ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪ್ರಜಾವಾಣಿ' ಅಮೃತಗಳಿಗೆ ಸಾರ್ಥಕಗೊಳಿಸಿದ ಆರೋಗ್ಯ ಶಿಬಿರ

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗ
Last Updated 9 ಫೆಬ್ರುವರಿ 2023, 8:17 IST
ಅಕ್ಷರ ಗಾತ್ರ

ಚಿತ್ರದುರ್ಗ: 'ಪ್ರಜಾವಾಣಿ'ಯ 75ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಹೃದಯ ಉಚಿತ ತಪಾಸಣಾ ಶಿಬಿರ ಗುರುವಾರ ಯಶಸ್ವಿಯಾಗಿ ನೆರವೇರಿತು.

ಸಂಗೊಳ್ಳಿ ರಾಯಣ್ಣ ವೃತ್ತದ ನರ್ಮದಾ ಹೋಮ್ ನೀಡ್ಸ್ ಕಾಂಪ್ಲೆಕ್ಸ್ ನಲ್ಲಿ ಆರ್ಯ ವೈಶ್ಯ ಸಂಘದ ಸಹಭಾಗಿತ್ವದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು. ಪತ್ರಿಕೆಯ ಸಂಭ್ರಮದ ಗಳಿಗೆಯನ್ನು ಶಿಬಿರ ಸಾರ್ಥಕಗೊಳಿಸಿತು.

ಚಿತ್ರದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು ತಾಲ್ಲೂಕು ಸೇರಿ ಜಿಲ್ಲೆಯ ಹಲವೆಡೆಯಿಂದ ಜನರು ಬಂದಿದ್ದರು. ಮಕ್ಕಳು, ವೃದ್ದರು, ಮಹಿಳೆಯರು ಸೇರಿದಂತೆ ಹಲವರು ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟರು. ಬೆಳಿಗ್ಗೆ10.30ಕ್ಕೆ ಆರಂಭವಾದ ಶಿಬಿರ ಮಧ್ಯಾಹ್ನ 1.30ರ ವರಗೆ ನಿರಂತರವಾಗಿ ನಡೆಯಿತು.

ಬುರುಜನಹಟ್ಟಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಪೆಂಡಾಲ್ ಹಾಕಿ ಶಿಬಿರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 9.30ರಿಂದಲೇ ಜನರು ಆಗಮಿಸತೊಡಗಿದ್ದರು. ಜನರನ್ನು ಆತ್ಮೀಯವಾಗಿ ಬರಮಾಡಿಕೊಂಡ ಆಸ್ಪತ್ರೆಯ ಸಿಬ್ಬಂದಿ ಜನರಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಹೆಸರು ನೋಂದಣಿ ಮಾಡಿಸಿ ಸರತಿಯಲ್ಲಿ ಕಾದು ತಪಾಸಣೆಗೆ ಒಳಪಟ್ಟರು.

ರಕ್ತದೊತ್ತಡ, ಮಧುಮೇಹ, ಎದೆನೋವು, ಅತಿಯಾದ ತೂಕ, ಉಸಿರಾಟದ ತೊಂದರೆ ಹೀಗೆ ಹಲವು ಸಮಸ್ಯೆಯಿಂದ ಬಳಲುತ್ತಿದ್ದವರು ತಪಾಸಣೆಗೆ ಒಳಗಾದರು. ಎದೆಯಲ್ಲಿ ಉರಿ, ಆಯಾಸ, ಅತಿಯಾದ ಬೆವರುವಿಕೆ ಇತರ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ವೈದ್ಯರು ಮಾಹಿತಿ ಕಲೆ ಹಾಕಿದರು. ವಯಸ್ಸು, ವೃತ್ತಿ, ಊರು, ಆರೋಗ್ಯ ಸಮಸ್ಯೆಯ ಹಿನ್ನೆಲೆ ಕೆದಕಿ ತೊಂದರೆಗೆ ಪೂಕರವಾದ ವಿವರ ಪಡೆದರು.

ಇಸಿಜಿ, ಇಕೊ, ಆರ್ ಬಿಎಸ್, ಮಧುಮೇಹ, ರಕ್ತದ ಒತ್ತಡ ಸೇರಿ ಇತರ ಪರೀಕ್ಷೆ ನಡೆಸಲಾಯಿತು. ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಸಮಾಲೋಚನೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದರು. ಹೆಚ್ಚಿನ ತಪಾಸಣೆ ಹಾಗೂ ಚಿಕಿತ್ಸೆಯ ಅಗತ್ಯ ಇರುವವರಿಗೆ ಆಸ್ಪತ್ರೆ ಸಂಪರ್ಕಿಸುವಂತೆ ತಿಳಿಹೇಳಿದರು. ಹೃದ್ರೋಗಕ್ಕೆ ಸಂಬಂಧಿಸಿದ ಸಮಸ್ಯೆ, ಆತಂಕ, ಭಯ ಹೊಂದಿದ್ದ ಅನೇಕರು ಶಿಬಿರ ಮುಗಿದ ಬಳಿಕ ನಿರಾಯಸವಾಗಿ ಮರಳಿದರು.

ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಶರತ್ ಪಿ.ಸಂಗನಗೌಡರ್, ಡಾ.ಮನೀಶ್ ಎಂ.ಕಾರಕ, ಮಾರುಕಟ್ಟೆ ವಿಭಾಗದ ಡಿ.ಪಿ. ಪ್ರಾಣೇಶ್ ಕುಮಾರ್, ಶಿಬಿರದ ಉಸ್ತುವಾರಿ ಎಸ್.ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT