ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ‘ಗೇಲ್‌’ ಸೌಲಭ್ಯ

₹ 9 ಕೋಟಿ ವೆಚ್ಚದಲ್ಲಿ ಬೀದಿ ದೀಪ– ಭರವಸೆ
Last Updated 3 ಸೆಪ್ಟೆಂಬರ್ 2019, 12:24 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ‘ಭಾರತೀಯ ಅನಿಲ ಪ್ರಾಧಿಕಾರ (ಗೇಲ್‌)’ ಹಾಗೂ ರೋಟರಿ ಕ್ಲಬ್‌ ಚಿತ್ರದುರ್ಗ ಫೋರ್ಟ್‌ ₹ 14 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್‌ ಪ್ರಯೋಗಾಲಯ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ಸೌಲಭ್ಯ ಕಲ್ಪಿಸಿವೆ.

ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅನುದಾನದಲ್ಲಿ ‘ಗೇಲ್‌’ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸುತ್ತಿದೆ. 18 ಕಂಪ್ಯೂಟರ್‌, 1 ಯುಪಿಎಸ್‌, ನೂತನ ಶೌಚಾಲಯ, ಹಳೆ ಶೌಚಾಲಯದ ನವೀಕರಣ ಹಾಗೂ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಮಂಗಳವಾರ ಇವುಗಳನ್ನು ಉದ್ಘಾಟಿಸಿದರು.

‘ಜಿ.ಆರ್‌.ಹಳ್ಳಿ ಶಾಲೆಯಲ್ಲಿ ಶಿಕ್ಷಣ ಪಡೆದವರು ವಿಜ್ಞಾನಿಗಳಾಗಿದ್ದಾರೆ. ಮಾಜಿ ಸಚಿವ ಅಶ್ವತ್ಥ್‌ ರೆಡ್ಡಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಇಂತಹ ಶಾಲೆಯನ್ನು ಸುಸಜ್ಜಿತವಾಗಿ ರೂಪಿಸುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೀದಿ ದೀಪಕ್ಕೆ ₹9 ಕೋಟಿ:

‘ದಾವಣಗೆರೆ ಮಾದರಿಯಲ್ಲಿ ಚಿತ್ರದುರ್ಗ ನಗರದಲ್ಲಿ ಕೂಡ ಬೀದಿ ದೀಪದ ಸೌಲಭ್ಯ ಕಲ್ಪಿಸಲು ‘ಗೇಲ್‌’ ಉತ್ಸುಕತೆ ತೋರಿದೆ. ₹ 9 ಕೋಟಿ ವೆಚ್ಚದಲ್ಲಿ ಈ ಯೋಜನೆ ಸಿದ್ಧವಾಗುತ್ತಿದೆ. ಅಧಿಕಾರಿಗಳ ತಂಡ ಈಗಾಗಲೇ ದಾವಣಗೆರೆಗೆ ಭೇಟಿ ನೀಡಿ ಮಾಹಿತಿ ಪಡೆದಿದೆ. ಚಂದ್ರವಳ್ಳಿ, ಏಳು ಸುತ್ತಿನ ಕೋಟೆ ಸೇರಿ ಹಲವೆಡೆ ಬೀದಿ ದೀಪದ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದು ಶಾಸಕರು ಮಾಹಿತಿ ನೀಡಿದರು.

‘ನೈಸರ್ಗಿಕ ಅನಿಲವನ್ನು ಮನೆಗಳಿಗೆ ಕೊಳವೆ ಮೂಲಕ ಪೂರೈಸುವ ಕಾಮಗಾರಿ ನಡೆಯುತ್ತಿದೆ. ಕೊಳವೆ ಮಾರ್ಗ ಅಳವಡಿಕೆಗೆ ನಗರ ವ್ಯಾಪ್ತಿಯ ಹಲವು ರಸ್ತೆಗಳನ್ನು ಅಗೆಯಲಾಗಿದೆ. ರಸ್ತೆ ಅಗೆಯುವ ಮೊದಲು ಅನುಮತಿ ಪಡೆದುಕೊಳ್ಳಿ. ಕಾಮಗಾರಿ ಪೂರ್ಣಗೊಂಡ ಬಳಿಕ ಮೊದಲಿನಂತೆ ಮರುನಿರ್ಮಾಣ ಮಾಡಬೇಕು. ಇದನ್ನು ಎಚ್ಚರಿಕೆ ಎಂದೇ ಭಾವಿಸಿ’ ಎಂದರು.

‘ಗೇಲ್‌’ ಕಾರ್ಯನಿರ್ವಾಹಕ ನಿರ್ದೇಶಕ ಮುರುಗೇಶನ್‌, ‘ರಸ್ತೆ ಬಗ್ಗೆ ಇನ್ನಷ್ಟು ಕಾಳಜಿ ವಹಿಸುತ್ತೇವೆ. ಶಾಸಕರ ಸಲಹೆ ಸ್ವೀಕರಿಸುತ್ತೇವೆ. ಮನೆ–ಮನೆಗೆ ನೈಸರ್ಗಿಕ ಅನಿಲ ಪೂರೈಸುವ ಕಾರ್ಯ ಪ್ರಗತಿಯಲ್ಲಿದೆ. ಇದೇ ವೇಗದಲ್ಲಿ ಕೆಲಸ ನಡೆದರೆ ಆರು ತಿಂಗಳಲ್ಲಿ ಗ್ಯಾಸ್‌ ಬಳಕೆಗೆ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಗೇಲ್‌’ ನಿರ್ಮಾಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಅನ್‍ಬರಸನ್, ಮಾನವ ಸಂಪನ್ಮೂಲ ವಿಭಾಗದ ಡಿಜಿಎಂ ಮಂಟು ಕುಮಾರ್, ಬಸವರಾಜ್ ಜಿ.ಪುನೆ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್‌ ಅಧ್ಯಕ್ಷ ಕೆ.ಎನ್.ನಾಗೇಂದ್ರ ಬಾಬು, ಕಾಯದರ್ಶಿ ಶಂಕರಮೂರ್ತಿ, ನಿರ್ದೇಶಕರಾದ ಮಾರುತಿ ಮೋಹನ್, ಮಹೇಶ್, ರಾಘವೇಂದ್ರ, ಎಸ್‍ಡಿಎಂಸಿ ಅಧ್ಯಕ್ಷ ನಿಂಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಮುಖ್ಯ ಶಿಕ್ಷಕಿ ಫೈರೋಜಾ ಬೇಗಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT