ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂದಿನ ವರ್ಷದಿಂದ ಒಪಿಎಸ್ ಜಾರಿ: ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಭರವಸೆ

Published : 20 ಸೆಪ್ಟೆಂಬರ್ 2024, 15:22 IST
Last Updated : 20 ಸೆಪ್ಟೆಂಬರ್ 2024, 15:22 IST
ಫಾಲೋ ಮಾಡಿ
Comments

ಹೊಳಲ್ಕೆರೆ: ಮುಂದಿನ ವರ್ಷದಿಂದ ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸುವ ಕಾರ್ಯಕ್ಕೆ ಮುಂದಾಗಿದ್ದೇನೆ. 28 ವರ್ಷ ಆಗದ ಕೆಲಸಗಳಿಗೆ ಕೇವಲ 3 ತಿಂಗಳಲ್ಲಿ ಚುರುಕು ನೀಡಿದ್ದೇನೆ. ಶಿಕ್ಷಕರ ಪ್ರಮುಖ ಬೇಡಿಕೆಯಾಗಿರುವ ಹಳೆಯ ಪಿಂಚಣಿ ಯೋಜನೆ ಜಾರಿ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿದ್ದು, ಅವರ ಆದೇಶದಂತೆ ಈಗ ಪೂರ್ಣ ಪ್ರಮಾಣದ ಸಮಿತಿ ರಚನೆ ಆಗಿದೆ. ಗ್ಯಾರಂಟಿ ಯೋಜನೆಗೆ ಹೆಚ್ಚು ಹಣ ಬೇಕಾಗಿರುವುದರಿಂದ ಈ ವರ್ಷ ಒಪಿಎಸ್ ಜಾರಿ ಕಷ್ಟ. ಮುಂದಿನ ವರ್ಷ ಹಣಕಾಸು ಲಭ್ಯತೆ ನೋಡಿಕೊಂಡು ಯೋಜನೆ ಜಾರಿಗೊಳಿಸಲಾಗುವುದು’ ಎಂದರು.

ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ. ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಸರ್ಕಾರಕ್ಕೆ ₹430 ಕೋಟಿ ಹೊರೆ ಆಗುತ್ತಿದ್ದರೂ, ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಿ ಆ್ಯಂಡ್ ಆರ್ ನಿಯಮ ತಿದ್ದುಪಡಿಗೂ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದರು.

ಖಾಸಗಿ ಹಾಗೂ ಅನುದಾನಿತ ಶಾಲೆಗಳನ್ನು ಪ್ರತೀ ವರ್ಷ ನವೀಕರಣ ಮಾಡಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದಲ್ಲದೆ ಸರ್ಕಾರಿ ಶಾಲೆ ಹೊರತುಪಡಿಸಿ ಖಾಸಗಿ ಶಾಲೆಗಳು 5 ಸುರಕ್ಷಾ ನಿಯಮಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಇದರಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. 40–50 ವರ್ಷದಿಂದ ಶಾಲೆ ನಡೆಸಿಕೊಂಡು ಬರುತ್ತಿರುವವರಿಗೆ ಸಮಸ್ಯೆ ಆಗಿದೆ. ನ್ಯಾಯಾಲಯ 5 ವರ್ಷಕ್ಕೊಮ್ಮೆ ನವೀಕರಣ ಮಾಡಿಸಬಹುದು ಎಂದು ತೀರ್ಪು ನೀಡಿದ್ದರೂ, ಅದು ಪಾಲನೆ ಆಗುತ್ತಿಲ್ಲ. ಲೋಕೋಪಯೋಗಿ ಹಾಗೂ ಶಿಕ್ಷಣ ಇಲಾಖೆಗಳಿಂದ ಪ್ರತೀ ವರ್ಷ ಪ್ರಮಾಣ ಪತ್ರ ಪಡೆಯಬೇಕಾಗಿದ್ದು, ಅಲ್ಲಿನ ಅಧಿಕಾರಿಗಳು ಲಂಚ ಕೊಟ್ಟವರಿಗೆ ಮಾತ್ರ ಪ್ರಮಾಣ ಪತ್ರ ಕೊಡುತ್ತಿದ್ದಾರೆ. ಈ ನಿಯಮದಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ದೂರಿದರು.

ತಹಶೀಲ್ದಾರ್ ಬೀಬಿ ಫಾತಿಮಾ, ಪುರಸಭೆ ಸದಸ್ಯ ಕೆ.ಸಿ.ರಮೇಶ್, ಬಿ.ಗಂಗಾಧರ್, ಬಿಸಿಎಂ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್, ಎ.ಜಯಪ್ಪ, ರಶೀದ್, ದೇವರಾಜ್, ಚಂದ್ರ ನಾಯ್ಕ್, ತಿಮ್ಮೇಶ್, ಕಿರಣ್, ವೀರೇಶ್, ಮನೋಹರ್, ಚಂದ್ರಶೇಖರ್, ರಂಗಸ್ವಾಮಿ, ಕಾಂತರಾಜು, ರವಿ, ಶಿವಣ್ಣ, ಕರಿಸಿದ್ದಪ್ಪ, ಜಗದೀಶ್, ರಮೇಶ್ ಇದ್ದರು.

ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಶೀಘ್ರವೇ ಕಚೇರಿ ಆರಂಭಿಸಲಾಗುವುದು. ಶಿಕ್ಷಕರು ಯಾವುದೇ ಸಮಸ್ಯೆ ಇದ್ದರೂ ನನ್ನನ್ನು ಭೇಟಿ ಮಾಡಬಹುದು.
-ಡಿ.ಟಿ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT