ಶನಿವಾರ, ಸೆಪ್ಟೆಂಬರ್ 25, 2021
29 °C

ಅತಂತ್ರ ಪರಿಸ್ಥಿತಿ; ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಭೋವಿ ಸಮುದಾಯದ ಅನೇಕರು ನೆಲೆ ಹಾಗೂ ಶಿಕ್ಷಣದ ಕೊರತೆಯ ಕಾರಣಕ್ಕೆ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬೇಸರ
ವ್ಯಕ್ತಪಡಿಸಿದರು.

ಇಲ್ಲಿನ ಹೊರವಲಯದ ಭೋವಿ ಗುರುಪೀಠದಲ್ಲಿ ಕೋಲಾರ ಮತ್ತು ಚಿತ್ರದುರ್ಗ ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಲಾಯುಗದ ಕಾಲದಿಂದ ಈವರೆಗೆ ಭೋವಿ ಸಮುದಾಯ ಅಸ್ಮಿತೆ ಉಳಿಸಿಕೊಂಡು ಬಂದಿದೆ. ಕೃಷಿ, ಕಟ್ಟಡ ನಿರ್ಮಾಣ ಹಾಗೂ ಗಣಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗದ ಕಾರಣಕ್ಕೆ ಅಲೆಮಾರಿ ಸ್ವಭಾವ ಹೊಂದಿದ್ದಾರೆ. ಅಲೆದಾಟದ ಪರಿಣಾಮವಾಗಿ ಸಮುದಾಯ ನೆಲೆ ಕಂಡುಕೊಳ್ಳಲು ಕಷ್ಟಪಡುತ್ತಿದೆ’ ಎಂದು ಹೇಳಿದರು.

‘ರಾಜರ ಆಡಳಿತದ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಶಾಸನ ರಚಿಸಿದ್ದು ಭೋವಿ ಸಮುದಾಯ. ಮೂಢನಂಬಿಕೆ, ಕಂದಾಚಾರಗಳಿಗೆ ಕಟ್ಟುಬಿದ್ದು ಹಿಂದುಳಿದಿದೆ. ಶಿಕ್ಷಣದಿಂದ ಮಾತ್ರ ಸಮುದಾಯ ಸಂಘಟಿತವಾಗಲು ಸಾಧ್ಯವಿದೆ. ಸಮುದಾಯದ ಅಭಿವೃದ್ಧಿಗೂ ಶಿಕ್ಷಣ ನೆರವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಉಪವಿಭಾಗಾಧಿಕಾರಿ ಚಂದ್ರಯ್ಯ, ‘ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಂಘಟನೆ ಆಗಬೇಕಿದೆ. ಸಂಘದ ಚೌಕಟ್ಟು ಮೀರದೇ ಕೆಲಸ ಮಾಡಬೇಕಿದೆ. ಉತ್ತಮ ಕೆಲಸ ಮಾಡುತ್ತ ಹೊಸ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ಮಂಜುನಾಥ, ಗೌರವಾಧ್ಯಕ್ಷ ಶಿವರುದ್ರಯ್ಯ, ಕೋಲಾರ ನೌಕರರ ಸಂಘದ ಅಧ್ಯಕ್ಷ ರತ್ನಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.