ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರ ದನಿಯಾಗಿದ್ದ ಗುರುನಾಥ್ ನಿಧನ

Last Updated 3 ಅಕ್ಟೋಬರ್ 2020, 13:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಥೆಗಾರ, ಸಾಹಿತಿ ಎಸ್‌.ಆರ್. ಗುರುನಾಥ್ (75) ಶನಿವಾರ ಅನಾರೋಗ್ಯದಿಂದ ನಿಧನರಾದರು.

ಗುರುನಾಥ್ ಹುಟ್ಟೂರು ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಸಿಂಗಾಪುರ. ಆದರೆ, ಅನೇಕ ವರ್ಷಗಳಿಂದಲೂ ಇಲ್ಲಿನ ಐಯುಡಿಪಿ ಬಡಾವಣೆಯ ವಾಸಿಯಾಗಿದ್ದರು.

ಬಡತನ, ಶೋಷಣೆ ಅದರ ಜತೆಗೆ ದಲಿತ ಸಮುದಾಯದವರ ಮೇಲೆ ಆಗಿಂದಾಗ್ಗೆ ಆಗುತ್ತಿದ್ದ ಅಪಮಾನ, ಆತಂಕ, ತಲ್ಲಣಗಳೇ ಅವರನ್ನು ಬರವಣಿಗೆಯತ್ತ ಪ್ರೇರೇಪಿಸಿತು. ದೌರ್ಜನ್ಯ, ನೋವುಗಳಿಗೆ ಅಕ್ಷರದ ರೂಪ ನೀಡುವ ಮೂಲಕ ಹಿಂದುಳಿದ ಸಮುದಾಯಗಳ ದನಿಯಾಗಿ 4 ದಶಕಗಳ ಕಥೆಗಾರರಾಗಿ ಅನೇಕ ಕಥೆ, ಕವನಗಳನ್ನು ಅವರು ಬರೆದಿದ್ದಾರೆ.

ಪ್ರಮುಖ ಬರಹಗಳು

ಒಡಂಬಡಿಕೆ, ಹಾಡು, ದಲಿತದನಿ, ಕೆರೆಗೆ ಹಾರವಾದ ಬಂದಮ್ಮನ ಇತಿಹಾಸ, ಅಧೋಲೋಕ, ವರ್ಣಾವರ್ಣ ಹೀಗೆ ಅನೇಕ ಕಥೆ, ಕವನ ಸಂಕಲನವನ್ನು ಬರೆದಿದ್ದಾರೆ.

ಸೃಜನಶೀಲತೆಯಿಂದಲೇ ಛಾಪು ಮೂಡಿಸಿರುವ ಗುರುನಾಥ್ ಅವರಿಗೆ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ 1997ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಷಿಪ್, 2007ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ರಾಷ್ಟ್ರೀಯ ಫೆಲೋಷಿಪ್ ಅವಾರ್ಡ್, 2011ರಲ್ಲಿ ಬಾಬು ಜಗಜೀವನರಾಂ ರಾಷ್ಟ್ರೀಯ ಸಮ್ಮಾನ್ ಪದಕ ಸೇರಿ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಗುರುನಾಥ್, 2019ರಲ್ಲಿ ಮದಕರಿಪುರ ಗ್ರಾಮದಲ್ಲಿ ನಡೆದ 4ನೇ ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆಯ್ಕೆಯಾದಾಗ ಸರಳವಾಗಿ ಸಮ್ಮೇಳನ ನಡೆಸುವಂತೆ ಸಂಘಟಕರಲ್ಲಿ ಮನವಿ ಮಾಡಿದ್ದರು.

ವಿದ್ಯಾರ್ಥಿ ದೆಸೆಯಿಂದಲೂ ಸಂಶೋಧನೆಯ ಬಗ್ಗೆ ಆಸಕ್ತಿ ಇದ್ದ ಅವರು ಇತಿಹಾಸ ಸಂಶೋಧಕ ಲಕ್ಷ್ಮಣ್ ತೆಲಗಾವಿ ಅವರೊಂದಿಗೆ ಅನೇಕ ವರ್ಷ ಸಂಶೋಧನೆಗಳಲ್ಲಿ ತೊಡಗಿದ್ದರು. 1972ರಿಂದ 2004ರವರೆಗೂ ಸರ್ಕಾರಿ ಕುಶಲಕರ್ಮಿ ತರಬೇತಿ ಸಂಸ್ಥೆಯಲ್ಲಿ ಸಹಾಯಕ ಭೋದಕ, ಹಿರಿಯ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಬಹುತೇಕ ಕಥೆಗಳು ದಲಿತ ಸಮುದಾಯಕ್ಕೆ ಸಂಬಂಧಿಸಿದ್ದವಾದರೂ ಸಾಮಾಜಿಕ ಕಳಕಳಿ ಹೊಂದಿದ್ದವು. ಕಥೆಗಳಲ್ಲಿ ಹಟ್ಟಿ, ಅಲ್ಲಿನ ಸಂಘರ್ಷ, ಮೌಢ್ಯ ಆಚರಣೆಗಳು, ಸಾಮರಸ್ಯಗಳೆಲ್ಲವೂ ದೇಸಿ ಭಾಷೆಯಲ್ಲಿ ಮೂಡಿಬಂದಿವೆ. ‘ಪ್ರಜಾವಾಣಿ’, ‘ಸುಧಾ’, ‘ಮಯೂರ’ ಸೇರಿ ಅನೇಕ ಪತ್ರಿಕೆಗಳಲ್ಲಿ ಅವರ ಕಥೆಗಳು ಪ್ರಕಟವಾಗಿವೆ. ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿಯೂ ಶ್ರಮಿಸಿದ್ದಾರೆ.

‘ಅವರ ಕಥೆಗಳು ಕಣ್ಣಿಗೆ ಕಟ್ಟುವಂತಿದ್ದು, ‘ದೃಶ್ಯ ಕಥೆಗಳು’ ಎಂದು ಹೇಳಬಹುದು. ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಚಿಂತಕ ಯಾದವರೆಡ್ಡಿ, ಪ್ರಾಧ್ಯಾಪಕ ಕರಿಯಪ್ಪ ಮಾಳಿಗೆ, ದಾಸೇಗೌಡ್ರು ಸ್ಮರಿಸಿಕೊಂಡಿದ್ದಾರೆ.

‘ಬಾಲ್ಯಮಿತ್ರ. ಸಂಶೋಧನ ಒಡನಾಡಿ. ಹಿತೈಷಿ ಹಾಗೂ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಕತೆಗಾರ, ವಿಮರ್ಶಕ, ಚಿಂತಕರಾಗಿ ಹೆಸರು ಮಾಡಿದ್ದ ಗುರುನಾಥ್ ಅವರ ಅಕಾಲಿಕ ಮರಣ ನೋವು ತಂದಿದೆ’ ಎಂದು ಸಂಶೋಧಕ ಪ್ರೊ. ಲಕ್ಷ್ಮಣ್ ತೆಲಗಾವಿ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT