ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆನಾಡಲ್ಲಿ ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಗುರುವಂದನೆ ಸಮಾರಂಭ
Last Updated 19 ಅಕ್ಟೋಬರ್ 2021, 6:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಜನರ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣ ಮಾಡಲಾಗುವುದು. ಇದಕ್ಕೆ ಅಗತ್ಯವಿರುವ ಒಂದೂವರೆ ಸಾವಿರ ಎಕರೆ ಭೂಮಿ ಗುರುತಿಸಿದ ಬಳಿಕ ಯೋಜನೆಯ ರೂಪುರೇಷೆ ಸಿದ್ಧವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ 30ನೇ ವರ್ಷದ ಪೀಠಾರೋಹಣದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಗುರುವಂದನೆ ಸಮಾರಂಭದಲ್ಲಿ ‘ಬಸವಭೂಷಣ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಮುಂಬೈ–ಚೆನ್ನೈ ಕಾರಿಡಾರ್‌ ವ್ಯಾಪ್ತಿಗೆ ಚಿತ್ರದುರ್ಗವೂ ಒಳಪಡುತ್ತದೆ. ತುಮಕೂರು ಸೇರಿ ಹಲವೆಡೆ ಇಂತಹ ಟೌನ್‌ಶಿಪ್‌ ನಿರ್ಮಾಣ ಮಾಡಲಾಗುತ್ತಿದೆ. ಇಂತಹದೇ ಟೌನ್‌ಶಿಪ್‌ ಚಿತ್ರದುರ್ಗದಲ್ಲಿ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇದಕ್ಕೆ ಅಗತ್ಯವಿರುವ ಭೂಮಿಯನ್ನು ಗುರುತಿಸಿ’ ಎಂದು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಸೂಚನೆ ನೀಡಿದರು.

‘ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡರೆ ಜನರಿಗೆ ಅನುಕೂಲವಾಗಲಿದೆ. ಇದು ದೊಡ್ಡ ಯೋಜನೆಯಾಗಿದ್ದು, ರಾಷ್ಟ್ರೀಯ ಯೋಜನೆ ಆಗುವ ಕೊನೆಯ ಹಂತದಲ್ಲಿದೆ. ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದರೆ ರಾಷ್ಟ್ರೀಯ ಯೋಜನೆ ಆಗಲಿದೆ’ ಎಂದು
ಹೇಳಿದರು.

‘ಭದ್ರಾ ಮೇಲ್ದಂಡೆ ಯೋಜನೆ ಎಸ್‌.ನಿಜಲಿಂಗಪ್ಪ ಅವರ ಕಾಲದಿಂದಲೂ ನನೆಗುದಿಗೆ ಬಿದ್ದಿತ್ತು. ಹೋರಾಟವನ್ನೇ ಬದುಕಾಗಿ ರೂಪಿಸಿಕೊಂಡ ಬಿ.ಎಸ್‌. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗೆ ಅನುಮೋದನೆ ನೀಡಿದರು. ಬರದ ನಾಡು ಎಂಬ ಅಪಖ್ಯಾತಿಗೆ ಒಳಗಾದ ಚಿತ್ರದುರ್ಗ ಜಿಲ್ಲೆಯ ನಿಜಕ್ಕೂ ಭಗೀರಥ ಆಗಿದ್ದಾರೆ’ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ಬಸವಣ್ಣನ ಪ್ರತಿಮೆ ನಿರ್ಮಾಣಕ್ಕೆ₹ 20 ಕೋಟಿ ಅನುದಾನ ಬಿಡುಗಡೆ ಮಾಡುವ ಅಶ್ವಾಸನೆ ನೀಡಿದ್ದೆ. ಇದರಲ್ಲಿ ₹ 5 ಕೋಟಿ ಬಿಡುಗಡೆ ಆಗಿದೆ. ಇನ್ನು ಮುಂದಿನ ಅನುದಾನವನ್ನು ಬೊಮ್ಮಾಯಿ ಬಿಡುಗಡೆ ಮಾಡುವ ವಿಶ್ವಾಸವಿದೆ’ ಎಂದುಹೇಳಿದರು.

‘ಶತಮಾನಗಳ ಹಿಂದೆ ಸಮಾನತೆ ತರಲು ಹುಟ್ಟಿಕೊಂಡಿದ್ದು ಶರಣ ಚಳವಳಿ. ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ಧ 12ನೇ ಶತಮಾನದಲ್ಲಿ ವಚನ ಚಳವಳಿ ಹುಟ್ಟಿಕೊಂಡಿತ್ತು. ಸರಳ ಜೀವನ ಬೋಧನೆ ಮಾಡಿದ ಬಸವಣ್ಣ ಸರ್ವಕಾಲಕ್ಕೂ ಆದರ್ಶವಾಗಿದ್ದಾರೆ. ಮಾನವೀಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಪರಂಪರೆಯನ್ನು ಸ್ಮರಿಸುವ ಉತ್ಸವ ಚಿತ್ರದುರ್ಗದಲ್ಲಿ ನಡೆಯುತ್ತಿರುವು ಅಭಿನಂದನಾರ್ಹ’ ಎಂದು ಹೇಳಿದರು.

‘ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿದ್ದು ಶರಣರು’: ಬಸವಣ್ಣ ಅವರು ಸಮಾ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಬ್ರಿಟಿಷರು ತೊಲಗಿದ ಬಳಿಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ, ಕರ್ನಾಟಕದ ಶೋಷಿತ ಸಮುದಾಯಗಳಿಗೆ ಶಿವಮೂರ್ತಿ ಮುರುಘಾ ಶರಣರು ಪೀಠಕ್ಕೆ ಬಂದ ಬಳಿಕ ಸ್ವಾತಂತ್ರ್ಯ ಸಿಕ್ಕಿತು. ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ ಅವರಿಗೆ ಸಾಕಷ್ಟು ವಿರೋಧವೂ ವ್ಯಕ್ತವಾಯಿತು ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

‘ದಶಕಗಳ ಹಿಂದೆ ತಳ ಸಮುದಾಯಗಳಿಗೆ ಸಂಸ್ಕಾರ ಇರಲಿಲ್ಲ. ಧಾರ್ಮಿಕ ಭಾವನೆ ಜಾಗೃತ ಆಗಿರಲಿಲ್ಲ. ಇಂತಹ ಸಂದರ್ಭದಲ್ಲಿ ದೀಕ್ಷೆ ಪಡೆದ ನಾವು ಸಮುದಾಯ ಸಂಘಟನೆಗೆ ಮುಂದಾದೆವು. ಆಗ ನಮ್ಮ ಬರಿಗೈ ನೋಡಿದ ಶರಣರು ದೀಕ್ಷೆ ನೀಡಿದ ಎಲ್ಲ ಮಠಾಧೀಶರಿಗೆ ತಲಾ ಐದು ಎಕರೆ ಭೂಮಿ ನೀಡಿ ಪ್ರೋತ್ಸಾಹಿಸಿದರು’ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ‘ಶರಣಶ್ರೀ’ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ‘ಬಸವಭೂಷಣ’ ಪ್ರಶಸ್ತಿ ಪ್ರದಾನಮಾಡಲಾಯಿತು.

ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ, ‘ಕನ್ನಡಪ್ರಭ’ ಪತ್ರಿಕೆ ಸಂಪಾದಕ ರವಿ ಹೆಗಡೆ, ಇಂಡಿಯನ್‌ ಎಕ್ಸ್‌ಪ್ರೆಸ್‌ ಸ್ಥಾನಿಕ ಸಂಪಾದಕರಾದ ಸಾಂತ್ವನ ಭಟ್ಟಾಚಾರ್ಯ, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್‌.ನವೀನ್‌ ಇದ್ದರು.

ಸಮಾನತೆಯ ದಿನಾಚರಣೆ: ಭರವಸೆ

ಶಿವಮೂರ್ತಿ ಮುರುಘಾ ಶರಣರ ಜನ್ಮದಿನವನ್ನು ಸರ್ಕಾರ ಸಮಾನತೆಯ ದಿನನ್ನಾಗಿ ಘೋಷಣೆ ಮಾಡಬೇಕು ಎಂದು ಉತ್ಸವ ಸಮಿತಿ ಕೋರಿಕೊಂಡಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

‘12ನೇ ಶತಮಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು 21ನೇ ಶತಮಾನದಲ್ಲಿ ಶಿವಮೂರ್ತಿ ಮುರುಘಾ ಶರಣರು ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಮುರುಘಾ ಶರಣರ 30 ವರ್ಷದ ಅನುಭವದ ಬುತ್ತಿ ಸಮಾಜಕ್ಕೆ ಸಿಗಬೇಕಿದೆ. ಮೌಢ್ಯಗಳ ವಿರುದ್ಧ ಅವರ ಹೋರಾಟ, ದೀನ ದಲಿತರ ಬಗ್ಗೆ ಅವರಿಗೆ ಇರುವ ಪ್ರೀತಿ ಅನನ್ಯ’ ಎಂದು ಹೇಳಿದರು.

ಬೆಳ್ಳಿ ಪುತ್ಥಳಿ, ‍ಪುಷ್ಪ ಸಮರ್ಪಣೆ

ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರಿಗೆ 20 ಕೆ.ಜಿ ತೂಕದ ಪುತ್ಥಳಿ ಹಾಗೂ 30 ವಿಧದ ಪುಷ್ಪಗಳನ್ನು ಅರ್ಪಿಸಲಾಯಿತು.

30ನೇ ವರ್ಷದ ಪೀಠಾರೋಹಣದ ಅಂಗವಾಗಿ ಶರಣ ಸಂಸ್ಕೃತಿ ಉತ್ಸವ ಸಮಿತಿ ಬೆಳ್ಳಿ ಪುತ್ಥಳಿ ಸಮರ್ಪಿಸಿತು. ಇದು ಸುಮಾರು 21 ಇಂಚು ಎತ್ತರವಿದೆ.

ರಾಜ್ಯದ ವಿವಿಧೆಡೆಯಿಂದ ತಂದಿದ್ದ ತರಹೇವಾರಿ ಪುಷ್ಪಗಳನ್ನು ಶಿವಮೂರ್ತಿ ಮುರುಘಾ ಶರಣರ ಪಾದಕ್ಕೆ ಅರ್ಪಿಸಲಾಯಿತು. ತಾವರೆ, ದುಂಡು ಮಲ್ಲಿಗೆ, ಕನಕಾಂಬರ, ನೀಲಿ ಸೇವಂತಿ, ಗುಲಾಬಿ, ಮೊಗ್ಗು, ಪನ್ನಿರು ಲೋಚ್‌, ಡೇರೆ ಹೂ, ದಾಸವಾಳ, ಪಾರಿಜಾತ, ಸಂಪಿಗೆ, ಸೂಜಿಮಲ್ಲಿಗೆ, ಪತ್ರೆ, ಚಂಪಸೇವಂತಿ, ನೀಲಾಂಬರಿ, ಕೆಂಪು ಕಣಗಲೆ, ಪುಟಾಣಿ ಕೆಂಪು ಗುಲಾಬಿ, ರುದ್ರಾಕ್ಷಿ, ತುಳಸಿ ಹೂ, ಘಂಟೆ ಹೂ, ಸುಗಂಧರಾಜ, ಚಂಡುಹೂ ಇದ್ದವು.

ಸರ್ಕಾರಕ್ಕೆ ಚಾಟಿ ಬೀಸಿದ ಶರಣರು

ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಚಿತ್ರದುರ್ಗದ ಶಾಸಕರು ಹಾಗೂ ಸಂಸದರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದರು.

‘ಚಿತ್ರದುರ್ಗ ಬರದ ನಾಡು. ಜನಸಾಮಾನ್ಯರ ಜೀವನ ತುಂಬಾ ಅಸ್ತವ್ಯಸ್ತವಾಗಿದೆ. ಬಜೆಟ್‌ನಲ್ಲಿ ಚಿತ್ರದುರ್ಗವನ್ನು ಪರಿಗಣಿಸುತ್ತಿಲ್ಲ. ಜನರ ನೋವು, ವ್ಯಥೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಶಾಸಕರು ಮತ್ತು ಸಂಸದರು ಜಾಗೃತ ಆಗಬೇಕು. ಎಷ್ಟು ವರ್ಷ ಇಂತಹ ನೋವು ಅನುಭವಿಸಿಕೊಂಡು ಇರುವುದು’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿದ್ದಾರೆ. ಆದರೆ, ಅವರಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ಬಿ. ಶ್ರೀರಾಮುಲು ಅವರು ಮಠದ ಅನನ್ಯ ಭಕ್ತರು. ಅವರು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಜಿಲ್ಲೆಯ ಅಭಿವೃದ್ಧಿಗೆ ಗಟ್ಟಿತನ ತೋರಬೇಕಿತ್ತು. ಇದು ಸ್ಮಾರ್ಟ್‌ ಸಿಟಿಯೂ ಆಗಿಲ್ಲ; ಇಲ್ಲಿಗೆ ಯಾವ ಕಾರಿಡಾರ್‌ ಕೂಡ ಬಂದಿಲ್ಲ’ ಎಂದು ಬೇಸರ ಹೊರಹಾಕಿದರು.

‘ಜಿಲ್ಲೆಯ ಮತದಾರರು ಐದು ಜನ ಶಾಸಕರನ್ನು ಗೆಲ್ಲಿಸಿದ್ದಾರೆ. ಆದರೂ, ಜಿಲ್ಲೆ ನಿತ್ಯ ಅಧೋಗತಿಗೆ ಹೋಗುತ್ತಿದೆ. ಜನರೊಂದಿಗೆ ಸರ್ಕಾರ ಸಂಪರ್ಕ ಇಟ್ಟುಕೊಂಡು ಅಭಿವೃದ್ಧಿಯತ್ತ ಶ್ರಮಿಸಬೇಕು. ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಬಳಕೆ ಆಗಬೇಕು’ ಎಂದು ಸಲಹೆ ನೀಡಿದರು.

.........

ಬೊಮ್ಮಾಯಿ ಅದೃಷ್ಟದ ಮುಖ್ಯಮಂತ್ರಿ. ಬಿ.ಎಸ್‌. ಯಡಿಯೂರಪ್ಪ ಅನುಭವಿ ಮುಖ್ಯಮಂತ್ರಿ. ಅದೃಷ್ಟ ಮತ್ತು ಅನುಭವ ಎರಡೂ ಸೇರಿ ಕರ್ನಾಟಕಕ್ಕೆ ಉಜ್ವಲ ಕೊಡುಗೆ ನೀಡಲಿ.

- ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT