂರಯ್ಯ, ಎಸ್. ಓಬಣ್ಣ, ಟಿ. ಬಸಣ್ಣ, ಜಿ.ಬಿ. ಮುದಿಯಪ್ಪ, ವಕೀಲ ನಾಗೇಂದ್ರಪ್ಪ, ಪಾಲಯ್ಯ, ರಂಗಸ್ವಾಮಿ, ಪೆದ್ದನೋಬಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT