ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲೆ ಕಳೆದುಕೊಳ್ಳುವ ಭೀತಿಯಲ್ಲಿ ಸಿದ್ಧರು

ಜಾಗ ಖಾಲಿ ಮಾಡಲು ಫೆ. 1ರವರೆಗೆ ಗಡುವು, ಭೂಮಿ ಹಸ್ತಾಂತರಕ್ಕೆ ಜಿಲ್ಲಾಡಳಿತ ನಿರ್ಲಕ್ಷ್ಯ
Last Updated 22 ಜನವರಿ 2022, 4:46 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಳೆಯ ಬಟ್ಟೆ, ಪ್ಲಾಸ್ಟಿಕ್‌ ಚೀಲಗಳನ್ನು ಬಳಸಿ ನಿರ್ಮಿಸಿಕೊಂಡ ಚಿಕ್ಕ ಗುಡಿಸಲು. ಪಕ್ಕದಲ್ಲೇ ಸೀರೆಯಿಂದ ಮರೆ ಮಾಡಿದ ಬಚ್ಚಲು. ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಇಲ್ಲದಿದ್ದರೂ ಎರಡು ದಶಕಗಳಿಂದ ಆಶ್ರಯ ನೀಡಿದ್ದ ಸ್ಥಳವನ್ನು ಖಾಲಿ ಮಾಡುವ ಕಾಲ ಸನ್ನಿಹಿತವಾಗಿದೆ. ನೆಲೆ ಕಳೆದುಕೊಳ್ಳುವ ಭೀತಿ 65 ಕುಟುಂಬಗಳನ್ನು ಕಾಡತೊಡಗಿದೆ.

ನಗರದ ಹೊರವಲಯದ ತಮಟಕಲ್ಲು ರಸ್ತೆಯ ಸುಡುಗಾಡು ಸಿದ್ಧರ ಬದುಕು ಮತ್ತೆ ಅತಂತ್ರಕ್ಕೆ ಸಿಲುಕಿದೆ. ಎಲ್ಲಿಗೆ ತೆರಳಿ ಗುಡಿಸಲು ನಿರ್ಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಮೂರು ವರ್ಷಗಳ ಹಿಂದೆ ಇವರಿಗೆ ಮೀಸಲಿಟ್ಟ ಭೂಮಿಯನ್ನು ಹಸ್ತಾಂತರ ಮಾಡುವಲ್ಲಿ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ.

ಮೂಲತಃ ಚಳ್ಳಕೆರೆ ತಾಲ್ಲೂಕಿನ ರಂಗವ್ವನಹಳ್ಳಿಯ ಸುಡುಗಾಡು ಸಿದ್ಧರು ಎರಡು ದಶಕಗಳ ಹಿಂದೆ ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಒಂದೇ ಊರಿನಿಂದ ಗುಳೆ ಬಂದಿರುವ ಅರೆ ಅಲೆಮಾರಿ ಸಮುದಾಯ ಅಕ್ಷರ ಜ್ಞಾನದಿಂದ ದೂರವಿದೆ. ಸ್ಟೇಷನರಿ ಸಾಮಗ್ರಿ, ಬಟ್ಟೆ ಮಾರಾಟ, ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದೆ. 65 ಕುಟುಂಬಗಳ 300 ಜನಸಂಖ್ಯೆ ನೆಲೆನಿಂತ ಭೂಮಿ ಖಾಸಗಿ ಸ್ವತ್ತು ಎಂಬುದು ಖಾತ್ರಿಯಾಗಿದೆ. ಭೂಮಿಯ ಮಾಲೀಕ ಗುಡಿಸಲು ತೆರವುಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ.

‘15 ವರ್ಷಗಳಿಂದ ಇಲ್ಲಿ ಜೀವನ ಕಟ್ಟಿಕೊಂಡಿದ್ದೇವೆ. ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರೂ ವಿದ್ಯುತ್‌ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಭೂಮಿಯ ಮಾಲೀಕರು ಪೊಲೀಸರೊಂದಿಗೆ ಬಂದು ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿದ್ದಾರೆ. ಈ ಸ್ಥಳವನ್ನು ತೆರವುಗೊಳಿಸಲು ನಾವೂ ಸಿದ್ಧರಿದ್ದೇವೆ. ನಮ್ಮ ಸಮುದಾಯಕ್ಕೆ ಮೀಸಲಿಟ್ಟ ಭೂಮಿಯಲ್ಲಿ ಗುಡಿಸಲು ನಿರ್ಮಿಸಿಕೊಳ್ಳುವ ವ್ಯವಸ್ಥೆಯನ್ನಾದರೂ ಅಧಿಕಾರಿಗಳು ಮಾಡಿಕೊಡಬೇಕು’ ಎಂದು ಅಂಗಲಾಚುತ್ತಾರೆ
ಟಿ. ಬಾಬು.

ಅಲೆಮಾರಿ ಹಾಗೂ ಅರೆ ಅಲೆಮಾರಿ ಗುಣಸ್ವಭಾವ ಹೊಂದಿರುವ ಸುಡುಗಾಡು ಸಿದ್ಧರು ನಿವೇಶನ ಹಾಗೂ ಆಶ್ರಯ ಮನೆಗೆ ಹತ್ತಾರು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಇವರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ 2017–18ರಲ್ಲಿ ಇಂಗಳದಾಳ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಬೆಟ್ಟ, ಗುಡ್ಡದಂತ ಸ್ಥಳವನ್ನು ವಾಸಯೋಗ್ಯ ಬಡಾವಣೆಯಾಗಿ ಅಭಿವೃದ್ಧಿಪಡಿಸಿ ಹಸ್ತಾಂತರಿಸಲು ಜಿಲ್ಲಾಡಳಿತ ಆಸಕ್ತಿ ತೋರುತ್ತಿಲ್ಲ ಎಂಬ ಕೊರಗು ಇವರನ್ನು
ಕಾಡುತ್ತಿದೆ.

‘ನಿವೇಶನ, ಮನೆ ಇಲ್ಲದಿರುವ ಕಾರಣಕ್ಕೆ ವಾಸ ದೃಢೀಕರಣ, ಜಾತಿ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲ ಶಿಕ್ಷಕರ ಕಾಳಜಿಯ ಕಾರಣಕ್ಕೆ ಒಂದಷ್ಟು ಮಕ್ಕಳು ಶಾಲೆಯ ಮೆಟ್ಟಿಲು ತುಳಿದಿದ್ದಾರೆ. ಪಿಯು, ವೃತ್ತಿಪರ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ಗುಡಿಸಲು ತೆರವುಗೊಳಿಸಬೇಕು ಎಂಬ ಸೂಚನೆ ಹೊರಬಿದ್ದ ಬಳಿಕ ಯಾರೊಬ್ಬರಿಗೂ ನಿದ್ದೆ ಬರುತ್ತಿಲ್ಲ’ ಎನ್ನುತ್ತಾರೆ
ಬಾಬು.

ಗರಿಷ್ಠ 6X8 ಅಡಿ ಸುತ್ತಳತೆಯ ಈ ಗುಡಿಸಲಿನಲ್ಲಿ ಇಡೀ ಕುಟುಂಬ ಜೀವನ ಸಾಗಿಸುತ್ತಿದೆ. ಪ್ರತಿ ಕುಟುಂಬದಲ್ಲಿ ಸರಾಸರಿ ಐವರು ಸದಸ್ಯರಿದ್ದಾರೆ. ಅಡುಗೆ, ಊಟ, ವಿಶ್ರಾಂತಿಗೆ ಒಂದೇ ಕೋಣೆ ಇದೆ. ವೃದ್ಧರು, ಯುವಕರು ಮನೆಯ ಹೊರಗೆ ಮಲಗುತ್ತಾರೆ. ಮಕ್ಕಳು, ಮಹಿಳೆಯರು ಹಾಗೂ ಆರೋಗ್ಯ ಸಮಸ್ಯೆ ಇರುವವರು ಮಾತ್ರ ರಾತ್ರಿ ವೇಳೆ ಗುಡಿಸಲಿನಲ್ಲಿ ನಿದ್ದೆ ಮಾಡುತ್ತಾರೆ. ಸ್ನಾನಕ್ಕೆ ಗುಡಿಸಲು ಪಕ್ಕದಲ್ಲೇ ಸೀರೆಯಿಂದ ಮರೆ ಮಾಡಿಕೊಂಡಿದ್ದಾರೆ.

ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಈ ಕುಟುಂಬಗಳಿಗೆ ಆಗಾಗ ಅಧಿಕಾರಿಗಳು ಭೇಟಿ ನೀಡಿ ನೆರವಾಗುವ ಭರವಸೆ ನೀಡಿದ್ದಾರೆ. ಮೆದೇಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಎರಡು ನಳದ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಕುಟುಂಬಗಳು ಇಲ್ಲಿಯೇ ನೀರು ಹಿಡಿದುಕೊಳ್ಳುತ್ತವೆ. ಶೌಚಾಲಯಕ್ಕೆ ಇವರು ಬಯಲನ್ನೇ
ಆಶ್ರಯಿಸಿದ್ದಾರೆ.

.....

ಇಂಗಳದಾಳ್‌ ಬಳಿ ಮೀಸಲಿಟ್ಟ ಭೂಮಿ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ.

- ಕೆ.ಎಂ. ನಾಗರಾಜ, ಅಧ್ಯಕ್ಷ, ಅಲೆಮಾರಿ, ಅರೆ ಅಲೆಮಾರಿ ಸಂಘ

....

ನಿವೇಶನ, ಆಶ್ರಯ ಮನೆಯ ಸೌಲಭ್ಯಕ್ಕೆ ಹಲವು ಸುತ್ತಿನ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಸರ್ಕಾರಿ ಸೌಲಭ್ಯ ಪಡೆಯುವುದು ಕಷ್ಟವಾಗಿದೆ.

-ಟಿ. ಬಾಬು, ಮುಖಂಡ, ಸುಡುಗಾಡು ಸಿದ್ಧರ ಸಮುದಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT