ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಮೂಲಗಳ ಸಂರಕ್ಷಣೆಗೆ ಮುಂದಾಗಿ: ಜಿಲ್ಲಾಧಿಕಾರಿ ಕವಿತಾ ಸಲಹೆ

‘ಕೆರೆ ಸಂರಕ್ಷಣೆ’ ಕಾರ್ಯಾಗಾರ
Last Updated 10 ಮಾರ್ಚ್ 2022, 2:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಎಲ್ಲ ರೈತರು ಮೊದಲು ಮನದಟ್ಟು ಮಾಡಿಕೊಳ್ಳಬೇಕು. ಜತೆಗೆ ಜಲಮಾಲಿನ್ಯ ಆಗದಂತೆ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸಲಹೆ ನೀಡಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಬುಧವಾರ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿದ್ದ ‘ಕೆರೆ ಸಂರಕ್ಷಣೆ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ‘ಕೃಷಿ ಚಟುವಟಿಕೆಗೆ ಕೆರೆಗಳು ಪ್ರಮುಖ ಜಲ ಮೂಲಗಳಾಗಿವೆ. ಆದ್ದರಿಂದ ರೈತರು, ಕೆರೆ ಬಳಕೆದಾರರು ಹೆಚ್ಚಿನ ಗಮನಹರಿಸಬೇಕು’ ಎಂದರು.

‘ಯಾವುದೇ ರೀತಿಯ ಸಂದೇಹ ಮತ್ತು ಗೊಂದಲಗಳಿದ್ದರೆ ಇಲ್ಲಿಯೇ ಅದನ್ನು ಬಗೆಹರಿಸಿಕೊಳ್ಳಿ. ಕೆರೆ ಸಂರಕ್ಷಣೆಗಾಗಿ ನಮ್ಮ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು, ಕೆರೆ ಬಳಕೆದಾರರ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಕೆರೆಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ದೊಡ್ಡ ಜವಾಬ್ದಾರಿ ಹಾಗೂ ಕರ್ತವ್ಯ ಆಗಿದೆ’ ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬನ್ನಿಕಟ್ಟೆ ಹನುಮಂತಪ್ಪ ಮಾತನಾಡಿ, ‘ದೇಶದ ಬೆನ್ನೆಲುಬಾದ ರೈತರಿಗೆ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯವಶ್ಯಕವಾಗಿವೆ. ಈ ವಿಚಾರದಲ್ಲಿ ರೈತರಿಗೆ ಅನುಕೂಲವಾಗುವ ಸೌಕರ್ಯಗಳು ಯಾವ ಆಯಾಮದಲ್ಲಿ ಯಾವ ರೀತಿಯಾಗಿ ಲಭಿಸಬೇಕು ಎಂಬುದನ್ನ ಜಿಲ್ಲಾಮಟ್ಟದ ಅಧಿಕಾರಿಗಳು ತಿಳಿಸಬೇಕು. ಜತೆಗೆ ಅಗತ್ಯಕ್ರಮವಹಿಸಿ ಈ ನಿಟ್ಟಿನಲ್ಲಿ ಕಾರ್ಯನ್ಮೋಖವಾಗಬೇಕು’ ಎಂದು ಸಲಹೆ ನೀಡಿದರು.

‘ರೈತರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ರಾಷ್ಟ್ರ ಮತ್ತು ರಾಜ್ಯದ ವಿವಿಧ ಇಲಾಖೆಗಳು ಅಸ್ತಿತ್ವದಲ್ಲಿವೆ. ಸಾಧ್ಯ ವಾದಷ್ಟು ರೈತರ ಸಮಸ್ಯೆ ಬಗೆಹರಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮಾತನಾಡಿ, ‘ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಜಲಮೂಲಗಳಾದ ನದಿ, ಕೆರೆ, ಕಾಲುವೆ ಇವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರದ ಮಾರ್ಗದರ್ಶನದಂತೆ ಕೆರೆಗಳ ಒತ್ತುವರಿ ತೆರವು, ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿದಂತೆ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಲಾಗುವುದು’ ಎಂದು ತಿಳಿಸಿದರು.

ತುಮಕೂರಿನ ಜಿಲ್ಲಾ ಕಾರ್ಯ ನಿರ್ವಾಹಣಾಧಿಕಾರಿ ವೆಂಕಟರಾಮು ಮಾತನಾಡಿ, ‘ಇಂದು ಕೆರೆಗಳು ಯಾಕೆ ನಶಿಸಿ ಹೋಗುತ್ತಿವೆ ಎಂದು ಮೊದಲು ನಾವು ತಿಳಿದುಕೊಳ್ಳಬೇಕು. ಕೆರೆ ಸಂರಕ್ಷಣೆ ಅಭಿವೃದ್ಧಿ ಕಾಯ್ದೆ 2014ರಲ್ಲಿ ಜಾರಿಗೆ ಬಂದಿದ್ದು, ಅದನ್ನು 2018ರಲ್ಲಿ ತಿದ್ದಪಡಿ ಮಾಡುವುದರ ಮೂಲಕ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಅಭಿವೃದ್ಧಿಗೆ ಅವಕಾಶ ನೀಡಲಾಗಿದೆ’ ಎಂದರು.

‘ಜನರು ಕೆರೆಗಳಿಗೆ ಪ್ಲಾಸ್ಟಿಕ್, ಮಣ್ಣು, ಕಸ, ಕಲ್ಲು ಹಾಕುವುದರಿಂದ ಜಲಪಾತ್ರೆಗಳು ಅಳಿವಿನಂಚಿನಲ್ಲಿವೆ. ರಾಜ್ಯದಲ್ಲಿ 39,179 ಕೆರೆಗಳಲ್ಲಿ 17,009 ಕೆರೆಗಳನ್ನು ಸರ್ವೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ಗಿರೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ನಂದಿನಿದೇವಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್‌ ಟಿ. ಮಲ್ಲಿಕಾರ್ಜುನ್, ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಬಿ.ನಾಗರಾಜಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT