ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಪ್ರತಿ ಟನ್ ಒಣಗಿರುವ ಕೋಳಿ ಗೊಬ್ಬರದ ದರ ₹ 2,300-– ₹ 2,600

ಕೋಳಿ ಗೊಬ್ಬರ ಬೇಡಿಕೆ ಹೆಚ್ಚಳ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಅಗತ್ಯವಿರುವ ಕೋಳಿ ಗೊಬ್ಬರ ವಿಲೇವಾರಿ
ಸಹ ಕಳೆದ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಸ್ವಲ್ಪ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿ ಸಾಕಣೆ ಮಾಡಲಾಗುತ್ತಿದೆ. ಮೊಟ್ಟೆ ಹಾಗೂ ಮಾಂಸದ ಕೋಳಿ ಎರಡನ್ನೂ ಮಾಡಲಾಗುತ್ತಿದೆ. 20 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳ ಸಾಕಣೆ ಮಾಡಲಾಗುತ್ತಿದೆ.

‘ಕೊಂಡ್ಲಹಳ್ಳಿ, ಮೊಳಕಾಲ್ಮುರು, ಬೈರಾಪುರ, ಹಾನಗಲ್, ಮೊಗಲಹಳ್ಳಿ, ರಾವಲಕುಂಟೆ, ಬಿ.ಜಿ. ಕೆರೆ, ಕೋಡಿಹಳ್ಳಿ, ಹಿರೇಹಳ್ಳಿ, ಹನುಮಂತನಹಳ್ಳಿ, ತಳಕು, ಕೋನಸಾಗರ ಗ್ರಾಮಗಳಲ್ಲಿ ಕೋಳಿ ಸಾಕಣೆ ಘಟಕಗಳು ಇವೆ. 15 ವರ್ಷಗಳ ಹಿಂದೆ ಕೋಳಿ ಗೊಬ್ಬರ ಎಂದರೆ ಅಸಹ್ಯ ಪಟ್ಟುಕೊಳ್ಳುವ ಕಾಲವತ್ತು. ಆಗ ಗೊಬ್ಬರ ವಿಲೇವಾರಿ ಹೇಗಪ್ಪಾ ಎಂಬ ಸಮಸ್ಯೆ ಕಾಡುತ್ತಿತ್ತು. ಆದರೆ ಸಗಣಿ ಗೊಬ್ಬರ ದೊರೆಯುವುದು ಕಡಿಮೆಯಾಗುತ್ತಿರುವ ಪರಿಣಾಮವಾಗಿ ಆ ಸ್ಥಾನವನ್ನು ಪರೋಕ್ಷವಾಗಿ ಕೋಳಿ ಗೊಬ್ಬರ ತುಂಬಿದೆ. ಹೀಗಾಗಿ ಮುಂಗಾರು ಕೃಷಿಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ’ ಎಂದು ಕೋಳಿ ಫಾರಂ ಮಾಲೀಕ ತಿಪ್ಪೇಸ್ವಾಮಿ ಹೇಳಿದರು.

‘ಆರಂಭದಲ್ಲಿ ಪ್ರತಿ ಟನ್ ಗೊಬ್ಬರ ದರ ₹ 200-300ರ ಅಸುಪಾಸಿನಲ್ಲಿ ಇತ್ತು. 4-5 ವರ್ಷಗಳಿಂದ ಬೇಡಿಕೆ ಹೆಚ್ಚಳವಾಗಿದೆ. ಅಡಿಕೆ, ದಾಳಿಂಬೆ, ತೆಂಗು, ಸಪೋಟಾ, ಈರುಳ್ಳಿಯಂತಹ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಕೋಳಿಗೊಬ್ಬರ ಪೂರ್ಣವಾಗಿ
ಸಾವಯವ ಗೊಬ್ಬರವಾಗಿದೆ. ಹಾಕಿದ ನಂತರ ಸ್ವಲ್ಪ ಹೆಚ್ಚು ನೀರು ಹಾಯಿಸಿದಲ್ಲಿ ಇಳುವರಿ ಉತ್ತಮವಾಗಿ ಬರುತ್ತದೆ. ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕುಗಳಲ್ಲಿ ಮಾತ್ರ ಈ ಗೊಬ್ಬರ ಬಳಸಲಾಗುತ್ತಿತ್ತು. ಈಗ ಸುತ್ತಮುತ್ತಲ ಜಿಲ್ಲೆಯವರೂ ಬಳಸುತ್ತಿದ್ದಾರೆ’ ಎಂದರು.

ಪ್ರಸ್ತುತ ಪ್ರತಿ ಟನ್ ಒಣಗಿರುವ ಕೋಳಿ ಗೊಬ್ಬರ ₹ 2,300ರಿಂದ ₹ 2,600 ಆಸುಪಾಸಿನಲ್ಲಿ ನಡೆಯುತ್ತಿದೆ. ಬೇಡಿಕೆ ಸಿಕ್ಕಾಪಟ್ಟೆ ಇದೆ. ದರ ಹೆಚ್ಚಳ ಮಾಡಿದರೂ ಕೊಂಡುಕೊಳ್ಳುತ್ತಾರೆ. ಆದರೆ, ಕೋಳಿ ಫಾರಂ ಮಾಲೀಕರು ದರ ಹೆಚ್ಚಳ ಮಾಡದೇ, ಕೊಳ್ಳುವವರು ಸಹ
ರೈತರೇ ಎಂದು ಅನುಸರಿಸಿಕೊಂಡು ನೀಡುತ್ತಿದ್ದಾರೆ. ಕಳೆದ ವರ್ಷವೂ ಇದೇ ದರವಿತ್ತು. ಬೇಡಿಕೆ ಮಾತ್ರ ಈ ವರ್ಷ ದುಪ್ಪಟ್ಟಾಗಿದೆ’ ಎಂದು ಮೊಗಲಹಳ್ಳಿ ಕೋಳಿ ಸಾಕಣೆದಾರ ಮತ್ತು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಆರ್. ರಾಮರೆಡ್ಡಿ
ತಿಳಿಸಿದರು.

‘ಇಲ್ಲಿಂದ ಚಿಕ್ಕಮಗಳೂರು, ಮಂಗಳೂರು, ಕಾಸರಗೋಡು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿಗೂ ರವಾನೆಯಾಗುತ್ತದೆ. ಪ್ಯಾಕೆಟ್‌ಗಳಲ್ಲಿ ತುಂಬಿ ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಸ್ಥಳೀಯವಾಗಿ ಟ್ರ್ಯಾಕ್ಟರ್‌ಗಳಲ್ಲಿ ಸಾಗಣೆ ಮಾಡಲಾಗುತ್ತಿದೆ’ ಎಂದು ಮತ್ತೊಬ್ಬ ಫಾರಂ ಮಾಲೀಕ ಹನುಮಂತ ರೆಡ್ಡಿ ತಿಳಿಸಿದರು.

ಎಚ್ಚರಿಕೆ ವಹಿಸಲಿ

‘ಕೋಳಿಗೊಬ್ಬರ ಸಾಗಣೆಯನ್ನು ವೈಜ್ಞಾನಿಕವಾಗಿ ಮಾಡಬೇಕು. ಕೆಲವರು ಬೇಕಾಬಿಟ್ಟಿ ತುಂಬಿಕೊಂಡು ಹೋಗುತ್ತಾರೆ. ಈ ಸಮಯದಲ್ಲಿ ದಾರಿಯುದ್ದಕ್ಕೂ ದುರ್ವಾಸನೆ ಬೀರುತ್ತದೆ. ಜೊತೆಗೆ ಅಲ್ಲಲ್ಲಿ ಬೀಳುತ್ತಿದೆ. ಇದರಿಂದಾಗಿ ನೊಣಗಳ ಕಾಟ ಹೆಚ್ಚಳವಾಗುತ್ತಿದೆ ಎಂಬ ದೂರು ಬರುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಲೋಡ್ ಮಾಡುವಾಗ ಜಾಗ್ರತೆ ವಹಿಸಬೇಕು. ಇದಕ್ಕೆ ಕೋಳಿ ಫಾರಂ ಮಾಲೀಕರು ಕೈಜೋಡಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

------

ತೋಟಗಾರಿಕೆ ಬೆಳೆಗಳಿಗೆ ಅಗತ್ಯವಿರುವ ಬಹುತೇಕ ಪೋಷಕಾಂಶಗಳು ಕೋಳಿಗೊಬ್ಬರದಲ್ಲಿದೆ. ಸಾರಜನಕ ಹೆಚ್ಚಾಗಿದೆ. ಆದ್ದರಿಂದ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

-ಆರ್. ವಿರೂಪಾಕ್ಷಪ್ಪ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು