ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ನೇಕಾರಿಕೆ ಉದ್ಯಮಕ್ಕೆ ಬೇಕು ಉತ್ತೇಜನ

ಕೈ ಹಿಡಿಯದ ಕೂಲಿ; ಅನ್ಯ ಕಾರ್ಯಗಳತ್ತ ನೇಕಾರರ ಚಿತ್ತ
Published 7 ಆಗಸ್ಟ್ 2023, 7:21 IST
Last Updated 7 ಆಗಸ್ಟ್ 2023, 7:21 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಉಪಜೀವನಕ್ಕೆ ಸಾಕಾಗುವಷ್ಟು ಕೂಲಿ ದೊರೆಯುವುದಿಲ್ಲ’ ಎಂಬ ಕಾರಣದಿಂದ ತಾಲ್ಲೂಕಿನ ಅನೇಕ ನೇಕಾರರು ನೇಕಾರಿಕೆಯಿಂದ ವಿಮುಖವಾಗಿದ್ದಾರೆ.

ಜಿಲ್ಲೆಯಲ್ಲಿ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳು ರೇಷ್ಮೆಸೀರೆ ಮತ್ತು ಕುರಿ ಉಣ್ಣೆ ಕಂಬಳಿ ನೇಯ್ಗೆಗೆ ಖ್ಯಾತವಾಗಿವೆ. ನೇಕಾರಿಕೆ ಉತ್ತಮವಾಗಿ ನಡೆಯುತ್ತಿದ್ದ ಕಾಲಕ್ಕೆ ಹೋಲಿಕೆ ಮಾಡಿದಲ್ಲಿ ಈಗ ಶೇ 70ರಷ್ಟು ಮಗ್ಗಗಳು ಸ್ಥಗಿತವಾಗಿವೆ. ಇದರಲ್ಲಿ ರೇಷ್ಮೆಗಿಂತಲೂ ಕಂಬಳಿ ಮಗ್ಗಗಳ ಪಾಲು ಇನ್ನೂ ಹೆಚ್ಚಾಗಿದೆ.

ಮೊಳಕಾಲ್ಮುರು, ಕೊಂಡ್ಲಹಳ್ಳಿ, ತೊರೆಕೋಲಮ್ಮನಹಳ್ಳಿ, ಓಬಣ್ಣನಹಳ್ಳಿ, ಅಬ್ಬೇನಹಳ್ಳಿ ಗ್ರಾಮಗಳು ರೇಷ್ಮೆಸೀರೆಗೆ, ಊಡೇವು, ಕೋನಸಾಗರ, ತಿಮ್ಮಲಾಪುರ, ಪರಶುರಾಂಪುರ, ಕಾಮಸಮುದ್ರ, ಮೊಗಲಹಳ್ಳಿ, ಚಿಕ್ಕಮ್ಮನಹಳ್ಳಿಯು ಕಂಬಳಿ ನೇಯ್ಗೆಗೆ ಹೆಸರುವಾಸಿಯಾಗಿದ್ದವು. 15 ವರ್ಷಗಳ ಹಿಂದೆ ಈ ಗ್ರಾಮಗಳಿಗೆ ಹೋದರೆ ಎಲ್ಲಾ ಬೀದಿಗಳಲ್ಲಿ ಮಗ್ಗದ ಸದ್ದು ಕೇಳಿಸುತ್ತಿತ್ತು. ಈಗ ಮಗ್ಗಗಳ ಅವಶೇಷ ಮಾತ್ರ ಕಾಣಸಿಗುತ್ತಿದೆ ಎಂದು ನೇಕಾರ ಮುಖಂಡ ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ 2000 ಕಂಬಳಿ ಮತ್ತು 500 ರೇಷ್ಮೆಸೀರೆ ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. ಉದ್ಯಮ ಉತ್ತಮವಾಗಿ ನಡೆಯುತ್ತಿದ್ದ ಸಮಯದಲ್ಲಿ ಇದರ 4 ಪಟ್ಟು ಮಗ್ಗಗಳಿದ್ದವು. ರೇಷ್ಮೆಸೀರೆ ನೇಯ್ಗೆಯು ಮೊಳಕಾಲ್ಮುರು, ಕೊಂಡ್ಲಹಳ್ಳಿ, ತೊರೆಕೋಲಮ್ಮನ ಹಳ್ಳಿಗಳಲ್ಲಿ ಮಾತ್ರ ನಡೆಯುತ್ತಿದೆ. ಕಂಬಳಿ ನೇಯ್ಗೆಯಿಂದ ಕೂಲಿ ಹೆಚ್ಚು ಸಿಗದ ಕಾರಣ ಹೊಸ ನೇಕಾರರು ಮುಂದಾಗುತ್ತಿಲ್ಲ ಎಂದು ಕೈಮಗ್ಗ ಜವಳಿ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ ತಿಳಿಸಿದರು.

ಕೆಎಚ್‌ಡಿಸಿಯು ಸಕಾಲಕ್ಕೆ ಕೂಲಿ ಮತ್ತು ನೂಲು ನೀಡುತ್ತಿಲ್ಲ. ಕೂಲಿ ಹೆಚ್ಚಳ ಮಾಡಿಲ್ಲ. ಸತಾಯಿಸಿ ಜರಿ, ನೂಲು ನೀಡುತ್ತಾರೆ. ಇದರಿಂದ ಮಗ್ಗವನ್ನು ಖಾಲಿ ಬಿಡಬೇಕು. ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗದ ಕಾರಣ ನೇಯ್ಗೆ ಬಿಡಲಾಗಿದೆ. ಖಾಸಗಿ ಮಾಸ್ಟರ್ ವೀವರ್ಸ್‌ಗಳಿಗೆ ಹೋಲಿಸಿದಲ್ಲಿ ಹಳೆ ಡಿಸೈನ್‌ಗಳನ್ನು ನೇಯಿಸುತ್ತಾರೆ. ಇದು ಮಾರಾಟದ ಮೇಲೂ ಪ್ರಭಾವ ಬೀರಿದೆ. ಇದರಿಂದ ನಿಗಮ ನಷ್ಟದಲ್ಲಿ ಸಾಗುತ್ತಿದೆ ಎಂದು ನೇಕಾರ ಮುಖಂಡ ಪಿ. ಶ್ರೀನಿವಾಸುಲು ದೂರಿದರು.

400ರಷ್ಟಿದ್ದ ಕೆಎಚ್‌ಡಿಸಿ ಮಗ್ಗಗಳು ಇಂದು ಶೇ 10ಕ್ಕೆ ಕುಸಿದಿವೆ. ಅನೇಕರು ಖಾಸಗಿಯವರ ಬಳಿ ನೂಲು ತಂದು ನೇಯುತ್ತಿದ್ದಾರೆ. ನೂರಾರು ನೇಕಾರರು ಗಾರೆ, ಹೋಟೆಲ್, ಬೀದಿಬದಿ ಅಂಗಡಿ, ಗುಳೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಇಂತಹ ಸಂಪತ್ತಿಗೆ ನೇಕಾರರ ದಿನಾಚರಣೆಯು ಮೂಗಿಗೆ ತುಪ್ಪು ಸವರಿದ ರೀತಿಯಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಪ್ರಶಸ್ತಿಗೆ ಪಾತ್ರವಾಗಿರುವ ಬಿ.ಟಿ. ತಿಪ್ಪೇಸ್ವಾಮಿ ಅವರು ನೇಯ್ಗೆ ಮಾಡಿಸುವ ಕುರಿ ಉಣ್ಣೆ ಕಂಬಳಿ
ರಾಜ್ಯ ಪ್ರಶಸ್ತಿಗೆ ಪಾತ್ರವಾಗಿರುವ ಬಿ.ಟಿ. ತಿಪ್ಪೇಸ್ವಾಮಿ ಅವರು ನೇಯ್ಗೆ ಮಾಡಿಸುವ ಕುರಿ ಉಣ್ಣೆ ಕಂಬಳಿ

ಕನ್ನಡ ಬಾವುಟವಿರುವ ಕಂಬಳಿಗೆ ರಾಜ್ಯ ಪ್ರಶಸ್ತಿ ಈ ಬಾರಿಯ ಉಣ್ಣೆ ವಿಭಾಗದಲ್ಲಿ ತಾಲ್ಲೂಕಿನ ಕೊಂಡ್ಲಹಳ್ಳಿಯ ಬಿ.ಟಿ.ತಿಪ್ಪೇಸ್ವಾಮಿ ಅವರು ನೇಯ್ದಿರುವ ಕರ್ನಾಟಕ ರಾಜ್ಯ ನಕ್ಷೆ ಮತ್ತು ಕನ್ನಡ ಬಾವುಟವಿರುವ ಕಂಬಳಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಬೆಂಗಳೂರಿನಲ್ಲಿ ಆಗಸ್ಟ್‌ 7ರಂದು ನಡೆಯಲಿರುವ ಕೈಮಗ್ಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕೈಮಗ್ಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT