ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಗಗನಕ್ಕೇರಿದ ಈರುಳ್ಳಿಗೆ ಗ್ರಾಹಕ ತತ್ತರ

ಕೆ.ಜಿ.ಗೆ ₹ 80ರ ಗಡಿ ದಾಟಿದ ಈರುಳ್ಳಿ ಬೆಲೆ; ತಾಜಾ ತರಕಾರಿ ಪೂರೈಕೆಯ ಪ್ರಮಾಣ ಇಳಿಕೆ
Last Updated 21 ಅಕ್ಟೋಬರ್ 2020, 5:26 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾದ ಪರಿಣಾಮ ಬಹುತೇಕ ಈರುಳ್ಳಿ ಬೆಳೆ ನೆಲಕಚ್ಚಿದೆ. ಇದರಿಂದಾಗಿ ಮಾರುಕಟ್ಟೆಗೆ ಸ್ಥಳೀಯವಾಗಿ ಪೂರೈಕೆಯಾಗುವ ಈರುಳ್ಳಿ ಪ್ರಮಾಣ ತೀರಾ ಕಡಿಮೆ ಆಗಿದೆ. ಇದರಿಂದ ಈರುಳ್ಳಿ ಬೆಲೆ ಈ ಬಾರಿ ದಾಖಲೆ ಏರಿಕೆ ಖಂಡಿದೆ. ಸದ್ಯ ಒಂದು ಕೆ.ಜಿ ಈರುಳ್ಳಿ ದರ ₹80ರ ಗಡಿ ದಾಟಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಆದರೆ, ಇಳುವರಿ ಕುಸಿತ ರೈತರಿಗೆ ಹೊಡೆತ ನೀಡಿದೆ. ಜತೆಗೆ ವಿವಿಧ ಜಿಲ್ಲೆಗಳಿಂದ ಆವಕವಾಗುತ್ತಿದ್ದ ತಾಜಾ ತರಕಾರಿ ಪೂರೈಕೆಯ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ಈರುಳ್ಳಿ ಸೇರಿ ಕೆಲ ತರಕಾರಿಗಳ ಬೆಲೆ ಎರಡು ದಿನದಿಂದ ಹೆಚ್ಚಳವಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯ ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ ಸರಾಸರಿ ₹ 25ರಿಂದ ₹30 ಇತ್ತು. ಆದರೆ, ಅಕ್ಟೋಬರ್ ನಾಲ್ಕನೇ ವಾರದಲ್ಲಿ ದಿಢೀರ್ ಏರಿಕೆಯಾಗಿದೆ. ಈರುಳ್ಳಿ ಹಸಿಗೆಡ್ಡೆ ದರ ಕೆ.ಜಿಗೆ ₹40ರಿಂದ ₹50 ಹಾಗೂ ಒಣಗೆಡ್ಡೆ ಚಿಲ್ಲರೆ ಮಾರಾಟದ ಬೆಲೆ ಕೆ.ಜಿ.ಗೆ ₹80ರಂತೆ ಮಾರಾಟವಾಗುತ್ತಿದೆ. ಪ್ರಸ್ತುತ ಉತ್ತಮ ದರ ಸಿಕ್ಕರೂ ಜಿಲ್ಲೆಯ ರೈತರ ಕೈಗೆ ಬೆಳೆ ಸಿಗದೇ ಕಣ್ಣಲ್ಲಿ ನೀರು ಸುರಿಸಿದೆ. ಗ್ರಾಹಕರ ಜೇಬಿಗೂ ಕತ್ತರಿ ಬಿದ್ದಿದೆ.

ಈರುಳ್ಳಿ ಒಣಗೆಡ್ಡೆಯೂ ಜಿಲ್ಲೆಯ ಚಿತ್ರದುರ್ಗ,ಚಳ್ಳಕೆರೆ ಮಾರುಕಟ್ಟೆಯಲ್ಲಿ ₹80, ಹಿರಿಯೂರಿನಲ್ಲಿ ₹70 ಇದೆ. ಹೊಳಲ್ಕೆರೆಯಲ್ಲಿ ಉತ್ತಮ ಗೆಡ್ಡೆ ಸಿಗುತ್ತಿಲ್ಲ. ಆದರೂ ₹50ರಂತೆ ಮಾರಾಟವಾಗುತ್ತಿದೆ. ಇನ್ನು ಮೊಳಕಾಲ್ಮುರಿನ ಮಾರುಕಟ್ಟೆಯಲ್ಲಿ ₹80 ದರವಿದೆ.

ಅಡುಗೆಗೆ ಈರುಳ್ಳಿ ಅಗತ್ಯವಾದ್ದರಿಂದ ಖರೀದಿ ಗ್ರಾಹಕರಿಗೆ ಅನಿವಾರ್ಯವಾಗಿದೆ. ಬೆಲೆ ಕೇಳಿ ಕೆಲವರೂ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. 5 ಕೆ.ಜಿ, 3 ಕೆ.ಜಿ ಖರೀದಿಸುತ್ತಿರುವವರೂ ಒಂದು ಕೆ.ಜಿ ಈರುಳ್ಳಿ ಖರೀದಿಸುತ್ತಿದ್ದಾರೆ. ಆದರೆ, ಕಡಿಮೆ ಪ್ರಮಾಣದಲ್ಲಿ ಖರೀದಿಗೆ ಮುಂದಾದರೆ ಚೌಕಾಸಿಗೆ ಅವಕಾಶವೇ ಇಲ್ಲದಂತಾಗಿದೆ.

‘ಮಾರುಕಟ್ಟೆಗೆ ಬರುವ ಈರುಳ್ಳಿ ಆವಕ ಹೆಚ್ಚಾದರೆ ಮಾತ್ರ ಈ ತರಕಾರಿಯ ಬೆಲೆಯಲ್ಲಿ ಇಳಿಕೆಯಾಗಲು ಸಾಧ್ಯ’ ಎಂದು ವ್ಯಾಪಾರಿ ಮಹಮ್ಮದ್ ಸಾದತ್‌ ತಿಳಿಸಿದರು.

‘ಮಹಾರಾಷ್ಟ್ರದಲ್ಲಿಯೂ ವ್ಯಾಪಕ ವಾಗಿ ಮಳೆಯಾಗುತ್ತಿರುವ ಕಾರಣ ಈರುಳ್ಳಿ ಬೆಲೆ ದಿಢೀರ್ ಹೆಚ್ಚಳವಾಗಿದೆ. 50 ಕೆ.ಜಿ.ಯ ಒಂದು ಚೀಲ ಈರುಳ್ಳಿಗೆ ಈಗ ₹3,250 ಸಾವಿರ ದರ ಇದೆ. ಹೀಗಾಗಿ, ಮಾರುಕಟ್ಟೆಯಲ್ಲಿ ನಾವು ಕೆ.ಜಿ.ಗೆ ₹75 ಇಲ್ಲವೇ ₹80ಕ್ಕೆ ಮಾರಾಟ ಮಾಡಲೇಬೇಕಾದ ಅನಿವಾರ್ಯತೆ ಇದೆ’ ಎಂದು ಚಿತ್ರದುರ್ಗ ಮಾರುಕಟ್ಟೆಯ ಕೆಲ ತರಕಾರಿ ವ್ಯಾಪಾರಿಗಳು ತಿಳಿಸಿದರು.

***

ಪುಣೆ ಈರುಳ್ಳಿಗೆ ಬೇಡಿಕೆ

ಜಿಲ್ಲೆಯಲ್ಲಿ ಈರುಳ್ಳಿ ಬೆಳೆ ನಾಶವಾಗಿರುವ ಕಾರಣ ಪುಣೆ ಗೆಡ್ಡೆ ಅನಿವಾರ್ಯವಾಗಿದೆ. ಅಲ್ಲಿಂದ ನಿತ್ಯ 8ರಿಂದ 10 ಲೋಡ್‌ ಈರುಳ್ಳಿ ಚಿತ್ರದುರ್ಗದ ಮಾರುಕಟ್ಟೆಗೆ ಬರುತ್ತಿದೆ. ಈಗಾಗಲೇ ಪುಣೆ ಈರುಳ್ಳಿ ಸಂಗ್ರಹಿಸಿ ಇಟ್ಟುಕೊಂಡ ಮಾರಾಟಗಾರರು ಲಾಭದ ನಿರೀಕ್ಷೆಯಲ್ಲಿ ಇದ್ದಾರೆ. ಅಳಿದುಳಿದ ಈರುಳ್ಳಿಯನ್ನು ಸ್ಥಳೀಯ ರೈತರು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

***

ಬೆಳೆ ನಾಶದಿಂದಾಗಿ ಡಿಸೆಂಬರ್ ಅಂತ್ಯದವರೆಗೂ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ತೀರಾ ಕಡಿಮೆ. ಕೆಲವೇ ದಿನಗಳಲ್ಲಿ ₹ 100 ಆದರೂ ಅಚ್ಚರಿ ಇಲ್ಲ. ಬೆಲೆ ಏರಿಕೆ ಕಾರಣಕ್ಕೆ ಈರುಳ್ಳಿ ಮಾರಾಟ ಮಾಡುತ್ತಿಲ್ಲ.

ರವಿ, ತರಕಾರಿ ವ್ಯಾಪಾರಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT