ಭಾನುವಾರ, ಜನವರಿ 17, 2021
22 °C
ಸರ್ಕಾರ ಸರ್ಕಾರಿ ನೌಕರರಿಗಾಗಿ 2021ರಲ್ಲಿ ಜಾರಿಗೆ ತರುವ ಭರವಸೆ: ಸಿ.ಎಸ್.ಷಡಾಕ್ಷರಿ

₹ 50 ಲಕ್ಷದವರೆಗೂ ಉಚಿತ ಆರೋಗ್ಯ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಸರ್ಕಾರಿ ನೌಕರರಿಗಾಗಿ ₹ 1ರಿಂದ ₹ 50 ಲಕ್ಷದವರೆಗೂ ಉಚಿತ ಆರೋಗ್ಯ ಸೇವೆ ನೀಡಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. ರಾಜ್ಯ ಸರ್ಕಾರ 2021ರ ಏಪ್ರಿಲ್ 1ರಂದು ಇದನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಮುರುಘಾಮಠದ ಅನುಭವ ಮಂಟಪದಲ್ಲಿ ರಾಜ್ಯ ಹಾಗೂ ಜಿಲ್ಲಾ ಸಂಘದಿಂದ ಶನಿವಾರ ಆಯೋಜಿಸಿದ್ದ ‘ಕನ್ನಡ ರಾಜ್ಯೋತ್ಸವ, ಸರ್ಕಾರಿ ನೌಕರರು ಮತ್ತು ಶಿಕ್ಷಕರೊಂದಿಗೆ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಈ ಉಚಿತ ಆರೋಗ್ಯ ಸೇವೆ ಯೋಜನೆ ರಾಜ್ಯದಲ್ಲಿ ಜಾರಿಯಾದರೆ, ಸಾವಿರಾರು ರೋಗಗಳಿಗೆ ಉಚಿತವಾಗಿ ಉನ್ನತಮಟ್ಟದ ಆಸ್ಪತ್ರೆಗಳಲ್ಲಿ ಸೌಲಭ್ಯ ದೊರೆಯಲಿದೆ. ಮಹಿಳಾ ಸರ್ಕಾರಿ ನೌಕರರ ಪೋಷಕರನ್ನು ಇದರ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಪ್ರತಿ ತಿಂಗಳು ₹ 1 ಸಾವಿರ ಮೌಲ್ಯದ ಉಚಿತ ಜನರಿಕ್ ಔಷಧ ಕೂಡ ದೊರೆಯಲಿದೆ’ ಎಂದರು.

‘ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ದೇಶದ 23 ರಾಜ್ಯಗಳಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿದೆ. 2023ರ ಒಳಗೆ ರಾಜ್ಯದಲ್ಲೂ ಈ ಯೋಜನೆ ಸರ್ಕಾರದಿಂದ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ರಾಜ್ಯದಲ್ಲಿ ಸರ್ಕಾರಿ ನೌಕರರ ಮೇಲೆ ಒತ್ತಡ ಹೆಚ್ಚಿದೆ. ಅದಕ್ಕಾಗಿ ಖಾಲಿ ಇರುವ 2.4 ಲಕ್ಷ ಹುದ್ದೆ ಭರ್ತಿ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಸೇವೆ ಆಧಾರದ ಮೇಲೆ ಮುಂಬಡ್ತಿ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಇದನ್ನು ಕೂಡ ಮುಖ್ಯಮಂತ್ರಿ ಬಳಿ ಚರ್ಚಿಸಿ ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಎನ್‌ಪಿಎಸ್‌ನಿಂದ ಅನೇಕರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಹಿಂದಿನಂತೆ ಒಪಿಎಸ್ ಜಾರಿಗೊಳಿಸಬೇಕು. ಶಿಕ್ಷಕರ ಅನೇಕ ಸಮಸ್ಯೆಗಳಿವೆ. ಯಾವುದೇ ಸಮಸ್ಯೆಯಾಗಲಿ ಬಗೆಹರಿಯಬೇಕಾದರೆ ಸಂಘಟನೆ ಅತ್ಯಂತ ಅಗತ್ಯ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಸರ್ಕಾರದ ವಿರುದ್ಧ ಹೋರಾಟಕ್ಕೂ ಸಿದ್ಧ. ಆ ವೇಳೆ ನೀವು ಕೂಡ ಬೀದಿಗಿಳಿದು ಹೋರಾಡಲು ಸನ್ನದ್ಧರಾಗಬೇಕು’ ಎಂದು ಸಲಹೆ ನೀಡಿದರು.

‘ನೌಕರರ ಕೆಲವು ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಇದುವರೆಗೂ ನೌಕರರಿಗೆ 10 ಸಿಎಲ್‌ಗಳನ್ನು ನೀಡಲಾಗುತ್ತಿತ್ತು. ಮನವಿ ಮಾಡಿಕೊಂಡು ಸಿಎಲ್‌ಗಳನ್ನು 15ಕ್ಕೆ ಏರಿಕೆ ಮಾಡಿಸಲಾಗಿದೆ. ಸರ್ಕಾರಿ ನೌಕರರು ನಿಧನರಾದರೆ ಅಂತ್ಯಸಂಸ್ಕಾರಕ್ಕಾಗಿ ₹5 ಸಾವಿರ ನೀಡುತ್ತಿದ್ದ ಮೊತ್ತವನ್ನು ₹ 15 ಸಾವಿರಕ್ಕೆ ಹೆಚ್ಚಿಸಲಾಗಿದೆ. ಡಯಲಿಸಿಸ್ ಹಾಗೂ ಕ್ಯಾನ್ಸರ್ ರೋಗಿಗಳಿಗೆ ವೈದ್ಯರು ಸೂಚಿಸಿರುವವರೆಗೂ ರಜೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ತಿಳಿಸಿದರು.

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡ ಪಾಟೀಲ್, ‘ಮುಂಬರುವ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡಿದರೆ ಮಾತ್ರ ನಿಮ್ಮ ಪರವಾಗಿ ಕೆಲಸ ಮಾಡಲಿದ್ದಾರೆ. ಮತ ಹಾಕುವ ಮುನ್ನ ಆಲೋಚಿಸಿ ಅರ್ಹರಿಗೆ ನೀಡಿ ಸಂಘ ಬಲಪಡಿಸಿ’ ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಘಟಕದ ಖಚಾಂಚಿ ಶ್ರೀನಿವಾಸ, ಗೌರವಾಧ್ಯಕ್ಷ ಶಿವರುದ್ರಯ್ಯ, ಕಾರ್ಯದರ್ಶಿ ಬಿ.ಜಿ. ಹಿರಿಗೌಡ, ವಿಭಾಗೀಯ ಉಪಾಧ್ಯಕ್ಷ ಮೋಹನ್‌ಕುಮಾರ್, ದಾವಣಗೆರೆ ಜಿಲ್ಲಾ ಅಧ್ಯಕ್ಷ ಫಾಲಾಕ್ಷ, ಗೌರವಾಧ್ಯಕ್ಷ ಉಮೇಶ್, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಹರೀಶ್, ಚಿತ್ರದುರ್ಗ ಜಿಲ್ಲಾ ಸಂಘದ ಅಧ್ಯಕ್ಷ ಮಂಜುನಾಥ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು