ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಮಗು ಕೊಳವೆಬಾವಿಗೆ ಬಿದ್ದು 19 ವರ್ಷ ಕಳೆದರೂ ಸಿಗದ ಪರಿಹಾರ

ಹಿರಿಯೂರು ತಾಲ್ಲೂಕಿನ ದಾಸಣ್ಣನಮಾಳಿಗೆಯ ಅಂಜಿನಪ್ಪ ದಂಪತಿಯ ಅಳಲು
Last Updated 18 ನವೆಂಬರ್ 2021, 11:12 IST
ಅಕ್ಷರ ಗಾತ್ರ

ಹಿರಿಯೂರು:ಚಿಕ್ಕಮ್ಮನ ಜೊತೆ ಕಟ್ಟಿಗೆ ತರಲು ಸಮೀಪದ ಅಡವಿಗೆ ಹೋಗಿ ಮರಳುವಾಗ ರಸ್ತೆ ಬದಿಯಲ್ಲಿದ್ದ ರೈತರೊಬ್ಬರ ತೆರೆದ ಕೊಳವೆಬಾವಿಗೆ ಬಿದ್ದ 7 ವರ್ಷದ ಮಗು ಎಲ್ಲ ಪ್ರಯತ್ನಗಳ ನಂತರವೂ ಬದುಕಿ ಉಳಿಯಲಿಲ್ಲ.ಸರ್ಕಾರದಿಂದ ಪರಿಹಾರ ಬರುತ್ತದೆ ಎಂದು 19 ವರ್ಷದಿಂದ ಕಾಯುತ್ತಿದೆ ಮಗುವಿನ ಕುಟುಂಬ.

2002 ಮಾರ್ಚ್ 30ರಂದು ತಾಲ್ಲೂಕಿನ ದಾಸಣ್ಣನ ಮಾಳಿಗೆ ಗ್ರಾಮದ ಅಂಜಿನಪ್ಪ, ಸುಶೀಲಮ್ಮ ದಂಪತಿ ಪುತ್ರ ರವಿಕುಮಾರ್ 30 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ. ವಿಷಯ ತಿಳಿದ ಜಿಲ್ಲಾಧಿಕಾರಿ, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮಗುವನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದರು. ಕಾರ್ಯಾಚರಣೆ ಯಶಸ್ವಿಯಾಗದೆ ಮಗು ಮೃತಪಟ್ಟಿತ್ತು.

ಆಗ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಹಾರದ ಭರವಸೆ ನೀಡಿದ್ದರು. 2002ರಿಂದ 2021ರವರೆಗೆ ಹಲವು ಪಕ್ಷಗಳ ಸರ್ಕಾರಗಳು ಆಳಿ ಹೋಗಿವೆ. ಆದರೆ, ಅಂಜಿನಪ್ಪ ಅವರಿಗೆ ಪರಿಹಾರ ಎಂಬುದು ಇಂದಿಗೂ ಮರೀಚಿಕೆ. ಪರಿಹಾರದ ಹಣ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದು ಕೂಲಿ ಮಾಡಿ ಕೂಡಿಟ್ಟಿದ್ದ ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾರೆ ಅಂಜಿನಪ್ಪ.

‘ನನ್ನ ಮಗ ಇಂದು ಬದುಕಿದ್ದರೆ 26ರ ಪ್ರಾಯದವನಾಗಿರುತ್ತಿದ್ದ. ಇಬ್ಬರು ಅಕ್ಕಂದಿರಿಗೆ ಅವನೇ ಮದುವೆ ಮಾಡುತ್ತಿದ್ದ. ಅವನನ್ನು ಕಳೆದುಕೊಂಡ ನಾನು ಸಾಲ ಮಾಡಿ ಮಕ್ಕಳಿಗೆ ಮದುವೆ ಮಾಡಿದ್ದೇನೆ. ಒಬ್ಬ ಮಗಳು ಮನೆಗೆ ಮರಳಿದ್ದಾಳೆ. ಆರು ಮೊಮ್ಮಕ್ಕಳಿವೆ. ಅವನ್ನೆಲ್ಲ ಸಾಕುವ ಹೊಣೆ ನಮ್ಮ ಮೇಲಿದೆ. ಸ್ವಂತ ಜಮೀನಿಲ್ಲ. ಮೇಟಿಕುರ್ಕೆ ಗ್ರಾಮದ ಬಳಿ ಸೂರಗೊಂಡನಹಳ್ಳಿ ರಸ್ತೆಯಲ್ಲಿ ಗುಡಿಸಲು ಕಟ್ಟಿಕೊಂಡಿದ್ದೇವೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ತೀರಾ ವಯಸ್ಸಾದ ಮೇಲೆ ಮಕ್ಕಳು–ಮೊಮ್ಮಕ್ಕಳ ಗತಿ ಏನಾಗುತ್ತದೆ ಎಂದು ನೆನೆಸಿಕೊಂಡರೆ ಗಾಬರಿಯಾಗುತ್ತದೆ’ ಎಂದು ಕಣ್ಣೀರು ಹಾಕಿದರು ಸುಶೀಲಮ್ಮ.

‘ನಮ್ಮ ಮಗ ಸತ್ತಾಗಲೇ ಪರಿಹಾರ ಬರುವುದಿಲ್ಲ ಎಂದಿದ್ದರೆ, ಸುಮ್ಮನಾಗುತ್ತಿದ್ದೆವು. ಪರಿಹಾರದ ಆಸೆ ಹುಟ್ಟಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಮುಖ್ಯಮಂತ್ರಿ ಕಚೇರಿವರೆಗೆ ಅಲೆಯುವಂತೆ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಸಿಗುತ್ತದೆ ಎಂದಿದ್ದರು. ಅಲ್ಲಿಗೆ ಓಡಾಡಿದೆ. ಸಿಎಂ ಪರಿಹಾರ ನಿಧಿಯಿಂದ ಕೊಡಬಹುದು, ಪ್ರಯತ್ನಿಸಿ’ ಎಂದರು. ಅಲ್ಲಿಗೂ ಅಲೆದಾಡಿದೆ. ನನ್ನ ಅಲೆದಾಟದ ಮಾಹಿತಿ ಪಡೆದ ಡಿ.ಸುಧಾಕರ್ 2013 ಜೂನ್ 22ರಂದು ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಫಲ ಸಿಗಲಿಲ್ಲ’ ಎಂದು ಅಂಜಿನಪ್ಪ ಹತಾಶೆ ಹೊರಹಾಕಿದರು.

‘ನಮಗೂ ವಯಸ್ಸಾಗಿದೆ. ನಿತ್ಯ ಕೂಲಿ ಮಾಡಿ ದೊಡ್ಡ ಕುಟುಂಬ ನಿರ್ವಹಣೆ ಮಾಡುವುದು ಸಾಧ್ಯವೇ? ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸಿದ್ದುಂಟು. ಜನಪ್ರತಿನಿಧಿಗಳು ನಮಗೆ ಸಹಾಯ ಮಾಡಿದರೆ ಅನುಕೂಲ ಆಗುತ್ತದೆ’ ಎಂದು ಅಳಲು ತೋಡಿಕೊಂಡರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT